ಭಾರತದ ವಿರುದ್ಧ ಗೆಲುವಿನ ಕನಸು ಕಾಣುವ ಲಂಕೆಗೆ ಕಠಿಣ ಸವಾಲು

Update: 2017-11-14 18:31 GMT

ಕೋಲ್ಕತಾ, ನ.14: ಟೀಮ್ ಇಂಡಿಯಾ ವಿರುದ್ಧ ಅದರದೇ ನೆಲದಲ್ಲಿ ಗೆಲುವಿನ ಕನಸು ಕಾಣುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮುಂಬರುವ ಟೆಸ್ಟ್ ಸರಣಿಯಲ್ಲಿ ಕಠಿಣ ಸವಾಲು ಎದುರಾಗಿದೆ.

      ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡವಾಗಿರುವ ಟೀಮ್ ಇಂಡಿಯಾ ವಿರುದ್ಧ ಕೋಲ್ಕತಾದಲ್ಲಿ ಶ್ರೀಲಂಕಾ ನ.16ರಿಂದ 20ರ ತನಕ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಕಳೆದ ಜುಲೈ -ಸೆಪ್ಟಂಬರ್‌ನಲ್ಲಿ ಶ್ರೀಲಂಕಾದಲ್ಲಿ ಪ್ರವಾಸಿ ಭಾರತದ ವಿರುದ್ಧ ಆತಿಥೇಯ ಶ್ರೀಲಂಕಾ 9 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಶ್ರೀಲಂಕಾ ತಂಡಕ್ಕೆ ಈ ತನಕ ಭಾರತದ ನೆಲದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಇತ್ತೀಚೆಗೆ ಯುಎಇಯಲ್ಲಿ ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್‌ಗಳಲ್ಲಿ ಜಯ ಗಳಿಸಿರುವ ಶ್ರೀಲಂಕಾ ಅದೇ ಪ್ರದರ್ಶನವನ್ನು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಂದುವರಿಸುವ ಬಗ್ಗೆ ನಾಯಕ ದಿನೇಶ್ ಚಾಂಡಿಮಾಲ್ ಕನಸು ಕಾಣುತ್ತಿದ್ದಾರೆ. ‘‘ಭಾರತ ವಿಶ್ವದ ನಂ.1 ಕ್ರಿಕೆಟ್ ತಂಡ ಎನ್ನುವ ಅರಿವು ನಮಗಿದೆ. ಕಳೆದ ಎರಡು ವರ್ಷಗಳಿಂದ ಅದು ಚೆನ್ನಾಗಿ ಆಡುತ್ತಿದೆೆ. ಭಾರತ ವಿರುದ್ಧದ ಸರಣಿಯಲ್ಲಿ ನಮಗೆ ಸವಾಲು ಎದುರಾಗಿದೆ. ಶ್ರೀಲಂಕಾ ತಂಡ ಭಾರತದಲ್ಲಿ ಈವರೆಗೆ ಟೆಸ್ಟ್ ಪಂದ್ಯ ಜಯಿಸಿಲ್ಲ. ಈ ಬಾರಿ ಟೆಸ್ಟ್ ಪಂದ್ಯ ಜಯಿಸುವುದು ನಮ್ಮ ಕನಸಾಗಿದೆ. ನಾವು ಸರಣಿಯ ಮೊದಲ ಪಂದ್ಯದಲ್ಲಿ ಚೆನ್ನಾಗಿ ಆಡಬೇಕಾಗಿದೆ’’ ಎಂದು ಚಾಂಡಿಮಾಲ್ ಹೇಳಿದರು. ‘‘ಶ್ರೀಲಂಕಾ ತವರಲ್ಲಿ ಭಾರತದ ವಿರುದ್ಧ ಈ ವರ್ಷ ಆಡಿರುವ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿತ್ತು. ಪ್ರತಿಯೊಂದು ಟೆಸ್ಟ್ ಗಳು ನಾಲ್ಕು ದಿನಗಳಲ್ಲಿ ಮುಗಿದಿತ್ತು. ಇದು ಲಂಕಾದ ಪಾಲಿಗೆ ಅತ್ಯಂತ ಕೆಟ್ಟ ಸರಣಿ ಆಗಿತ್ತು’’ ಎಂದು ಚಾಂಡಿಮಾಲ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಭಾರತದ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧದ ಪ್ರದರ್ಶನ ಪಂದ್ಯದಲ್ಲಿ ಲಂಕಾದ ಆಟಗಾರರಾದ ದಿಮುತ್ ಕರುಣರತ್ನೆ, ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು ನಿರೋಶನ್ ದಿಕ್ವೆಲ್ಲಾ ಅರ್ಧಶತಕಗಳನ್ನು ದಾಖಲಿಸುವ ಮೂಲಕ ಮಿಂಚಿದ್ದರು.

ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಗಾಯದಿಂದ ಚೇತರಿಸಿಕೊಂಡು ಫಾರ್ಮ್ ಕಂಡುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅವರು ಆಡಿರಲಿಲ್ಲ. ಇದೀಗ ಅವರು ಬ್ಯಾಟ್ಸ್‌ಮನ್ ಸ್ಥಾನ ತುಂಬಲಿದ್ದಾರೆ.

  ರಂಗನ ಹೆರಾತ್ ಲಂಕಾದ ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.ಎಡಗೈ ಸ್ಪಿನ್ನರ್ ಲಕ್ಷಣ್ ಸಂಡಕನ್ ಇವರಿಗೆ ಬೆಂಬಲ ನೀಡಲಿದ್ದಾರೆ. ಭಾರತ 2015ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸೋಲು ಅನುಭವಿಸಿದ ಬಳಿಕ ಈ ತನಕ ಸೋತಿಲ್ಲ. ಮುಂದಿನ ವರ್ಷ ಟೀಮ್ ಇಂಡಿಯಾಕ್ಕೆ ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್‌ನಲ್ಲಿ ಕಠಿಣ ಸವಾಲು ಎದುರಾಗುವುದನ್ನು ನಿರೀಕ್ಷಿಸಲಾಗಿದೆ. ಇದಕ್ಕೂ ಮೊದಲು ಭಾರತ ತವರಿನಲ್ಲಿ ಲಂಕಾವನ್ನು ಎದುರಿಸಲಿದೆ.

ಲಂಕಾದ ವಿರುದ್ಧ ಎರಡನೆ ಟೆಸ್ಟ್ ನ.24ರಿಂದ 28ರ ತನಕ ,ಮೂರನೆ ಹಾಗೂ ಕೊನೆಯ ಟೆಸ್ಟ್ ದಿಲ್ಲಿಯಲ್ಲಿ ಡಿ.2ರಿಂದ 6ರ ತನಕ ನಡೆಯಲಿದೆ. ಬಳಿಕ ಮೂರು ಏಕದಿನ ಮತ್ತು ಮೂರು ಟ್ವೆಂಟಿ-20 ಪಂದ್ಯಗಳ ಸರಣಿ ನಡೆಯಲಿದೆ.

ಭಾರತ

ವಿರಾಟ್ ಕೊಹ್ಲಿ(ನಾಯಕ), ಲೋಕೇಶ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಇಶಾಂತ್ ಶರ್ಮ.

ಶ್ರೀಲಂಕಾ

ದಿನೇಶ್ ಚಾಂಡಿಮಾಲ್(ನಾಯಕ), ದಿಮುತ್ ಕರುಣರತ್ನೆ, ಧನಂಜಯ್ ಡಿ ಸಿಲ್ವ, ಸದೀರ ಸಮರವಿಕ್ರಮ, ಆ್ಯಂಜೆಲೊ ಮ್ಯಾಥ್ಯೂಸ್, ಲಹಿರು ತಿರಿಮನ್ನೆ, ರಂಗನ ಹೆರಾತ್, ಸುರಂಗ ಲಕ್ಮಲ್, ದಿಲ್ರುವಾನ್ ಪೆರೆರಾ, ಲಹಿರು ಗಾಮಗೆ, ಲಕ್ಷಣ್ ಸಂಡಕನ್, ವಿಶ್ವ ಫೆರ್ನಾಂಡೊ, ದಾಸನು ಶನಕಾ, ನಿರೋಶನ್ ಡಿಕ್ವೆಲ್ಲಾ , ರೋಶನ್ ಸಿಲ್ವ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News