ಮುಂದಿನ 20 ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ 120 ದಶ ಲಕ್ಷಕ್ಕೇರಿಕೆ: ಸುದರ್ಶನ್ ಬಲ್ಲಾಳ್
ಬೆಂಗಳೂರು, ನ.15: ಪ್ರಸ್ತುತ ದೇಶದಲ್ಲಿನ ಮಧುಮೇಹ ರೋಗಿಗಳ ಸಂಖ್ಯೆ 70 ದಶಲಕ್ಷ ಇದ್ದು ಮುಂದಿನ 20 ವರ್ಷದಲ್ಲಿ 120 ದಶಲಕ್ಷ ತಲುಪುವ ಅಂದಾಜಿದೆ. ಈ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್ ತಿಳಿಸಿದರು.
ಬುಧವಾರ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಮಧುಮೇಹ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸಿದಲ್ಲಿ ಹೆಚ್ಚಿನ ಸಂಕೀರ್ಣ ತೊಂದರೆಗಳು ಉಂಟಾಗುವುದನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಗಟ್ಟಬಹುದು ಎಂದರು.
ಆಲಸಿ ಜೀವನಶೈಲಿ, ವ್ಯಾಯಾಮದ ಕೊರತೆ, ಧೂಮಪಾನ, ಮದ್ಯಪಾನ ಮತ್ತು ಜಂಕ್‌ಫುಡ್‌ಗಳ ಸೇವನೆ ಮುಂತಾದವುಗಳು ಟೈಪ್ 2 ಮಧುಮೇಹ ಬರುವಲ್ಲಿ ಪ್ರಮುಖ ಕಾರಣಗಳಾಗಿವೆ. ಆರೋಗ್ಯಕರ ಜೀವನವನ್ನು ನಡೆಸಲು ಮತ್ತು ರೋಗ ಬರುವ ಮುನ್ನ ಅದನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಲು ನಾವು ಪ್ರತಿಜ್ಞೆ ಮಾಡಬೇಕು ಎಂದು ಅವರು ಆಶಿಸಿದರು.
ಮಣಿಪಾಲ್ ಆಸ್ಪತ್ರೆಯ ಮಧುಮೇಹ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಪ್ರಭಾಕರ್ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ. ಆದರೆ, ಮಹಿಳೆಯರಲ್ಲಿ ಮಧುಮೇಹ ಉಂಟಾದರೆ ಅವರಿಗೆ ಹೃದಯರೋಗದ ಅಪಾಯ ದಿಢೀರನೆ ಆಕಾಶಕ್ಕೇರುತ್ತದೆ. ಹೃದಯ ವೈಫಲ್ಯದಿಂದ ಸಾವು ಬರುವ ಸಾಧ್ಯತೆ ಮಹಿಳೆಯರಿಗೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.