ನ.16: ಭಾರತ -ಶ್ರೀಲಂಕಾ ಮೊದಲ ಕ್ರಿಕೆಟ್ ಟೆಸ್ಟ್

Update: 2017-11-15 18:20 GMT

ಕೋಲ್ಕತಾ, ನ.15: ಒಂಬತ್ತು ವರ್ಷಗಳ ಹಿಂದೆ ಭಾರತದ ನೆಲದಲ್ಲಿ ಟೆಸ್ಟ್ ಗೆಲ್ಲುವ ಕನಸು ನನಸಾಗದೆ ತವರಿಗೆ ವಾಪಸಾಗಿದ್ದ ಶ್ರೀಲಂಕಾ ತಂಡ ಇದೀಗ ಅದೇ ಕನಸಿನೊಂದಿಗೆ ಭಾರತಕ್ಕೆ ಆಗಮಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಗುರುವಾರ ಆರಂಭಗೊಳ್ಳಲಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಶ್ವದ ನಂ.1 ತಂಡವಾಗಿರುವ ಭಾರತವನ್ನು ಎದುರಿಸಲಿದೆ.

    ಶ್ರೀಲಂಕಾದಲ್ಲಿ ಮೂರು ತಿಂಗಳ ಹಿಂದೆ ನಡೆದ ಟೆಸ್ಟ್ ಸರಣಿಯಲ್ಲಿ 3-0, ಏಕದಿನ ಸರಣಿಯಲ್ಲಿ 5-0 ಮತ್ತು ಟ್ವೆಂಟಿ-20 ಸರಣಿಯಲ್ಲಿ 1-0 ಸೇರಿದಂತೆ 9 ಪಂದ್ಯಗಳಲ್ಲಿ ಸೋತಿದ್ದ ಶ್ರೀಲಂಕಾ ತಂಡಕ್ಕೆ ತವರಿನಲ್ಲಿ ಮತ್ತೆ ಆಘಾತ ನೀಡಲು ಕೊಹ್ಲಿ ಪಡೆ ಕಾಯುತ್ತಿದೆ. ಆದರೆ ಯುಎಇಯಲ್ಲಿ ಪಾಕಿಸ್ತಾನ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸಿದ್ದ ಶ್ರೀಲಂಕಾ ತಂಡ ಅದೇ ಯಶಸ್ಸನ್ನು ಭಾರತದಲ್ಲಿ ಮುಂದುವರಿಸುವ ಯೋಜನೆಯಲ್ಲಿದೆ.

ಕೋಲ್ಕತಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಭಾರತದ ಅಧ್ಯಕ್ಷರ ಇಲೆವೆನ್ ತಂಡದ ವಿರುದ್ಧದ ಪ್ರದರ್ಶನ ಪಂದ್ಯದಲ್ಲಿ ಲಂಕಾದ ಆಟಗಾರರಾದ ಡಿಮುತ್ ಕರುಣರತ್ನೆ, ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು ನಿರೋಶನ್ ಡಿಕ್ವೆಲ್ಲಾ ಅರ್ಧಶತಕಗಳನ್ನು ದಾಖಲಿಸುವ ಮೂಲಕ ಮಿಂಚಿದ್ದರು.

ಆಲ್‌ರೌಂಡರ್ ಆ್ಯಂಜೆಲೊ ಮ್ಯಾಥ್ಯೂಸ್ ಗಾಯದಿಂದ ಚೇತರಿಸಿಕೊಂಡು ಫಾರ್ಮ್ ಕಂಡುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅವರು ಅಡಿರಲಿಲ್ಲ.

ಶ್ರೀಲಂಕಾ ತಂಡ ಕಳೆದ 35 ವರ್ಷಗಳಲ್ಲಿ ಭಾರತಕ್ಕೆ 16 ಬಾರಿ ಪ್ರವಾಸ ಕೈಗೊಂಡಿದ್ದರೂ, ಈ ತನಕ ಒಂದು ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ.

ಮುಂದಿನ ವರ್ಷ ದಕ್ಷಿಣ ಆಫ್ರಿಕ ಮತ್ತು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿರುವ ಕೊಹ್ಲಿ ಪಡೆಗೆ ತವರಿನಲ್ಲಿ ಶ್ರೀಲಂಕಾ ವಿರುದ್ಧ ತಯಾರಿಗೆ ಇದು ಕೊನೆಯ ಸರಣಿಯಾಗಿದೆ.

ಎರಡು ತಿಂಗಳ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಭಾರತ 3 ಟೆಸ್ಟ್, 6 ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಸರಣಿ ಕೇಪ್‌ಟೌನ್‌ನಲ್ಲಿ ಜ.5ರಂದು ಆರಂಭಗೊಳ್ಳಲಿದೆ.

ಜುಲೈ -ಆಗಸ್ಟ್‌ನಲ್ಲಿ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ 13 ಏಕದಿನ ಮತ್ತು 6 ಟ್ವೆಂಟಿ-20 ಪಂದ್ಯಗಳನ್ನು ಆಡಿದೆ. ಟೆಸ್ಟ್ ಕ್ರಿಕೆಟ್ ಆಡದಿದ್ದರೂ, ತಂಡದ ಬಹುತೇಕ ಸದಸ್ಯರು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. ಮೊದಲ ಟೆಸ್ಟ್‌ಗೆ ಮಳೆಯ ಭೀತಿಯೂ ಎದುರಾಗಿದೆ.

ತಂಡದ ಸಮಾಚಾರ:ಶಿಖರ್ ಧವನ್ ಅವರು ಟೀಮ್ ಇಂಡಿಯಾದ ಪರ ಲೋಕೇಶ್ ರಾಹುಲ್ ಜೊತೆ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಯಲಿದ್ದಾರೆ. ಚೇತೇಶ್ವರ ಪೂಜಾರ ಲಂಕಾ ವಿರುದ್ಧದ ಕಳೆದ ಪ್ರವಾಸದಲ್ಲಿ 2 ಶತಕ ಸಿಡಿಸಿದ್ದು. ಅಜಿಂಕ್ಯ ರಹಾನೆ 1 ಶತಕ ಮತ್ತು 1 ಅರ್ಧಶತಕ ದಾಖಲಿಸಿದ್ದರು.

 ನಾಯಕ ವಿರಾಟ್ ಕೊಹ್ಲಿ ಗಾಲೆ ಟೆಸ್ಟ್‌ನ ಎರಡನೆ ಇನಿಂಗ್ಸ್‌ನಲ್ಲಿ ಶತಕ (103) ಬಾರಿಸಿದ್ದರು. ಭುವನೇಶ್ವರ ಕುಮಾರ್ ಅವರು ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಲಿದ್ದಾರೆ. ಮುರಳಿ ವಿಜಯ್ ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿದ್ದಾರೆ.

ಭುವನೇಶ್ವರ ಕುಮಾರ್ ಅವರು ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಧರ್ಮಶಾಲಾದಲ್ಲಿ ಕೊನೆಯ ಬಾರಿ ಟೆಸ್ಟ್ ಆಡಿದ್ದರು. ಕೋಲ್ಕತಾದಲ್ಲಿ ಈ ಹಿಂದೆ ಅವರು ಸೆಪ್ಟಂಬರ್ 2016ರಲ್ಲಿ 5 ವಿಕೆಟ್ ಪಡೆದಿದ್ದರು. ಅವರಿಗೆ ಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಸಾಥ್ ನೀಡಲಿದ್ದಾರೆ.

     ಸ್ಪಿನ್ ವಿಭಾಗವನ್ನು ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಮುನ್ನಡೆಸಲಿದ್ದಾರೆ. ಅಶ್ವಿನ್ ಅವರು ಪಾಂಡ್ಯ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್‌ನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಶ್ರೀಲಂಕಾ ತಂಡ ಐವರು ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಬ್ಬರು ಸ್ಪಿನ್ನರ್‌ಗಳಾದ ರಂಗನ ಹೆರಾತ್ ಮತ್ತು ದಿಲ್ರುವಾನ್ ಪೆರೆರಾ, ವೇಗದ ಬೌಲರ್‌ಗಳಾದ ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೊ ಮತ್ತು ಲಹಿರು ಗಾಮಗೆ ಅವರು ಕೊಹ್ಲಿ ಪಡೆಗೆ ಸವಾಲಾಗಲಿದ್ದಾರೆ. ಲಹಿರು ಗಾಮಗೆ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯದಿದ್ದರೆ ದಾಸನ್ ಶನಕ ಕಣಕ್ಕಿಳಿಯುವುದನ್ನು ನಿರೀಕ್ಷಿಸಲಾಗಿದೆ. ತಂಡ ಬೌಲಿಂಗ್‌ನಲ್ಲಿ ಹೆರಾತ್‌ರನ್ನು ಅವಲಂಬಿಸಿದೆ. ಬ್ಯಾಟಿಂಗ್‌ನಲ್ಲಿ ಸದೀರಾ ಸಮರವಿಕ್ರಮ ಅವರು ಡಿಮುತ್ ಕರುಣರತ್ನೆ ಜತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಕರುಣರತ್ನೆ ಪಾಕ್ ವಿರುದ್ಧ ದುಬೈ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 196 ರನ್ ಸಿಡಿಸಿದ್ದರು.

ಅಂಕಿ ಅಂಶ

►ಶ್ರೀಲಂಕಾ ತಂಡ ಭಾರತದಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಈ ತನಕ ಜಯ ಸಾಧಿಸಿಲ್ಲ. ಲಂಕಾ ನಿರ್ದಿಷ್ಟ ದೇಶದಲ್ಲಿ ಚೊಚ್ಚಲ ಗೆಲುವಿಗಾಗಿ ಕಾಯುತ್ತಿರುವ ವಿಶ್ವದ ಎರಡನೆ ತಂಡ. ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ 28 ಟೆಸ್ಟ್ ಸೋತ ಬಳಿಕ ಗೆಲುವು ಸಾಧಿಸಿತ್ತು.

►ರೋಹಿತ್ ಶರ್ಮ ಕೋಲ್ಕತಾದಲ್ಲಿ ಆಡಿರುವ 2 ಟೆಸ್ಟ್ ಪಂದ್ಯಗಳಲ್ಲಿ 2 ಶತಕ ದಾಖಲಿಸಿದ್ದಾರೆ.

►ಶ್ರೀಲಂಕಾ ತಂಡದಲ್ಲಿ ಆ್ಯಂಜೆಲೊ ಮ್ಯಾಥ್ಯೂಸ್ ಹಾಗೂ ರಂಗನ ಹೆರಾತ್‌ಗೆ ಮಾತ್ರ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಆಡಿರುವ ಅನುಭವವಿದೆ.

►ಆರ್.ಅಶ್ವಿನ್‌ಗೆ 300 ವಿಕೆಟ್ ಪೂರೈಸಲು ಇನ್ನು ಕೇವಲ 8 ವಿಕೆಟ್‌ಗಳ ಅಗತ್ಯವಿದೆ. ಅಶ್ವಿನ್ 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಡೆನ್ನಿಸ್ ಲಿಲ್ಲಿ 56ನೆ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪೂರೈಸಿದ್ದು, ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ್ದಾರೆ.

►ಡಿ. ಕರುಣರತ್ನೆಗೆ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ಶ್ರೀಲಂಕಾದ ಎರಡನೆ ಆರಂಭಿಕ ಆಟಗಾರ ಎನಿಸಿಕೊಳ್ಳಲು ಇನ್ನು 60 ರನ್ ಅಗತ್ಯವಿದೆ. ಸನತ್ ಜಯಸೂರ್ಯ(1997 ಹಾಗೂ 2004) ಈ ಹಿಂದೆ ಈ ಸಾಧನೆ ಮಾಡಿದ್ದಾರೆ. ಕರುಣರತ್ನೆ 47ರ ಸರಾಸರಿಯಲ್ಲಿ 3 ಶತಕ ಹಾಗೂ 3 ಅರ್ಧಶತಕಗಳಿರುವ ಒಟ್ಟು 940 ರನ್ ಗಳಿಸಿದ್ದಾರೆ.

►ಒಂದು ವೇಳೆ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅರ್ಧಶತಕ ಸಿಡಿಸಿದರೆ ಟೆಸ್ಟ್‌ನಲ್ಲಿ ಸತತ 8 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಎವರ್ಟನ್ ವೀಕ್ಸ್, ಆ್ಯಂಡಿ ಫ್ಲವರ್, ಶಿವನಾರಾಯಣ ಚಂದ್ರಪಾಲ್, ಕುಮಾರ ಸಂಗಕ್ಕರ ಹಾಗೂ ಕ್ರಿಸ್ ರೋಜರ್ಸ್ ಅವರೊಂದಿಗೆ ದಾಖಲೆ ಹಂಚಿಕೊಂಡಿದ್ದಾರೆ.

ಭಾರತ

ವಿರಾಟ್ ಕೊಹ್ಲಿ(ನಾಯಕ), ಲೋಕೇಶ್ ರಾಹುಲ್, ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಇಶಾಂತ್ ಶರ್ಮ.

ಶ್ರೀಲಂಕಾ

ದಿನೇಶ್ ಚಾಂಡಿಮಾಲ್(ನಾಯಕ), ದಿಮುತ್ ಕರುಣರತ್ನೆ, ಧನಂಜಯ್ ಡಿ ಸಿಲ್ವ, ಸದೀರ ಸಮರವಿಕ್ರಮ, ಆ್ಯಂಜೆಲೊ ಮ್ಯಾಥ್ಯೂಸ್, ಲಹಿರು ತಿರಿಮನ್ನೆ, ರಂಗನ್ ಹೆರಾತ್, ಸುರಂಗ ಲಕ್ಮಲ್, ದಿಲ್ರುವಾನ್ ಪೆರೆರಾ, ಲಹಿರು ಗಾಮಗೆ, ಲಕ್ಷಣ್ ಸಂಡಕನ್, ವಿಶ್ವ ಫೆರ್ನಾಂಡೊ, ದಾಸನು ಶನಕಾ, ನಿರೋಶನ್ ಡಿಕ್ವೆಲ್ಲಾ , ರೋಶನ್ ಸಿಲ್ವ.

ಪಂದ್ಯದ ಸಮಯ

ಬೆಳಗ್ಗೆ 9:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News