ನಾಳೆಯಿಂದ ಖಾಸಗಿ ಆಸ್ಪತ್ರೆಗಳ ಒಪಿಡಿ ಕಾರ್ಯಾಚರಿಸಲಿವೆ: ಫನಾ ಅಧ್ಯಕ್ಷ ಜಯಣ್ಣ
ಬೆಂಗಳೂರು, ನ.16: ಸಾರ್ವಜನಿಕರ ಹಿತದೃಷ್ಟಿಯಿಂದ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆಯನ್ನು ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯುತ್ತಿದ್ದು, ನಾಳೆಯಿಂದ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳ ಒಪಿಡಿಗಳು ತೆರೆಯಲಿವೆ ಎಂದು ಫನಾ ಅಧ್ಯಕ್ಷ ಜಯಣ್ಣ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಮಸೂದೆಯಲ್ಲಿ ಕೆಲವೊಂದು ತಿದ್ದುಪಡಿ ತರುವುದಾಗಿ ಸರಕಾರ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಸಮಸ್ಯೆಗಳಾಗಬಾರದು ಎಂಬ ಸದುದ್ದೇಶದಿಂದ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ ಎಂದು ಹೇಳಿದರು.
ಬೆಂಗಳೂರಲ್ಲಿ ಪ್ರತಿಭಟನೆಯನ್ನು ಹಿಂಪಡೆದಿದ್ದರೂ ಬೆಳಗಾವಿಯಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ. ರೋಗಿಗಳಿಗೆ ಸೇವೆಯನ್ನು ಸಲ್ಲಿಸುತ್ತಲೇ ಬೆಂಗಳೂರಿನ ವೈದ್ಯರು ಹೋರಾಟವನ್ನು ಮುಂದುವರೆಸುತ್ತೇವೆ. ಕೂಡಲೇ ಸರಕಾರ ಖಾಸಗಿ ವೈದ್ಯರ ಬದುಕಿಗೆ ಕಂಟಕವಾಗಿರುವ ಮಸೂದೆ ತಿದ್ದುಪಡಿಯಾಗಲೇಬೇಕು ಎಂದು ಅವರು ಆಗ್ರಹಿಸಿದರು.