×
Ad

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಬಿಐಯಿಂದ ಸಹೋದರಿಯ ವಿಚಾರಣೆ

Update: 2017-11-15 22:22 IST

ಬೆಂಗಳೂರು, ನ.15: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು, ಇಂದು ಗಣಪತಿಯ ಸಹೋದರಿ ಸಬಿತಾ ಅವರ ವಿಚಾರಣೆ ನಡೆಸಿದರು.

ಮೂರು ತಿಂಗಳೊಳಗೆ ಪ್ರಕರಣದ ಸಂಪೂರ್ಣ ವರದಿವನ್ನು ನೀಡುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸಿಬಿಐನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲೈಮಣಿ ನೇತೃತ್ವದಲ್ಲಿ ಈ ವಿಚಾರಣೆ ತೀವ್ರಗೊಂಡಿದೆ.

ಇಂಚಿಂಚೂ ಮಾಹಿತಿಯನ್ನ ಕಲೆ ಹಾಕುತ್ತಿರುವ ಸಿಬಿಐ ಅಧಿಕಾರಿಗಳು, ಗಣಪತಿ ಅವರು ಈ ಹಿಂದೆ ಕೆಲಸ ಮಾಡುವಾಗ ವಾತಾವರಣ ಹೇಗಿತ್ತು? ಗಣಪತಿ ಆತ್ಮಹತ್ಯೆಗೆ ಮುನ್ನ ಏನಾದರು ಹೇಳಿದ್ರಾ? ಅನ್ನೋ ಬಗ್ಗೆ ಗಣಪತಿ ಸಹೋದರಿಯಿಂದ ಮಾಹಿತಿ ಪಡೆಯಲಿದ್ದಾರೆ. ಹಾಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿರುವ ಬಗ್ಗೆ ಸಹೋದರಿ ಸಬಿತಾ ಜತೆ ಗಣಪತಿ ಮಾತನಾಡಿದ್ರಾ? ಅನ್ನೋ ಬಗ್ಗೆ ಕೂಡ ಮಾಹಿತಿ ಪಡೆಯಲಿದ್ದಾರೆ.

ಸಿಬಿಐ ತನಿಖೆ ಕೋರಿ ಗಣಪತಿ ತಂದೆ ಸುಪ್ರೀಂಕೋರ್ಟ್‌ಗೆ ಈ ಹಿಂದೆ ಅರ್ಜಿ ಸಲ್ಲಿಸಿ ಸಿಬಿಐ ತನಿಖೆಗೆ ಕೋರಿದ್ದರು. ಹೀಗಾಗಿ ಸುಪ್ರೀಂಕೋರ್ಟ್ ಮೂರು ತಿಂಗಳೊಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಚೆನ್ನೈ ಸಿಬಿಐ ತಂಡ ಸಚಿವ ಕೆ.ಜೆ.ಜಾರ್ಜ್ ಸೇರಿ ಮೂವರು ಮೇಲೆ ಎಫ್‌ಐಆರ್ ದಾಖಲಿಸಿದ್ದರು.

ಈಗ ಸಿಬಿಐ ತಂಡ ಮಡಿಕೇರಿ ಹಾಗೂ ಬೆಂಗಳೂರಿನಲ್ಲಿ ತನಿಖೆ ಕೈಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News