ರಾಜ್ಯ ಸರಕಾರದಿಂದ ಸಂಪೂರ್ಣ ಬೆಂಬಲ ನೀಡಲು ರಾಜ್ಯ ನಿವೃತ್ತ ಕುಲಪತಿಗಳ ವೇದಿಕೆ ಆಗ್ರಹ
ಬೆಂಗಳೂರು, ನ. 14: ಮೈಸೂರು ವಿಶ್ವವಿದ್ಯಾನಿಲಯವು ಶ್ರೇಷ್ಠ ಶೈಕ್ಷಣಿಕ ಸಂಸ್ಥೆ ಎಂದು ಮಾನ್ಯತೆ ಪಡೆಯಲು ಮಾಡುತ್ತಿರುವ ಪ್ರಯತ್ನಕ್ಕೆ ಕರ್ನಾಟಕ ಸರಕಾರ ಎಲ್ಲ ರೀತಿಯ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ರಾಜ್ಯ ನಿವೃತ್ತ ಕುಲಪತಿಗಳ ವೇದಿಕೆ ಆಗ್ರಹಿಸಿದೆ.
ನಗರದಲ್ಲಿಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ, ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ(ಯುಜಿಸಿ) ದೇಶದಲ್ಲಿ 20 ವಿಶ್ವವಿದ್ಯಾನಿಲಯಗಳನ್ನು ಶ್ರೇಷ್ಠ ಶೈಕ್ಷಣಿಕ ಸಂಸ್ಥೆಗಳು ಎಂದು ಗುರುತಿಸುತ್ತಿದ್ದು, ಇದರಲ್ಲಿ 10ನ್ನು ಸರಕಾರಿ ಕ್ಷೇತ್ರದಲ್ಲಿ ಹಾಗೂ 10 ಖಾಸಗಿ ಕ್ಷೇತ್ರದಲ್ಲಿ ಆಯ್ಕೆ ಮಾಡುವ ಯೋಜನೆಯಿದ್ದು, ಇವುಗಳಿಗೆ ಹೆಚ್ಚಿನ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣೆ ಸ್ವಾಯತ್ತತೆ ನೀಡಲಾಗುತ್ತದೆ. ಅಲ್ಲದೆ, ಸರಕಾರಿ ಕ್ಷೇತ್ರದ ವಿವಿಗಳಿಗೆ 1 ಸಾವಿರ ಕೋಟಿ ರೂ. ಅನುದಾನ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಉತ್ತಮ ವಿವಿ ಪಟ್ಟಿಗೆ ಸೇರ್ಪಡೆ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಮೈಸೂರು ವಿವಿ 1916 ರಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ಸ್ಥಾಪಿಸಿದ ಹೆಗ್ಗಳಿಗೆ ಇದ್ದು, ದೇಶದಲ್ಲಿ 6 ನೆ ವಿಶ್ವವಿದ್ಯಾನಿಲಯವಾಗಿದೆ. ಹಲವಾರು ರಾಷ್ಟ್ರ ಮಟ್ಟದ ನಾಯಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕಳೆದ 100 ವರ್ಷಗಳಲ್ಲಿ ಮೈಸೂರು ವಿಶ್ವವಿದ್ಯಾಲಯವು ಬೋಧನೆ, ಸಂಶೋಧನೆ ಮತ್ತು ಪ್ರಕಟಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಮಾನ್ಯತೆ ಪಡೆದಿದೆ ಎಂದ ಅವರು, ಪ್ರಪಂಚದ 56 ದೇಶಗಳಿಂದ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮಾನಸಗಂಗೋತ್ರಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ವಿಶ್ವವಿದ್ಯಾನಿಲಯವು ಸತತವಾಗಿ ಮೂರು ಬಾರಿ ನ್ಯಾಕ್ ಮೌಲ್ಯಮಾಪನದಲ್ಲಿ 0 ಶ್ರೇಣಿ ಪಡೆದಿದೆ. ವಿವಿಗೆ ಸಂಬಂಧಪಟ್ಟಂತಹ ಸರ್.ಎಂ. ವಿಶ್ವೇಶ್ವರಯ್ಯ, ಡಾ ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಡಾ ಸಿ.ಎನ್.ಆರ್.ರಾವ್ ಭಾರತ ರತ್ನ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ, ಇಲ್ಲಿ ಅಧ್ಯಯನ ನಡೆ ಕುವೆಂಪು ಮತ್ತು ಯು.ಆರ್ ಅನಂತಮೂರ್ತಿ ಅವರುಗಳಿಗೆ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಹಲವಾರು ಜನರು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಪದ್ಮ ಪ್ರಶಸ್ತಿ ಪಡೆದಿದ್ದಾರೆ. ಇವೆಲ್ಲವನ್ನೂ ಸರಕಾರ ಪರಿಗಣಿಸಿ ಮಾನ್ಯತೆ ನೀಡಲು ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಸರಕಾರ ಮೈಸೂರು ವಿವಿಗೆ ಯುಜಿಸಿ ನೀಡುವ ಉತ್ತಮ ವಿಶ್ವವಿದ್ಯಾನಿಲಯದ ಮಾನ್ಯತೆ ಸಿಗುವಂತಾಗಬೇಕಾದರೆ ಸದ್ಯದ ಅನಿಶ್ಚಿತತೆಯನ್ನು ಹೋಗಲಾಡಿಸಿ ವಿಶ್ವವಿದ್ಯಾನಿಲಯಕ್ಕೆ ಕುಲಪತಿಯನ್ನು ಕೂಡಲೇ ನೇಮಿಸಬೇಕು. ಖಾಲಿಯಿರುವ ಅಧ್ಯಾಪಕ ಹುದ್ದೆಗಳನ್ನು ಭರ್ತಿಮಾಡಲು ಮತ್ತು ಯುಜಿಸಿ ನಿಯಮಾವಳಿಗಳ ಪ್ರಕಾರ ಅರ್ಹ ಅಭ್ಯರ್ಥಿಗಳಿಗೆ ಪದೋನ್ನತಿ ನೀಡಲು ಅನುಮತಿ ನೀಡಬೇಕು. ಖ್ಯಾತ ವಿದ್ವಾಂಸರನ್ನು ಸಹಾಯಕ ಅಧ್ಯಾಪಕರಾಗಿ ಆಹ್ವಾನಿಸಲು ಅನುಮತಿ ನೀಡಬೇಕು ಹಾಗೂ ವಿಶ್ವವಿದ್ಯಾನಿಲಯದಲ್ಲಿರುವ ದತ್ತಿ ಪೀಠಗಳಿಗೆ ಖ್ಯಾತ ವಿದ್ವಾಂಸರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ನೇಮಿಸಲು ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಡಾ.ಪಿ.ವೆಂಕಟರಾಮಯ್ಯ, ಡಾ.ಎಂ.ಮಹದೇವಪ್ಪ, ಡಾ.ಆರ್.ಎನ್.ಶ್ರೀನಿವಾಸಗೌಡ ಉಪಸ್ಥಿತರಿದ್ದರು.