ಶೇಂಗಾ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಒತ್ತಾಯ: ಕೃಷ್ಣಭೈರೇಗೌಡ, ಯು.ಟಿ.ಖಾದರ್ ನಿಯೋಗ ದಿಲ್ಲಿಗೆ

Update: 2017-11-15 17:51 GMT

ಬೆಳಗಾವಿ, ನ.15: ಶೇಂಗಾ ಮತ್ತು ಮೆಕ್ಕೆಜೋಳದ ದರ ಕುಸಿತದಿಂದ ರೈತರು ಕಂಗಾಲಾಗಿದ್ದು, ಈ ಉತ್ಪನ್ನಕ್ಕೆ ಬೆಂಬಲ ಬೆಲೆ ಘೋಷಿಸಬೇಕೆಂದು ಕೇಂದ್ರಕ್ಕೆ ರಾಜ್ಯ ಸರಕಾರ ಆಗ್ರಹಿಸಿತ್ತು. ಆದರೆ ಈ ತನಕ ಅದು ಈಡೇರಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ರಾಜ್ಯ ಸರಕಾರದ ನಿಯೋಗವನ್ನು ಕಳುಹಿಸಲಾಗಿದೆ.

ಶೇಂಗಾ ಮತ್ತು ಮೆಕ್ಕೆಜೋಳ ಬೆಳೆಯುವ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆಗೆ ಖರೀದಿಸಲು ಅನುಮತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹಾಗೂ ಕೃಷಿ ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ನಿಯೋಗ ಬುಧವಾರ ಬೆಳಗಾವಿಯಿಂದ ಮುಂಬೈ ಮೂಲಕ ದಿಲ್ಲಿಗೆ  ಹೊರಟಿದ್ದಾರೆ.

ಶೇಂಗಾ ಮತ್ತು ಮೆಕ್ಕೆಜೋಳ ಬೆಂಬಲ ಬೆಲೆಗೆ ಅನುಮತಿ ನೀಡಬೇಕು, ಆಹಾರ ಇಲಾಖೆಗೆ ಕೇಂದ್ರ ಸರಕಾರ ನೀಡಲು ಬಾಕಿ ಇರುವ 950 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಮನವಿ ಪತ್ರವನ್ನು ರಾಜ್ಯ ಸರಕಾರದ ನಿಯೋಗ ಕೇಂದ್ರ ಸರಕಾರದ ಕೃಷಿ ಸಚಿವರನ್ನು ಹಾಗೂ ಆಹಾರ ಸಚಿವರನ್ನು ಭೇಟಿ ಮಾಡಿ ನೀಡಲಿದ್ದು, ರೈತರ ಗಂಭೀರ ಸಮಸ್ಯೆಯನ್ನು ಮನವರಿಕೆ ಮಾಡಲಿದ್ದಾರೆ.

ಬುಧವಾರ ಸಂಜೆ ಕೇಂದ್ರ ಆಹಾರ ಸಚಿವರನ್ನು ಹಾಗೂ ಗುರುವಾರ ಕೇಂದ್ರ ಕೃಷಿ ಸಚಿವರನ್ನು ಯು.ಟಿ.ಖಾದರ್, ಕೃಷ್ಣಭೈರೇಗೌಡ ಹಾಗೂ ಅಧಿಕಾರಿಗಳ ನಿಯೋಗ ಭೇಟಿ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News