×
Ad

ಹೆಚ್ಚಿನ ವಿವರಣೆ ನೀಡಲು ಕೇಂದ್ರ ಸರಕಾರ, ಎನ್‌ಐಎಗೆ ಹೈಕೋರ್ಟ್ ಸೂಚನೆ

Update: 2017-11-14 21:48 IST

ಬೆಂಗಳೂರು, ನ.14: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ತನಿಖೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇಂದ್ರ ಗೃಹ ಇಲಾಖೆ ಸಲ್ಲಿಸಿರುವ ತಕರಾರು ಮೇಲ್ಮನವಿಯ ವಿಚಾರಣಾ ಮಾನ್ಯತೆ ಕುರಿತು ನ.28ರಂದು ಹೆಚ್ಚಿನ ವಿವರಣೆ ನೀಡುವಂತೆ ಮೇಲ್ಮನವಿದಾರರಾದ ಕೇಂದ್ರ ಸರಕಾರ ಮತ್ತು ಎನ್‌ಐಎಗೆ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ಸೂಚಿಸಿದೆ.

ಈ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಸೂಚನೆ ನೀಡಿದೆ.

ಪ್ರಕರಣದಲ್ಲಿ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕಿದೆ. ಹೀಗಾಗಿ, ಕೇಂದ್ರ ಗೃಹ ಇಲಾಖೆ ಸಲ್ಲಿಸಿರುವ ಮೇಲ್ಮನವಿಯು ವಿಚಾರಣೆ ಮಾನ್ಯತೆ ಹೊಂದಿಲ್ಲ ಎಂದು ಪ್ರತಿವಾದಿಗಳೂ ಆಗಿರುವ ಆಸೀಮ್ ಶರೀಫ್ ಸೇರಿ ಪ್ರಕರಣದ ಇತರೆ ಆರೋಪಿಗಳ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು.

ಇದರಿಂದಾಗಿ ಈ ಮೇಲ್ಮನವಿಯು ವಿಚಾರಣೆ ಮಾನ್ಯತೆ ಹೊಂದಿದೆಯೇ? ಎಂದು ಕೇಂದ್ರ ಗೃಹ ಇಲಾಖೆ ಪರ ವಕೀಲರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ನಾವಡಗಿ ಅವರು ಉತ್ತರಿಸಿ, ಪ್ರತಿವಾದಿಗಳು ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ಸಂಬಂಧ ಏಕಸದಸ್ಯ ಪೀಠ ತೀರ್ಪು ನೀಡಿರುವುದರಿಂದ ವಿಭಾಗೀಯ ಪೀಠಕ್ಕೆ ತಕರಾರು ಮೇಲ್ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ತಕರಾರು ಮೇಲ್ಮನವಿಯು ವಿಚಾರಣೆ ಮಾನ್ಯತೆ ಹೊಂದಿರುವ ಬಗ್ಗೆ ನ.28ರಂದು ಹೆಚ್ಚಿನ ವಿವರಣೆ ನೀಡುವಂತೆ ನಾವಡಗಿ ಹಾಗೂ ಎನ್‌ಐಎ ಪರ ವಕೀಲ ಪ್ರಸನ್ನ ಕುಮಾರ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News