ಪೋಷಕರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು: ವಜುಭಾಯಿ ವಾಲಾ
ಬೆಂಗಳೂರು, ನ.14: ಇಂದಿನ ಪೋಷಕರು ಮಕ್ಕಳೊಂದಿಗೆ ಬೆರೆಯುವುದಕ್ಕಿಂತ ಟಿ.ವಿ.ನೋಡುವುದರಲ್ಲಿ ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ. ಆಟ-ಪಾಠಗಳಲ್ಲಿ ಪೋಷಕರು ಬೆರೆತಾಗಲೇ ಮಕ್ಕಳ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಬಾಲಭವನ ಸೊಸೈಟಿಯು ಕಬ್ಬನ್ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಆಸ್ತಿಯನ್ನು ಎಷ್ಟೇ ಗಳಿಸಿದರು ಪ್ರಯೋಜನವಿಲ್ಲ. ಪೋಷಕರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಅಂತಹ ಮಕ್ಕಳೆ ಬಹುದೊಡ್ಡ ಆಸ್ತಿ. ತಂದೆ-ತಾಯಿ ವ್ಯಸನಗಳನ್ನು ತ್ಯಜಿಸಿ ಮಕ್ಕಳ ಆಸಕ್ತಿಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.
ಬಡತನದಲ್ಲಿ ಬೆಳೆಯುವ ಮಕ್ಕಳಿಗೆ ಸಕಾಲದಲ್ಲಿ ಜ್ಞಾನ ಸಿಕ್ಕರೆ, ಅಂತಹ ಮಕ್ಕಳು ಮುಂದೆ ಧನವಂತರಾಗುತ್ತಾರೆ. ವಿವೇಕಾನಂದರು ಹೇಳಿದಂತೆ ಮಕ್ಕಳು ನಿರ್ಭಯಿಗಳಾಗಬೇಕು. ಆತ್ಮವಿಶ್ಮಾಸ ಹಾಗೂ ದೇಶಭಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮಕ್ಕಳು ಉತ್ತಮ ಪ್ರಜೆಗಳಾದರೆ ದೇಶದ ಭವಿಷ್ಯವು ಉಜ್ವಲವಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಉಮಾಶ್ರೀ ಮಾತನಾಡಿ, ಮಕ್ಕಳು ದೇಶದ ಭವಿಷ್ಯ. ಅವರ ಆರೋಗ್ಯ ಮತ್ತು ಶಿಕ್ಷಣದ ಅಗತ್ಯತೆಗಳನ್ನು ಪೂರೈಸಲು ಹಲವಾರು ಯೋಜನೆಗಳನ್ನು ಜಾರಿಮಾಡಿದ್ದೇವೆ. ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸರಕಾರದೊಂದಿಗೆ ಸಮಾಜವು ಕೈಜೋಡಿಸಬೇಕು ಎಂದರು.
ಅಂಗನವಾಡಿಗಳ ಮೂಲಕ ಮಾತೃಪೂರ್ಣ ಯೋಜನೆ ಹಾಗೂ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಜಾರಿ ಮಾಡಿದ್ದೇವೆ. ಇವುಗಳಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ಗಣನೀಯವಾಗಿ ಕಡಿಮೆಯಾಗಿದೆ. ಮಾತೃಪೂರ್ಣದಿಂದ ಭ್ರೂಣದಲ್ಲಿರುವ ಮಗುವಿಗೆ ಪೌಷ್ಟಿಕತೆ ಸಿಗುತ್ತಿದೆ ಎಂದು ಹೇಳಿದರು.
ದೌರ್ಜನ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆಗಾಗಿ ವಿಶೇಷ ಘಟಕಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿದ್ದೇವೆ. ಅವುಗಳನ್ನು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸುತ್ತವೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ಚಿಕಿತ್ಸೆಗಾಗಿ ಕನಿಷ್ಠ 25 ಸಾವಿರ ರೂ. ನಿಂದ ಗರಿಷ್ಠ 1 ಲಕ್ಷ ರೂ. ವರೆಗೆ ನೆರವು ನೀಡುತ್ತಿದ್ದೇವೆ. ದೌರ್ಜನ್ಯಕಾರರ ಮೇಲೆ ಗೂಂಡಾ ಕಾಯ್ದೆ ಬಳಸಲು ಸೂಚಿಸಿದ್ದೇವೆ ಎಂದು ಮಾಹಿತಿ ನೀಡಿದರು.
'ಶೌರ್ಯ ಪ್ರಶಸ್ತಿ'ಗಳ ಪ್ರದಾನ: ಸಮಯ ಪ್ರಜ್ಞೆಯಿಂದ ಇತರರ ಪ್ರಾಣ ರಕ್ಷಿಸಿದ ಏಳು ಮಕ್ಕಳಿಗೆ ಕಾರ್ಯಕ್ರಮದಲ್ಲಿ ಶೌರ್ಯ ಪ್ರಶಸ್ತಿಯನ್ನು ವಜುಭಾಯಿ ವಾಲಾ ಅವರು ಪ್ರದಾನ ಮಾಡಿದರು. ಪುರಸ್ಕೃತರು- ಕೆ.ಆರ್.ನಿತಿನ್ (ದಕ್ಷಿಣ ಕನ್ನಡ), ಸಿ.ಡಿ.ಕೃಷ್ಣ ನಾಯ್ಕ (ಶಿವಮೊಗ್ಗ), ವೈಶಾಖ್ (ದಕ್ಷಿಣ ಕನ್ನಡ), ಜುನೇರಾ ಹರಂ (ಚಾಮರಾಜನಗರ), ಎಚ್.ಕೆ.ದೀಕ್ಷಿತಾ (ಚಿಕ್ಕಬಳ್ಳಾಪುರ), ಎಚ್.ಕೆ.ಅಂಬಿಕಾ (ಚಿಕ್ಕಬಳ್ಳಾಪುರ), ನೇತ್ರಾವತಿ ಚವ್ಹಾಣ (ಬಾಗಲಕೋಟೆ). ಪ್ರಶಸ್ತಿಯು ಪದಕ ಹಾಗೂ 10 ಸಾವಿರ ರೂ. ಒಳಗೊಂಡಿದೆ.
ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಪರ್ಶ ಟ್ರಸ್ಟ್, ದೀನಬಂಧು ಸಂಸ್ಥೆ, ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಅರಳು ಸಂಸ್ಥೆಗಳಿಗೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರಾದ ಎಚ್.ಕೆ.ರಾಮನಾಥ್, ಬಿ.ಎಸ್.ನಂದಕುಮಾರ್, ಪದ್ಮಾ, ಜೆ.ಆಡಿಸ್ ಆರ್ನಾಲ್ಡ್ ಅವರಿಗೆ ತಲಾ 1 ಲಕ್ಷ ರೂ. ಒಳಗೊಂಡಿರುವ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಕ್ಕಳ ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ರಾಜ್ಯ ಸರಕಾರ ಉತ್ತಮ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಉಪಯೋಗಿಸಿಕೊಳ್ಳಿ. ಚಾಚಾ ನೆಹರೂ ತಮ್ಮ ಜನ್ಮದಿನವನ್ನು ಸದುದ್ದೇಶದಿಂದ ಮಕ್ಕಳ ದಿನಾಚರಣೆಯಾಗಿಸಿದ್ದಾರೆ.
-ವಜುಭಾಯಿ ವಾಲಾ, ರಾಜ್ಯಪಾಲ