ಮಹಿಳಾ ಮತ್ತು ಮಕ್ಕಳ ಆರೈಕೆ ಸಮ್ಮೇಳನಕ್ಕೆ ಚಾಲನೆ
ಬೆಂಗಳೂರು, ನ.15: ಬಯೋಜೆನಿಸಿಸ್ ಹೆಲ್ತ್ ಸಂಸ್ಥೆಯು ನಗರದಲ್ಲಿ ಆಯೋಜಿಸಿರುವ ಮಹಿಳಾ ಮತ್ತು ಮಕ್ಕಳ ಆರೈಕೆ ಸಮ್ಮೇಳನಕ್ಕೆ ಸಂಸ್ಥೆಯ ಅಧ್ಯಕ್ಷ ವಿ.ಪಿ.ರಾವ್ ಅವರು ಬುಧವಾರ ಚಾಲನೆ ನೀಡಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ಮಾತನಾಡಿದ ವಿ.ಪಿ.ರಾವ್, ಉತ್ತಮ ಆರೋಗ್ಯ ಮತ್ತು ಜಗತ್ತಿನ ಉತ್ತಮ ಭವಿಷ್ಯ ರೂಪಿಸುವ ಸಾಮೂಹಿಕ ಶಕ್ತಿ ನಮಗಿದೆ. ಅದನ್ನರಿತು ಮುನ್ನಡೆಯಬೇಕಿದೆ ಎಂದು ಕಿವಿಮಾತು ಹೇಳಿದರು.
ಸ್ತ್ರೀರೋಗಗಳು ಮತ್ತು ಮಕ್ಕಳ ಚಿಕಿತ್ಸೆಗಳ ಕುರಿತು ತಜ್ಞರು ವಿಚಾರ ಮಂಥನ ನಡೆಸಲು ಈ ಸಮ್ಮೇಳನ ವೇದಿಕೆಯಾಗಿದೆ. ಇಲ್ಲಿ ಮಹಿಳೆಯರ ಸಾಮಾಜಿಕ ಸ್ಥಿತಿಗತಿ ಹಾಗೂ ಸಬಲೀಕರಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಇದರಲ್ಲಿ 1 ಸಾವಿರಕ್ಕೂ ಹೆಚ್ಚು ಮನಶಾಸ್ತ್ರಜ್ಞರು, ಪರಿಸರವಾದಿಗಳು, ಆರ್ಥಿಕ ತಜ್ಞರು, ಮಾನವ ಹಕ್ಕು ಹೋರಾಟಗಾರರು, ವಕೀಲರು, ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದಾರೆ.
ವೈದ್ಯಕೀಯ ರಂಗದ ತಜ್ಞರಾದ ಡಾ.ಕಾಮಿನಿರಾವ್, ಎಂ.ಯು.ಆರ್.ನಾಯ್ಡು, ಡಾ.ಕೆ.ಎಸ್.ಗೋಪಿನಾಥ್, ಡಾ.ಎಂ.ನಟೇಶ್ ಪ್ರಭು ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಮ್ಮೇಳನ ನ.17ರವರೆಗೆ ನಡೆಯಲಿದೆ.