ಹಳೆ ದ್ವೇಷ ಹಿನ್ನೆಲೆ: ಆಟೊ ಚಾಲಕನ ಹತ್ಯೆ
ಬೆಂಗಳೂರು, ನ.14: ಹಳೆ ದ್ವೇಷದ ಹಿನ್ನೆಲೆಯಲ್ಲಿ ಆಟೊ ಚಾಲಕನೋರ್ವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಶ್ರಿರಾಮಪುರದ ನಿವಾಸಿ ಆಂಡ್ರೀವ್(25) ಕೊಲೆಯಾದ ಆಟೊ ಚಾಲಕ ಎಂದು ಪೊಲೀಸರು ಗುರುತಿಸಿದ್ದಾರೆ.
ಮಂಗಳವಾರ ಮುಂಜಾನೆ 3:30 ಸುಮಾರಿಗೆ ಐದಾರು ಮಂದಿ ದುಷ್ಕರ್ಮಿಗಳು ಆಂಡ್ರೀವ್‌ನನ್ನು ಮಹಾಲಕ್ಷ್ಮೀ ಲೇಔಟ್ ಮೆಟ್ರೋ ನಿಲ್ದಾಣದ ಬಳಿ ಕರೆತಂದು ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಮೆಟ್ರೋ ನಿಲ್ದಾಣಕ್ಕೆ ಹೋಗುತ್ತಿದ್ದ ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಸ್ಥಳದಿಂದ ಸ್ವಲ್ಪದೂರದಲ್ಲಿ ಯಾರೂ ಇಲ್ಲದ ಆಟೊ ಪತ್ತೆಯಾಗಿದ್ದು, ಅದನ್ನು ಪರಿಶೀಲನೆ ನಡೆಸಿದಾಗ ಅದು ಬೇರೊಬ್ಬರ ಹೆಸರಿನಲ್ಲಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.