×
Ad

ನ.18ರಿಂದ ಸಾವಯವ-ಸಿರಿಧಾನ್ಯ ಮೇಳ

Update: 2017-11-15 22:01 IST

ಬೆಂಗಳೂರು, ನ.15: ಕೃಷಿ ಇಲಾಖೆ ಮತ್ತು ಜೈವಿಕ್ ಕೃಷಿಕ್ ಸೊಸೈಟಿ (ರಿ) ಲಾಲ್‌ಬಾಗ್, ಬೆಂಗಳೂರು ಸಹಯೋಗದಲ್ಲಿ ನ.18 ಮತ್ತು 19ರಂದು ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಆಟದ ಮೈದಾನದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟಗಳು, ಸಾವಯವ ಮತ್ತು ಸಿರಿಧಾನ್ಯಗಳ ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಭಾಗವಹಿಸಲಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದಿರುವ ತಾಜಾ ತರಕಾರಿಗಳು, ಸೊಪ್ಪು, ಹಣ್ಣುಗಳು, ಸಿರಿಧಾನ್ಯಗಳಾದ ರಾಗಿ, ನವಣೆ, ಬರಗು, ಸಾಮೆ, ಊದಲು ಸೇರಿದಂತೆ ಹತ್ತಾರು ಬಗೆಯ ಸಾವಯವ ಪದಾರ್ಥಗಳನ್ನು ಮಾರಾಟ ಮಾಡಲಿದ್ದಾರೆ.

ವಿವಿಧ ಔಷದೀಯ ಗುಣಗಳುಳ್ಳ ಕರಿಭತ್ತ, ಸಾವಯವ ಬೆಲ್ಲ, ಪುಡಿ ಬೆಲ್ಲ, ಸಾಂಬಾರ ಪದಾರ್ಥಗಳು, ಸಂಸ್ಕರಿಸಿದ ವಿವಿಧ ಧಾನ್ಯದ ಹಿಟ್ಟುಗಳು, ಉಪ್ಪಿನಕಾಯಿ ಮಸಾಲ ಪದಾರ್ಥಗಳು ಸೇರಿ ಹಲವಾರು ವೈವಿಧ್ಯತೆಗಳಿಂದ ಕೂಡಿದ ಆಹಾರ ಪದಾರ್ಥಗಳು, ಹರ್ಬಲ್ ಸೌಂದರ್ಯವರ್ಧಕಗಳು ಮೇಳದಲ್ಲಿ ಮಾರಾಟಕ್ಕೆ ಸಿಗಲಿವೆ.

ಮೇಳದಲ್ಲಿ ಸುಮಾರು 50 ರಿಂದ 60 ಪ್ರದರ್ಶನ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು ಮೇಲ್ಕಂಡ ಎರಡು ದಿನಗಳಂದು ಬೆಳಗ್ಗೆ 9ರಿಂದ ಸಂಜೆ 8 ಗಂಟೆಯವರೆಗೆ ಪ್ರದರ್ಶನ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News