ಸೊಳ್ಳೆ ನಿಯಂತ್ರಣಗಾರರ ವಜಾ ಖಂಡಿಸಿ ನ.15 ರಂದು 'ತಮಟೆ ಚಳವಳಿ'
ಬೆಂಗಳೂರು, ನ.14: ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಸೊಳ್ಳೆ ನಿಯಂತ್ರಣ ಕೆಲಸಗಾರರನ್ನು ಯಾವುದೇ ಕಾರಣ ನೀಡದೆ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ(ವಿಮೋಚನಾ ವಾದ) ನ.15 ರಂದು ನಗರದ ಪಾಲಿಕೆಯ ಕೇಂದ್ರ ಕಚೇರಿ ಎದುರು ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಸ್ಥಾಪಕ ಅಧ್ಯಕ್ಷ ಆರ್. ಗುರುಮೂರ್ತಿ, ಬೊಮ್ಮನಹಳ್ಳಿ ವಿಭಾಗದ ಆರೋಗ್ಯಾಧಿಕಾರಿ ಡಾ.ಸವಿತಾ ಎಂಬವರು ಹಲವಾರು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಈ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ನಿವೃತ್ತ ಪೌರ ಕಾರ್ಮಿಕರಿಗೆ ನೀಡಿದ್ದ ಸೊಳ್ಳೆ ನಿಯಂತ್ರಣ ಗುತ್ತಿಗೆಯನ್ನು ಯಾವುದೇ ಕಾರಣ ನೀಡದೆ ರದ್ದು ಪಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಅನುಭವವಿಲ್ಲದ ಬಲಿಷ್ಠ ವ್ಯಕ್ತಿಗಳ ಜೊತೆ ಶಾಮೀಲಾಗಿ ಒಂದು ವಾರ್ಡಿಗೆ ಪ್ರತಿತಿಂಗಳು 39 ಸಾವಿರದಷ್ಟು ವೆಚ್ಚವಾಗುವ ಕೆಲಸಗಳನ್ನು ಬೋಗಸ್ ಅಧಿಸೂಚನೆ ನೀಡಿ 95 ಸಾವಿರಕ್ಕೆ ಹೆಚ್ಚಳ ಮಾಡಿ ಕಾರ್ಯಾದೇಶಗಳನ್ನು ನೀಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ, ಸೊಳ್ಳೆ ನಿಯಂತ್ರಣ ಕಾರ್ಯಗಳು ನಡೆಯದಿದ್ದರೂ ಸವಿತಾರವರು ತಮ್ಮ ಕೆಳಗಿನ ನೌಕರ ಅಥವಾ ಅಧಿಕಾರಿಗಳನ್ನು ಹೆದರಿಸಿ ಸಹಿ ಹಾಕಿಸಿ ಬಿಲ್ಲುಗಳನ್ನು ಪಡೆದಿದ್ದಾರೆ ಎಂದು ದೂರಿದರು.
ಬೊಮ್ಮನಹಳ್ಳಿ ವಿಭಾಗದ 10 ವಾರ್ಡ್‌ಗಳಿಗೆ ಟೆಂಡರ್ ಕರೆಯುವ ನಾಟಕವಾಡಿ ಬಲಿಷ್ಠ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಷರತ್ತುಗಳು ವಿಧಿಸಿ ಪರಿಶಿಷ್ಟರಿಗೆ ಯಾವುದೇ ಮೀಸಲಾತಿ ಹಾಗೂ ಸಡಿಲಿಕೆ ಕಲ್ಪಿಸದೆ ಉದ್ದೇಶ ಪೂರ್ವಕವಾಗಿ ಮೋಸ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಆದುದರಿಂದ ಪರಿಶಿಷ್ಟರಿಗೆ ಅನ್ಯಾಯ ಮಾಡಿರುವ ಡಾ.ಸವಿತಾರನ್ನು ಕೂಡಲೇ ಅಮಾನತುಗೊಳಿಸಬೇಕು ಹಾಗೂ ರದ್ಧು ಮಾಡಿರುವ ಸೊಳ್ಳೆ ನಿಯಂತ್ರಣ ಕೆಲಸಗಳ ಗುತ್ತಿಗೆ ಮುಂದುವರಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಜೀವನಹಳ್ಳಿ ನಾರಾಯಣ, ಜಿಲ್ಲಾ ಮುಖಂಡ ನಾರಾಯಣಸ್ವಾಮಿ, ಎನ್.ಗೋಪಾಲ್, ಎನ್.ಓಬಳಪತಿ, ಕೆ.ರಾಜಶೇಖರ್ ಉಪಸ್ಥಿತರಿದ್ದರು.