×
Ad

ನನ್ನ ಗುರಿ ‘ಗ್ಲೋಬಲ್ ಟೆಕ್ನಾಲಜಿ ಹಬ್’: ಸಿಎಂ ಸಿದ್ದರಾಮಯ್ಯ

Update: 2017-11-16 21:36 IST

ಬೆಂಗಳೂರು, ನ.16: ಕರ್ನಾಟಕವು ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಮುಂದಿದ್ದು, ಭವಿಷ್ಯದಲ್ಲಿ ‘ಗ್ಲೋಬಲ್ ಟೆಕ್ನಾಲಜಿ ಹಬ್’ ಮಾಡುವುದೇ ನನ್ನ ಪ್ರಮುಖ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಮೂರು ದಿನಗಳ ಕಾಲ ಆಯೋಜಿಸಿರುವ ‘ಬೆಂಗಳೂರು ಟೆಕ್ ಸಮಿಟ್’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವರ್ಲ್ಡ್ ಎಕನಾಮಿಕ್ ಫೋರಂ ಪಟ್ಟಿ ಮಾಡಿರುವ ವಿಶ್ವದ 25 ಹೈಟೆಕ್ ನಗರಗಳ ಪೈಕಿ ರಾಜಧಾನಿ ಬೆಂಗಳೂರು ಕೂಡ ಸೇರಿದೆ. ಎಕನಾಮಿಕ್ಸ್ ಇಂಟಲಿಜೆಂಟ್ಸ್ ಯುನಿಟ್ ರ್ಯಾಂಕಿಂಗ್‌ನಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲೂ ಈ ಶ್ರೇಣಿಯನ್ನು ಮುಂದುವರೆಸಿಕೊಂಡು ಹೋಗಲಿದ್ದೇವೆ. ಇದರೊಟ್ಟಿಗೆ ಕರ್ನಾಟಕವನ್ನು ಗ್ಲೋಬಲ್ ಟೆಕ್ನಾಲಜಿ ಹಬ್ ಮಾಡಲು ಬೇಕಾದ ಎಲ್ಲ ರೀತಿಯ ಅವಕಾಶವನ್ನು ರಾಜ್ಯ ಸರಕಾರ ನೀಡುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಐಟಿ-ಬಿಟಿ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಈ ಇಲಾಖೆಯಿಂದ ರೋಬೊಟಿಕ್ಸ್, 3ಡಿ ಪ್ರಿಂಟಿಂಗ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನನ್ನು ಉತ್ತೇಜಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಲ್ಲದೇ, ಮಾಹಿತಿ ತಂತ್ರಜ್ಞಾನ, ಏರೋಸ್ಪೇಸ್, ಅನಿಮೇಶನ್ ವಿಶ್ಯುವಲ್ ಎಫೆಕ್ಟ್, ಜೈವಿಕ ತಂತ್ರಜ್ಞಾನ ಇತರೆ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆ, ನೂತನ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.

ಮೂರು ದಿನಗಳ ಕಾಲ ನಡೆಯುವ ಟೆಕ್ ಸಮಿಟ್ ಮೂಲಕ ಸಾಕಷ್ಟು ಸಾರ್ಟ್ ಅಪ್‌ಗಳಿಗೆ ಅವಕಾಶ ನೀಡಲಾಗಿದೆ. ಹೊಸಬರ ವಿನೂತನ ಯೋಜನೆಗಳಿಂದ ಭವಿಷ್ಯದಲ್ಲಿ ಕರ್ನಾಟಕವನ್ನು ಐಟಿ ಕ್ಷೇತ್ರದಲ್ಲಿ ಮೊದಲನೇ ಸ್ಥಾನಕ್ಕೆ ಏರಲಿದೆ ಎಂದು ಭರವಸೆ ನೀಡಿದರು.

ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಬೆಂಗಳೂರಿನಲ್ಲಿ 1.25 ಲಕ್ಷಕ್ಕೂ ಹೆಚ್ಚು ಮುಖ್ಯ ಪರೀಕ್ಷಕರು ಮತ್ತು ವಿನ್ಯಾಸಕಾರರು ಇದ್ದಾರೆ. 200ಕ್ಕಿಂತಲೂ ಹೆಚ್ಚು ವಿನ್ಯಾಸ ಕಂಪೆನಿಗಳೊಂದಿಗೆ ಭಾರತ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. ಇನ್ನು, ಬೆಂಗಳೂರಿನ ಐಟಿ-ಬಿಟಿಯಲ್ಲಿ 1.50 ಲಕ್ಷ ಉದ್ಯೋಗಗಳು ಹೊಸದಾಗಿ ಸೃಷ್ಟಿಯಾಗುತ್ತಿವೆ. ಮುಂದಿನ 4 ವರ್ಷದಲ್ಲಿ ಐಟಿ-ಬಿಟಿ ಮತ್ತು ಇತರೆ ಉತ್ಪಾದನಾ ವಲಯದಲ್ಲಿ 53 ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರಕಾರ ವಿವಿಧ ನಿಧಿಗಳನ್ನು ಸ್ಥಾಪಿಸಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಫಿನ್‌ಲ್ಯಾಂಡ್‌ನ ಸಾರಿಗೆ ಮತ್ತು ಸಂವಹನ ಸಚಿವೆ ಮಾನ್ಯ ಆಯಾನೆ ಬರ್ನರ್, ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಸುಭಾಷ್ ಸಿ ಕುಂಟಿಯಾ, ವಿಜಿಬಿಟಿ ಅಧ್ಯಕ್ಷ ಎಸ್.ಗೋಪಾಲಕೃಷ್ಣನ್, ಐಬಿಎಂ ಇಂಡಿಯಾ ಅಧ್ಯಕ್ಷೆ ವನಿತಾ ನಾರಾಯಣ್, ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ನಿರ್ದೇಶಕ ಡಾ. ಓಂಕಾರ ರೈ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News