ಆ್ಯಂಬಿಡೆಂಟ್ ಸಂಸ್ಥೆ ಮುಟ್ಟುಗೋಲಿಗೆ ಆಗ್ರಹ
ಬೆಂಗಳೂರು, ನ.14: ಕಾನೂನು ಬಾಹಿರವಾಗಿ ಸ್ಥಾಪಿತಗೊಂಡಿರುವ ವಿನಿವಿಂಕ್ ಶಾಸ್ತ್ರಿ ಕಂಪೆನಿ ಮಾದರಿಯ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈ.ಲಿ ಎಂಬ ನಕಲಿ ಕಂಪೆನಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಭಾರತೀಯ ಪ್ರಜಾ ಸೇನೆಯ ರಾಜ್ಯಾಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ.
ಮಂಗಳವಾರ ಬನ್ನಪ್ಪ ಪಾರ್ಕ್‌ನಲ್ಲಿ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿ ದೇಶದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಿಂದ ನೋಂದಣಿಯಾಗದ ನಕಲಿ ಕಂಪೆನಿಯಾಗಿದೆ. ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ವಾರ್ಷಿಕವಾಗಿ ಶೇ.6ರಷ್ಟು ಬಡ್ಡಿ ಕೊಡುತ್ತವೆ. ಆದರೆ, ಯಾವುದೇ ಆದಾಯದ ಮೂಲವನ್ನು ಹೊಂದಿರದ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿ ಜನತೆಗೆ ತಾವು ಹೂಡಿದ ಹಣಕ್ಕೆ ಕೆಲವೇ ತಿಂಗಳಲ್ಲಿ ದುಪ್ಪಟ್ಟು ಹಣ ಕೊಡುವುದಾಗಿ ಆಮಿಷ ತೋರಿಸಿ ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.
ಈ ನಕಲಿ ಕಂಪೆನಿಯಲ್ಲಿ ಹಣ ಹೂಡಿರುವವರೆಲ್ಲರೂ ಬಡ ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರಾಗಿದ್ದಾರೆ. ಹೀಗಾಗಿ ಸರಕಾರ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಕಂಪೆನಿಯ ಕುರಿತು ಸೂಕ್ತ ತನಿಖೆ ನಡೆಸಿ, ಮುಂದೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕು. ಆ ಮೂಲಕ ಬಡವರ ಹಣವನ್ನು ಉಳಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾರತೀಯ ಪ್ರಜಾ ಸೇನೆಯ ನಗರಾಧ್ಯಕ್ಷ ಜಯಪ್ರಕಾಶ್, ಟಿ.ವೇಣುಗೋಪಾಲ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.