ವಿಜಯನಗರ ಹೆಬ್ಬಾಗಿಲು ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Update: 2017-11-14 16:35 GMT

ಬೆಂಗಳೂರು, ನ.14: ಮೈಸೂರು ಬ್ಯಾಂಕ್ ವೃತ್ತದ ಸಮೀಪ ವಿಜಯನಗರ ಹೆಬ್ಬಾಗಿಲು ನಿರ್ಮಿಸಲು ಮೇಯರ್ ಆರ್.ಸಂಪತ್‌ರಾಜ್ ಅವರು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರೊಂದಿಗೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ಈ ವೃತ್ತ ಅನೇಕ ಕನ್ನಡಪರ ಚಳವಳಿಗಳಿಗೆ ಹೆಸರಾಗಿದೆ. ಅತಿಶೀಘ್ರದಲ್ಲಿ ದ್ವಾರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಮುಂದಿನ ಅಕ್ಟೋಬರ್ ಒಳಗೆ ಹೆಬ್ಬಾಗಿಲು ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುತ್ತೇವೆ. ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ ರಚನೆಗಳು ಈ ದ್ವಾರದಲ್ಲಿ ಇರಲಿವೆ ಎಂದು ಮೇಯರ್ ಮಾಹಿತಿ ನೀಡಿದರು.

ವಾಟಾಳ್ ನಾಗರಾಜ್ ಮಾತನಾಡಿ, 1963ರಿಂದ ಪ್ರತಿವರ್ಷ ರಾಜ್ಯೋತ್ಸವ ಆಚರಿಸಲು ಇಲ್ಲಿ ವಿವಿಧ ಪರಿಕರಗಳಿಂದ ವಿಜಯನಗರ ಹೆಬ್ಬಾಗಿಲನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗುತ್ತದೆ. ಕನ್ನಡ ನುಡಿ, ನೆಲ, ಜಲದ ಹೋರಾಟಗಳ ನೆನಪುಗಳನ್ನು ಶಾಶ್ವತಗೊಳಿಸಲು ಹೆಬ್ಬಾಗಿಲು ನಿರ್ಮಿಸುವಂತೆ ಪಾಲಕೆಗೆ ಮನವಿ ಸಲ್ಲಿಸಿದ್ದೆವು. ಅದಕ್ಕೆ ಸ್ಪಂದಿಸಿರುವುದು ಸಂತಸದ ಸಂಗತಿ ಎಂದರು.

ಕಾಮಗಾರಿಗಳ ಪರಿಶೀಲನೆ: ನಾಗವಾರ ಮತ್ತು ಥಣಿಸಂದ್ರ ವಾರ್ಡ್‌ಗಳಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ, ಜಲಮಂಡಳಿಯ ಕೊಳವೆ ಜೋಡಣೆ ಕಾಮಗಾರಿಗಳನ್ನು ಪರಿಶೀಲಿಸಿದ ಮೇಯರ್, ಒಳಚರಂಡಿ ಮಾರ್ಗಗಳ ಕೊಳವೆಗಳು ಒಡೆದು ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವ ಕುರಿತು ದೂರುಗಳು ಬರುತ್ತಿವೆ. ಹಾನಿಗೊಂಡಿರುವ 200 ಎಂ.ಎಂ. ಕೊಳವೆಗಳನ್ನು ಬದಲಿಸಿ 300 ಎಂ.ಎಂ. ಗಾತ್ರದ ಕೊಳವೆ ಜೋಡಿಸಿ, ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಅಲ್ಲದೆ ವಾರ್ಡ್‌ಗಳ ರಸ್ತೆಗಳು ಗುಂಡಿಮುಕ್ತವಾಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಸಭೆ: ಬಳಿಕ ಮೇಯರ್ ಅವರು ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಸಭೆ ನಡೆಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದರು. ಪಾಲಿಕೆ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 2 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅದರಿಂದ ಕಂಪ್ಯೂಟರ್ ತರಬೇತಿ, ಬ್ಯೂಟಿಷಿಯನ್, ಆಟೊರಿಕ್ಷಾ ಚಾಲನಾ ತರಬೇತಿ ನೀಡುತ್ತೇವೆ. ಸಮುದಾಯದವರಿಗೆ ಉಚಿತ ಬಸ್‌ಪಾಸ್ ವಿತರಣೆ ಮಾಡಲು ಬಿಎಂಟಿಸಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News