ಕಲಾಪದಲ್ಲಿ ಭಾಗವಹಿಸದವರು ಶಾಸಕ, ಸಂಸದರಾಗಲು ಅನರ್ಹರು: ಬಿ.ಎಲ್.ಶಂಕರ್
ಬೆಂಗಳೂರು, ನ.13: ವಿಧಾನಮಂಡಲ ಹಾಗೂ ಸಂಸತ್ ಅಧಿವೇಶನದ ಕಲಾಪಗಳಲ್ಲಿ ಭಾಗವಹಿಸದವರು ಶಾಸಕ, ಸಂಸದರಾಗುವುದಕ್ಕೆ ಯಾವುದೇ ಅರ್ಹತೆಯಿರುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಅಭಿಪ್ರಾಯಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಜವಹರಲಾಲ್ ನೆಹರೂ ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆಹರೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಜನಪ್ರತಿನಿಧಿಗಳು ಸಂಸದೀಯ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಕಲಾಪಗಳಿಗೆ ಗೈರು ಆಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಬೆಳಗ್ಗೆ 11ಕ್ಕೆ ಅಧಿವೇಶನ ಆರಂಭವಾದರೆ ಅಧಿವೇಶನ ಮುಗಿಯುವವರೆಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ತಮ್ಮ ವಿಷಯ ಕುರಿತ ಚರ್ಚೆ ಇಲ್ಲದ ಸಮಯದಲ್ಲಿಯೂ ಇತರೆ ಸಚಿವರ ಚರ್ಚೆಗಳನ್ನು ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದಾರೆ. ಅಗತ್ಯವಿದ್ದಾಗ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿದ್ದರು. ಆದರೆ, ಪ್ರಸ್ತುತ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕಲಾಪಗಳ ಹಾಜರಾತಿಯನ್ನು ಗಮನಿಸಿದರೆ, ಕಳೆದ 40-50ವರ್ಷಗಳಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗೆ ದುರ್ಬಲತೆಯತ್ತ ಸಾಗುತ್ತಿದೆ ಎಂಬುದಕ್ಕೆ ಒಂದು ಸೂಚನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಯುವ ವಯಸ್ಸಿನಲ್ಲಿಯೇ ಸಂಸದರಾಗಿ ಆಯ್ಕೆಯಾಗಿದ್ದ ಅಟಲ್‌ಬಿಹಾರಿ ವಾಜಪೇಯಿರವರ ಮಾತಿನ ಪ್ರಕರತೆಯನ್ನು ಗಮನಿಸಿದ ನೆಹರೂ ಭವಿಷ್ಯದಲ್ಲಿ ಪ್ರಧಾನಿಯಾಗುವ ಎಲ್ಲ ಅರ್ಹತೆಗಳಿವೆ ಎಂದು ಬೆನ್ನುತಟ್ಟಿದ್ದರು. ಸದನಗಳಲ್ಲಿ ವೈಯಕ್ತಿಕ ನಿಂದನೆ, ಸ್ವಜನಪಕ್ಷಪಾತಕ್ಕೆ ಅವಕಾಶವೇ ಇಲ್ಲದಂತೆ ನೆಹರೂ ತಮ್ಮ ಆಡಳಿತವನ್ನು ನಡೆಸಿದ್ದರು. ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಪೂರಕವಾಗಿರುವಂತಹ ಎಚ್‌ಎಎಲ್, ಬಿಎಚ್‌ಇಎಲ್, ಬಿಇಎಲ್‌ನಂತಹ ಬೃಹತ್ ಕಂಪೆನಿಗಳು ಬಾಕ್ರಾ ನಂಗಲ್ ಸೇರಿದಂತೆ ದೇಶಾದ್ಯಂತ ಹಲವು ಬೃಹತ್ ಅಣೆಕಟ್ಟುಗಳನ್ನು ಕಟ್ಟಿದರು. ಇವತ್ತು ದೇಶ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದರೆ ನೆಹರೂರವರ ದೂರದರ್ಶಿತ್ವವನ್ನು ನಾವು ನೆನೆಯಬೇಕಾಗುತ್ತದೆ ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್, ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
'ಕಾಂಗ್ರೆಸ್ ಪ್ರತಿ ಪಕ್ಷಗಳನ್ನು ಗೌರವಿಸುತ್ತದೆ'
ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳಿಗೆ ಆಡಳಿತ ಪಕ್ಷಕ್ಕಿರುವಷ್ಟೇ ಜವಾಬ್ದಾರಿಗಳಿವೆ. ಆದರೆ, ಬಿಜೆಪಿ ‘ಕಾಂಗ್ರೆಸ್ ಮುಕ್ತ ಭಾರತ’ ಮಾಡ್ತೀವಿ ಎಂದು ಹೇಳುತ್ತಾ ದೇಶಾದ್ಯಂತ ತಿರುಗಾಡುತ್ತಿದೆ. ಆದರೆ, ನಾವು ಪ್ರತಿಪಕ್ಷಗಳನ್ನು ಗೌರವಿಸುತ್ತಲೇ ಹಸಿವು ಮುಕ್ತ, ಶೋಷಣೆ ಮುಕ್ತ ಭಾರತ ಮಾಡಲು ಹೊರಟ್ಟಿದ್ದೇವೆ.-ಬಿ.ಎಲ್.ಶಂಕರ್, ಉಪಾಧ್ಯಕ್ಷ ಕೆಪಿಸಿಸಿ