ಖಾಸಗಿ ವೈದ್ಯಕೀಯ ವಿಧೇಯಕ ಅಂಗೀಕಾರಕ್ಕೆ ಒತ್ತಾಯ: ಪ್ರಗತಿಪರ ಚಿಂತಕರ ಸಮೂಹದಿಂದ ಮುಖ್ಯಮಂತ್ರಿಗೆ ಪತ್ರ

Update: 2017-11-14 15:07 GMT

ಬೆಂಗಳೂರು, ನ.14: ರಾಜ್ಯ ಸರಕಾರ ಪ್ರಸಕ್ತ ಅಧಿವೇಶನದಲ್ಲಿಯೇ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು(ಕೆಪಿಎಂಇ) ಮಂಡಿಸಿ, ಅಂಗೀಕಾರ ಪಡೆಯಬೇಕೆಂದು ಒತ್ತಾಯಿಸಿ ಪ್ರಗತಿಪರ ಚಿಂತಕರ ಸಮೂಹವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಬಹುಪಾಲು ಖಾಸಗಿ ಆಸ್ಪತ್ರೆಗಳು ಹಣದಾಸೆಗೆ ರೋಗಿಗಳನ್ನು ಸುಲಿಗೆ ಮಾಡುತ್ತಿವೆ. ಕಮಿಷನ್‌ಗಾಗಿ ವೈದ್ಯರು ಅನಗತ್ಯ ವೈದ್ಯಕೀಯ ಪರೀಕ್ಷೆಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ಅಲ್ಲದೆ, ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕೆಪಿಎಂಇ ವಿಧೇಯಕ ಮಂಡನೆ ಮಾಡಬೇಕೆಂದು ಒತ್ತಾಯಿಸಿ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಚಿಂತಕ ಡಾ.ಜಿ.ರಾಮಕೃಷ್ಣ, ಸಾಹಿತಿ ದೇವನೂರ ಮಹಾದೇವ, ಪ್ರೊ.ನಗರಿ ಬಾಬಯ್ಯ, ಪ್ರೊ.ಶಿವರಾಮಯ್ಯ, ರೈತನಾಯಕ ವೀರಸಂಗಯ್ಯ, ವಿ.ನಾಗರಾಜ್ ಸೇರಿದಂತೆ ಪ್ರಮುಖರು ಸಹಿ ಮಾಡಿರುವ ಪತ್ರವೊಂದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿದ್ದಾರೆ.

ರೋಗಿಗಳ ಕುಂದುಕೊರತೆಗಳ ನಿವಾರಣಾ ಸಮಿತಿ ರಚನೆ, ತುರ್ತು ಸಂದರ್ಭದಲ್ಲಿ ಹಣಕ್ಕಿಂತ ಮೊದಲು ಚಿಕಿತ್ಸೆಗೆ ಆದ್ಯತೆ, ರೋಗಿ ಮೃತಪಟ್ಟಾಗ ಹಣಪಾವತಿಗೆ ಪೀಡಿಸದೆ, ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸುವುದು, ಆಸ್ಪತ್ರೆಗಳ ದರ್ಜೆ, ಹಾಸಿಗೆಗಳ ಸಂಖ್ಯೆ, ಚಿಕಿತ್ಸೆಗಳ ದರಪಟ್ಟಿ ನಿಗದಿ ಹಾಗೂ ತಪ್ಪಿತಸ್ತ ವೈದ್ಯಕೀಯ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರಗಿಸುವುದು ಸೇರಿದಂತೆ ಹಲವಾರು ಉತ್ತಮ ಅಂಶಗಳು ಈ ವಿಧೇಯಕದಲ್ಲಿ ಇವೆ. ಇದರ ಅಂಗೀಕಾರದಿಂದ ರೋಗಿಗಳ ಬಹುತೇಕ ಬವಣೆಗಳು ನಿವಾರಣೆ ಆಗಲಿವೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ವಿಧೇಯಕದ ಕುರಿತು ಕೆಲವು ವೈದ್ಯಕೀಯ ಸಂಘಟನೆಗಳೆ ಅಪಪ್ರಚಾರ ಮಾಡುತ್ತಿವೆ. ಅಲ್ಲದೆ, ಪ್ರತಿಭಟನೆಗೆ ಇಳಿದಿರುವುದು ದುರದೃಷ್ಟಕರ. ಇಂತಹ ಸಂದರ್ಭದಲ್ಲಿ ಸರಕಾರ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿಯದೆ, ವಿಧೇಯಕವನ್ನು ಮಂಡಿಸಿ, ಅನುಮೋದಿಸಿ ಕಾಯ್ದೆಯಾಗಿ ಜಾರಿಗೆ ತರಬೇಕೆಂದು ಪ್ರಗತಿಪರರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News