×
Ad

ವೈದ್ಯಕೀಯ ಸೇವೆ ಸಹಜ ಸ್ಥಿತಿಗೆ ತನ್ನಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2017-11-16 21:02 IST

ಬೆಂಗಳೂರು, ನ.16: ಸಮಾಜದ ಹಿತದೃಷ್ಟಿಯಿಂದ ಈ ಕೂಡಲೇ ಖಾಸಗಿ ವೈದ್ಯರುಗಳು ಪ್ರತಿಭಟನೆಯನ್ನು ಕೈಬಿಡಬೇಕು, ರಾಜ್ಯ ಸರಕಾರ ಶುಕ್ರವಾರ ಬೆಳಗ್ಗೆಯೊಳಗೆ ಸಮಸ್ಯೆಯನ್ನು ಇತ್ಯರ್ಥಪಡಿಸಿ ವೈದ್ಯಕೀಯ ಸೇವೆ ಸಹಜ ಸ್ಥಿತಿಗೆ ಬರುವಂತೆ ನೋಡಿಕೊಳ್ಳಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಖಾಸಗಿ ವೈದ್ಯರ ಪ್ರತಿಭಟನೆ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಸರಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತು.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಪ್ರತಿಭಟನೆ ಮಾಡುತ್ತಿರುವ ವೈದ್ಯರ ಲೈಸೆನ್ಸ್ ರದ್ದುಗೊಳಿಸಬೇಕು, ಪ್ರತಿಭಟನಾನಿರತ ಖಾಸಗಿ ಆಸ್ಪತ್ರೆಗಳ ಮಾನ್ಯತೆ ರದ್ದುಗೊಳಿಸಿ ಸರಕಾರದ ವಶಕ್ಕೆ ಪಡೆಯಬೇಕು, ಕೂಡಲೇ ಒಪಿಡಿ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಪ್ರಾರಂಭಿಸಬೇಕು, ಸರಕಾರ ಕೂಡ ವೈದ್ಯರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆಗೆ ನಿರ್ದೇಶಿಸಿ ಎಂದು ಮನವಿ ಮಾಡಿದರು.

ನಂತರ ವೈದ್ಯಕೀಯ ಸಂಘಟನೆಗಳ ಪರ ವಾದಿಸಿದ ವಕೀಲ ಎಸ್.ಬಸವರಾಜ್ ಅವರು, ಕೆಲವು ವೈದ್ಯಕೀಯ ಸಂಘಟನೆಗಳು ವೈದ್ಯಕೀಯ ಸಚಿವರ ನಡವಳಿಕೆಗೆ ಬೇಸತ್ತು ಪ್ರತಿಭಟನೆ ಮಾಡುತ್ತಿವೆ. ಅದರ ಹೊರತಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ ಎಂದರು.

ಸರಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯ್ಕೋ ಅವರು, ಎಲ್ಲ ವೈದ್ಯರ ಸಂಘಟನೆಗಳೊಂದಿಗೆ ಚರ್ಚೆಗೆ ಸರಕಾರ ನಿರ್ಧಾರ ಕೈಗೊಳ್ಳಲಾಗುತ್ತದೆ. ಖುದ್ದು ವೈದ್ಯ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ ಎಂದು ಸಮಸ್ಯೆ ಬಗಹರಿಸುವ ಕುರಿತು ನ್ಯಾಯಪೀಠಕ್ಕೆ ಎಜಿ ಭರವಸೆ ನೀಡಿದರು.

ಕೂಡಲೇ ವೈದ್ಯಕೀಯ ಸಂಘಟನೆಗಳು ಮುಷ್ಕರ ಹಿಂಪಡೆದರೆ ಸಾರ್ವಜನಿಕರಿಗೆ ತುಂಬಾ ಒಳ್ಳೆಯದಾಗುತ್ತದೆ. ಬಿಲ್ ಇನ್ನು ಜಾರಿಗೆ ಬಂದಿಲ್ಲ, ಸದನದಲ್ಲಿ ಮಂಡನೆಯೂ ಆಗಿಲ್ಲ, ಅದಾಗಿಯೂ ಸಿಎಂ ಖುದ್ದು ಸಮಸ್ಯೆ ಬಗೆಹರಿಸಲು ವೈದ್ಯರೊಂದಿಗೆ ಚರ್ಚಿಸಿ ವೈದ್ಯರ ಸಲಹೆ ಮೇರೆಗೆ ಬಿಲ್ ಲೋಪದೋಷಗಳ ತಿದ್ದುಪಡಿಗೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಇವತ್ತು ಅಥವಾ ನಾಳೆ ತುರ್ತು ಸಭೆ ನಡೆಸುತ್ತೇವೆ. ವೈದ್ಯಕೀಯ ಸಂಘದ ಪದಾಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ ಎಂದು ಪೀಠಕ್ಕೆ ಎಜಿ ಹೇಳಿಕೆ ನೀಡಿದರು.

ವಾದ ಪ್ರತಿವಾದ ಆಲಿಸಿದ ಹಂಗಾಮಿ ಸಿಜೆ ಎಚ್.ಜಿ ರಮೇಶ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅದೇನೆ ಇರಲಿ ನಿಮ್ಮ ಸಮಸ್ಯೆ ಕುರಿತು ಮುಂದೆ ನೋಡೋಣ, ಕೂಡಲೇ ಪ್ರತಿಭಟನೆ ಹಿಂಪಡೆಯಿರಿ ಎಂದು ಖಾಸಗಿ ಆಸ್ಪತ್ರ್ರೆ ಒಕ್ಕೂಟಗಳಿಗೆ ಮನವಿ ಮಾಡಿತು. ಒಂದು ದಿನದಲ್ಲಿ ರೋಗಿಗಳ ಸ್ಥಿತಿ ಏನಾಗಲಿದೆ ಎನ್ನುವುದನ್ನು ಮನಗಾಣಿ, ಸಮಸ್ಯೆಯಲ್ಲಿರುವ ರೋಗಿಗಳ ಬಗ್ಗೆ ಗಮನಹರಿಸಿ ಎಂದು ವೈದ್ಯರಿಗೆ ಸಲಹೆ ನೀಡಿತು.

ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಮುಷ್ಕರ ಕೂಡಲೇ ಕೈಬಿಡಿ ಎಂದು ಪದೇ ಪದೇ ಮನವಿ ಮಾಡಿತು. ನಂತರ ವಿಚಾರಣೆಯನ್ನು ಶುಕ್ರವಾರ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಿದ್ದು, ಅಷ್ಟರಲ್ಲಿ ಎಲ್ಲವೂ ಬಗೆಹರಿದಿರಬೇಕೆಂದು ಸರಕಾರ, ವೈದ್ಯಕೀಯ ಸಂಘಗಳಿಗೆ ನ್ಯಾಯಪೀಠವು ಸೂಚನೆ ನೀಡಿತು.

ನಂತರ ಪ್ರಕರಣ ಸಂಬಂಧ ಮಾಹಿತಿ ನೀಡಿದ ವಕೀಲ ಸುನೀಲ್ ಕುಮಾರ್, ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ ಮುಷ್ಕರ ಹಿಂಪಡೆಯಲು ವೈದ್ಯರಿಗೆ ಮನವಿ ಮಾಡಿತು. ಕಾನೂನು ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಸಲಹೆ ನೀಡಿತು. ಆದರೆ ವೈದ್ಯರ ಪರ ವಕೀಲರು ಕಾಲಾವಕಾಶ ಕೋರಿದರು. ಹೆಚ್ಚಿನ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಾಲಯ ಇಂದು ಸಂಜೆ ಸಭೆಗಳನ್ನು ನಡೆಸಿ ತೀರ್ಮಾನಕ್ಕೆ ಬರಬೇಕು, ನಾಳೆ ಅರ್ಜಿ ವಿಚಾರಣೆ ಬರುವಷ್ಟರಲ್ಲಿ ಸಮಸ್ಯೆ ಇತ್ಯರ್ಥವಾಗಿರಬೇಕು ಎಂದು ಸರಕಾರ ಮತ್ತು ವೈದ್ಯಕೀಯ ಒಕ್ಕೂಟಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News