ಇಂಜಿನಿಯರ್ ವಿದ್ಯಾರ್ಥಿನಿಯನ್ನು ಜೀವಂತ ಸುಟ್ಟ ಸಹಪಾಠಿ

Update: 2017-11-14 16:44 GMT

ಚೆನ್ನೈ, ನ.14: 21ರ ಹರೆಯದ ಇಂಜಿನಿಯರ್ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿಯೊಬ್ಬ ಜೀವಂತ ಸುಟ್ಟ ಘಟನೆ ಇಲ್ಲಿನ ಅಡಂಬಕಮ್ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮೃತ ವಿದ್ಯಾರ್ಥಿನಿಯ ಮನೆಯವರಿಗೂ ಸುಟ್ಟ ಗಾಯಗಳಾಗಿವೆ.

 ಪೊಲೀಸರು ಆರೋಪಿ ಆಕಾಶ್ ಎಂಬಾತನನ್ನು ಬಂಧಿಸಿದ್ದು, ಈತ ಕಳೆದ ಒಂದು ತಿಂಗಳಿಂದ ಮೃತ ಇಂಜಿನಿಯರ್ ವಿದ್ಯಾರ್ಥಿನಿ ಇಂದುಜಾಳನ್ನು ಹಿಂಬಾಲಿಸುತ್ತಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಸೋಮವಾರದಂದು ರಾತ್ರಿ 8:45ರ ಸುಮಾರಿಗೆ ಇಂದುಜಾಳ ಮನೆಗೆ ಆಗಮಿಸಿದ ಆರೋಪಿ ಆಕೆಯನ್ನು ನೋಡಬೇಕೆಂದು ಪಟ್ಟುಹಿಡಿದಿದ್ದಾನೆ. ಆಕೆ ಕೋಣೆಯಿಂದ ಹೊರಬರುತ್ತಿದ್ದಂತೆಯೇ ಆರೋಪಿಯು ತನ್ನ ಕೈಯಲ್ಲಿದ್ದ ಪೆಟ್ರೋಲನ್ನು ಆಕೆಯ ಮೇಲೆ ಎಸೆದು ಬೆಂಕಿ ಹಚ್ಚಿದ್ದಾನೆ.

ಇಂದುಜಾಳನ್ನು ಬೆಂಕಿಯಿಂದ ರಕ್ಷಿಸಲು ಆಕೆಯ ತಾಯಿ ಮತ್ತು ಸಹೋದರಿ ಪ್ರಯತ್ನಿಸಿದ ಪರಿಣಾಮ ಅವರಿಗೂ ಸುಟ್ಟ ಗಾಯಗಳಾಗಿವೆ. ಘಟನೆಯ ವೇಳೆ ಇಂದುಜಾಳ ತಂದೆ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಇಂದುಜಾಳ ತಾಯಿಗೆ ಶೇಕಡಾ 49 ಸುಟ್ಟ ಗಾಯಗಳಾದರೆ ಆಕೆಯ ಸಹೋದರಿ ಕೂಡಾ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಇಂದುಜಾಳ ಸಹಪಾಠಿಯಾಗಿದ್ದ ಆರೋಪಿಯು ಆಕೆಯನ್ನು ಪ್ರೀತಿಸುವಂತೆ ಸತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮೃತಳ ಸೋದರ ಮಾವ, ಆರೋಪಿಯು ಒಂದು ತಿಂಗಳಿಂದ ನನ್ನ ಸೊಸೆಯನ್ನು ಹಿಂಬಾಲಿಸುತ್ತಿದ್ದ. ಆಕೆಯ ತಂದೆ ವಿದೇಶದಲ್ಲಿ ದುಡಿಯುತ್ತಿದ್ದಾರೆ ಎಂದು ತಿಳಿದಿದ್ದ ಆತ ಇಂದುಜಾಳ ಮನೆಗೆ ಆಗಮಿಸಿದ್ದಾನೆ. ಮೊದಲಿಗೆ ಅವರು ಬಾಗಿಲು ತೆರೆಯಲಿಲ್ಲ. ಆದರೆ ಆರೋಪಿ ಯು ತಾನು ಇಂದುಜಾಳ ಜೊತೆ ಕೇವಲ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ ಕಾರಣ ಬಾಗಿಲು ತೆರೆದಿದ್ದರು. ಬಾಗಿಲು ತೆರೆಯುತ್ತಿದ್ದಂತೆ ಆರೋಪಿಯು ಇಂದುಜಾಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News