×
Ad

ಶಾಂತಿಯುತವಾಗಿ ತರಗತಿಗಳು ನಡೆಯಲಿವೆ, ಆತಂಕ ಬೇಡ: ಅಲಯನ್ಸ್ ವಿವಿ ಭರವಸೆ

Update: 2017-11-15 22:03 IST

ಬೆಂಗಳೂರು, ನ.15: ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಅಲಯನ್ಸ್ ವಿಶ್ವವಿದ್ಯಾನಿಲಯದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಶಾಂತಿಯುತವಾಗಿ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ವಿವಿಯ ಉಪ ಕುಲಪತಿ ಡಾ.ಅನುಭಾಸಿಂಗ್ ಮತ್ತು ಕಾನೂನು ವಿಭಾಗದ ಮುಖ್ಯಸ್ಥೆ ಡಾ.ಎಸ್.ಭಾರತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಅನುಭಾಸಿಂಗ್, ಹಿಂದಿನ ಕುಲಪತಿ ಮಧುಕರ್ ಜಿ. ಅಂಗೂರ್ ಆಸ್ತಿಗಾಗಿ ನಡೆಸಿದ ಕುತಂತ್ರದಿಂದಾಗಿ ಪ್ರಸ್ತುತ ಕುಲಪತಿ ಸುಧೀರ್ ಜಿ. ಅಂಗೂರ್ (ಇಬ್ಬರೂ ಸೋದರರು) ಮತ್ತು 500 ಮಂದಿ ಸಿಬ್ಬಂದಿ ವಿವಿಯಿಂದ ಆಚೆಯಿದ್ದು, ಒಂದು ವರ್ಷಕ್ಕೂ ಹೆಚ್ಚು ಕಾಲ ಸಾಕಷ್ಟು ತೊಂದರೆ ಪಡುವಂತಾಯಿತು ಎಂದರು.

ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಿರಲಿ ಎಂಬ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೆವು. ನ್ಯಾಯಾಲಯದ ಆದೇಶ ಬರುವವರೆಗೂ ಸಾವಧಾನದಿಂದ ಕಾದಿದ್ದೆವು. ಆದರೆ, ಮಧುಕರ್ ಕಡೆಯವರು ಗೂಂಡಾಗಿರಿ ನಡೆಸಿ ದಾಂಧಲೆ ಮಾಡಿದ್ದಾರೆ. ಹೀಗಾಗಿ, ಇದೀಗ ನಾವು ಪೊಲೀಸ್ ಭದ್ರತೆ ಪಡೆದು ತರಗತಿಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ನಗರದಲ್ಲಿರುವ ಇಷ್ಟೊಂದು ದೊಡ್ಡ ವಿಶ್ವವಿದ್ಯಾಲಯದಲ್ಲಿ ದೇಶ-ವಿದೇಶಗಳಿಂದ ಬಂದ 6 ಸಾವಿರ ವಿದ್ಯಾರ್ಥಿಗಳಿದ್ದು, ಈ ಪೈಕಿ ಶೇ.40ರಷ್ಟು ಕರ್ನಾಟಕದವರಿದ್ದಾರೆ. ಯಾವ ವಿದ್ಯಾರ್ಥಿಗಳಿಗೂ ತೊಂದರೆಯಾಗದಂತೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹಾಸ್ಟೆಲ್‌ಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸುಮಾರು 40-50 ಮಂದಿ ಪೊಲೀಸರು ದಿನದ 24 ಗಂಟೆಯೂ ಭದ್ರತೆ ಒದಗಿಸುತ್ತಿದ್ದಾರೆ. ಹೀಗಾಗಿ ತರಗತಿಗಳು ಶಾಂತಿಯುತವಾಗಿ ನಡೆಯುತ್ತಿವೆ. ಪರೀಕ್ಷೆಗಳು ಕೂಡ ನಿಗದಿತ ಸಮಯಕ್ಕೆ ನಡೆಯಲಿವೆ. ಯಾವುದೇ ಆತಂಕ, ಗೊಂದಲಗಳು ಬೇಡ ಎಂದು ಪೋಷಕರಿಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News