×
Ad

ಟಿಪ್ಪು ಮರಿಮೊಮ್ಮಕ್ಕಳಿಗೆ 'ಸುಲ್ತಾನ್ ಏಕತಾ ಪ್ರಶಸ್ತಿ' ಪ್ರದಾನ

Update: 2017-11-14 18:49 IST

ಬೆಂಗಳೂರು, ನ.14: ಟಿಪ್ಪು ಜನ್ಮದಿನಾಚರಣೆ ಅಂಗವಾಗಿ ಅಖಿಲ ಕರ್ನಾಟಕ ಸೂಫಿ ಸಂತರ ಸಂಘ ಮತ್ತು ಟಿಪ್ಪು ಸುಲ್ತಾನರ ಸಂಘಟನೆಗಳ ಒಕ್ಕೂಟದ ವತಿಯಿಂದ ಟಿಪ್ಪುಸುಲ್ತಾನರ 8ನೆ ಪೀಳಿಗೆಯ ಮರಿಮೊಮ್ಮಕ್ಕಳಿಗೆ ಇಂದಿಲ್ಲಿ ಸುಲ್ತಾನ್ ಏಕತಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಕೀಲ ಎಂ.ಎಸ್.ಮುಕರಂ, ಟಿಪ್ಪುವಿನ 8ನೆ ಮರಿಮೊಮ್ಮಕ್ಕಳಾದ ಬಿಲಾಲ್ ಆಲಿ ಷಾ ಸುಲ್ತಾನ್ ಮತ್ತು ಫರಾಜ್ ಅಲಿಷಾ ಸುಲ್ತಾನ್‌ರನ್ನು ಜೂನಿಯರ್ ಟಿಪ್ಪು ಸುಲ್ತಾನ್ ಎಂದು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಟಿಪ್ಪು ಸುಲ್ತಾನ್‌ರ ಕುಟುಂಬಸ್ಥರಿಗೆ ಸರಕಾರದಿಂದ ನೀಡುವ ಸ್ವಾತಂತ್ರ ಹೋರಾಟಗಾರರಿಗೆ ಸಿಗುವ ಸೌಲಭ್ಯ ಹಾಗೂ ಸಹಕಾರ ಸಿಕ್ಕಿಲ್ಲ. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ವೇಳೆ ಆಸೀಫ್ ಅಲಿ ಷಾ ಅವರು ಹಲವು ಹಕ್ಕೊತ್ತಾಯಗಳನ್ನು ಸಲ್ಲಿಸಿದ್ದರು. ಈ ವೇಳೆ ಅದನ್ನು ಈಡೇರಿಸುವ ಭರವಸೆ ನೀಡಿದ್ದರೂ, ಅದು ಸಾಧ್ಯವಾಗಿರಲಿಲ್ಲ. ಅನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದ ವೇಳೆಯಲ್ಲಿಯೂ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೆ, ಅವರು ಅದನ್ನು ಮಾಡಿರಲಿಲ್ಲ ಎಂದು ತಿಳಿಸಿದರು.

ಇದೀಗ ರಾಜ್ಯದಲ್ಲಿ ಅಹಿಂದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಟಿಪ್ಪು ಬಗ್ಗೆ ಅಪಾರವಾದ ಗೌರವವುಳ್ಳವರಾಗಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ಟಿಪ್ಪು ಕುಟುಂಬದವರನ್ನು ಬೆಂಗಳೂರಿಗೆ ಕರೆಯಿಸಿಕೊಳ್ಳಬೇಕು ಹಾಗೂ ಅವರಿಗೆ ಸರಕಾರದಿಂದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, ಸೂಫಿ ಸಂತರ ಸಂಘದ ಸಂಚಾಲಕ ಸೂಫಿ ವಲಿಬಾ, ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಾ.ಗುಲ್ಷಾದ್ ಅಹ್ಮದ್, ಆಟೊರಿಕ್ಷಾಚಾಲಕರ ಸಂಘದ ಅಧ್ಯಕ್ಷ ಶೇಖ್ ಅಹ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News