ಸೈನಾ, ಸಿಂಧು, ಪ್ರಣಯ್ ಶುಭಾರಂಭ

Update: 2017-11-15 18:43 GMT

ಶಾಂಘೈ, ನ.15: ಭಾರತದ ಶಟ್ಲರ್‌ಗಳಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಹಾಗೂ ಎಚ್‌ಎಸ್ ಪ್ರಣಯ್ ಚೀನಾ ಓಪನ್ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.ಬುಧವಾರ ಅರ್ಧಗಂಟೆ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಝಾಂಗ್‌ರನ್ನು 21-12, 21-13 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು. ಸೈನಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ಐದನೆ ಶ್ರೇಯಾಂಕದ ಅಕಾನ್ ಯಮಗುಚಿಯವರನ್ನು ಎದುರಿಸಲಿದ್ದಾರೆ. ಬಿಡಬ್ಲುಎಫ್ ರ್ಯಾಂಕಿಂಗ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ 11ನೆ ರ್ಯಾಂಕಿನಲ್ಲಿರುವ ಸೈನಾ ನಾಲ್ಕನೆ ರ್ಯಾಂಕಿನ ಯಮಗುಚಿ ವಿರುದ್ಧ 1-3 ಗೆಲುವು-ಸೋಲು ದಾಖಲೆ ಹೊಂದಿದ್ದಾರೆ. ಸೈನಾ ಈ ವರ್ಷ ಯಮಗುಚಿ ವಿರುದ್ಧ ಆಡಿರುವ ಎಲ್ಲ 3 ಪಂದ್ಯಗಳನ್ನು ಸೋತಿದ್ದಾರೆ. ಸೈನಾ 2014ರಲ್ಲಿ ಚೀನಾ ಓಪನ್ ಚಾಂಪಿಯನ್ ಆಗಿದ್ದರು. 2015ರಲ್ಲಿ ಫೈನಲ್‌ಗೆ ತಲುಪಿದ್ದರು. ಮತ್ತೊಂದು ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ 2ನೆ ಶ್ರೇಯಾಂಕದ ಸಿಂಧು ಜಪಾನ್‌ನ ಸಯಾಕಾ ಸಾಟೊರನ್ನು ಕೇವಲ 59 ನಿಮಿಷಗಳಲ್ಲಿ 24-23, 23-21 ಗೇಮ್‌ಗಳ ಅಂತರದಿಂದ ಸೋಲಿಸಿದರು.

ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ಹಾನ್ ಯು ಅವರನ್ನು ಎದುರಿಸಲಿದ್ದಾರೆ.

ಒಂದೂವರೆ ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಕೊರಿಯಾದ ಲೀಡ್ ಡಾಂಗ್ ಕಿಯುನ್‌ರನ್ನು 18-21, 21-16, 21-19 ಸೆಟ್‌ಗಳಿಂದ ಸೋಲಿಸಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾದ 5ನೆ ಶ್ರೇಯಾಂಕದ ಲೂ ಚೆಂಗ್ ಹಾಗೂ ಝಾಂಗ್ ನಾನ್ ವಿರುದ್ಧ 36 ನಿಮಿಷಗಳ ಹೋರಾಟದಲ್ಲಿ 21-13 ಹಾಗೂ 21-13 ನೇರ ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News