ಹಿಂದುಳಿದ ವರ್ಗದ ಅಭ್ಯರ್ಥಿಗೆ ಅವಕಾಶ ನೀಡಲು ಆಗ್ರಹ
ಬೆಂಗಳೂರು, ನ.15: ಮುಂದಿನ ವರ್ಷದಲ್ಲಿ ನಡೆಯಲಿರುವ ವಿಧಾನಪರಿಷತ್ತಿನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನೈಋತ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹಿಂದುಳಿದ ವರ್ಗಕ್ಕೆ ಅವಕಾಶ ನೀಡಬೇಕು ಎಂದು ಅಖಿಲ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಿ.ಎಲ್.ಅಶೋಕ್, ಮುಂದಿನ ಜೂನ್‌ನಲ್ಲಿ ವಿಧಾನ ಪರಿಷತ್ತಿನ ಆರು ಕ್ಷೇತ್ರಗಳ ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ನೈಋತ್ಯ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೂ ಅಭ್ಯರ್ಥಿ ಆಯ್ಕೆ ಮಾಡಿಲ್ಲ. ಹೀಗಾಗಿ, ಹಿಂದುಳಿದ ವರ್ಗದವರಿಗೆ ಈ ಕ್ಷೇತ್ರದಲ್ಲಿ ಅವಕಾಶ ನೀಡಬೇಕು ಎಂದರು.
ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಆರ್.ದೇವಾನಂದಗೆ ನೈಋತ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ನೀಡಬೇಕು. ಇದರಿಂದ ಕೊಡಗು, ಚಿಕ್ಕಮಗಳೂರು, ಉಡುಪಿ, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 25 ತಾಲ್ಲೂಕುಗಳ ಮೇಲೆ ಪಕ್ಷದ ಪ್ರಭಾವ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುರುಬರ ಸಂಘದ ಉಪಾಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್, ಕಾರ್ಯದರ್ಶಿ ಟಿ.ಈ.ಈರಣ್ಣ ಹಾಗೂ ಇತರರು ಉಪಸ್ಥಿತರಿದ್ದರು.