×
Ad

ಸಪ್ತಾಹದ ಹೆಸರಲ್ಲಿ ಅಕ್ರಮ: ಆರೋಪ

Update: 2017-11-16 21:55 IST

ಬೆಂಗಳೂರು, ನ.16: ‘ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆ ಹೆಸರಲ್ಲಿ ಸಹಕಾರಿ ಸಂಘಗಳಿಂದ ಅನಧಿಕೃತವಾಗಿ ದೇಣಿಗೆ ಸಂಗ್ರಹಿಸಿ ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ’ ಎಂದು ಬಿಜೆಪಿಯ ಯಶವಂತಪುರ ಘಟಕದ ಅಧ್ಯಕ್ಷ ಸಿ.ಎಂ.ಮಾರೇಗೌಡ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ವಸತಿ ಮಹಾಮಂಡಳದ ಅಧ್ಯಕ್ಷರಾಗಿರುವ ಸೋಮಶೇಖರ್ ಸಪ್ತಾಹ ಆಚರಣೆಯ ನೇತೃತ್ವ ವಹಿಸಿದ್ದಾರೆ. ಸಹಕಾರಿ ತತ್ವಗಳ ಕುರಿತು ಸದಸ್ಯರಿಗೆ ಅರಿವು ಮೂಡಿಸಲು, ಸಹಕಾರಿ ರಂಗವನ್ನು ಬಲಪಡಿಸಲು ಇಂತಹ ಸಪ್ತಾಹಗಳನ್ನು ಆಯೋಜಿಸಬೇಕು. ಆದರೆ, ಸೋಮಶೇಖರ್ ಅವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ವ್ಯಾಪ್ತಿಯ ಸಂಘಗಳಿಂದ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಅದನ್ನು ನ.14 ರಿಂದ 19ರ ವರೆಗೆ ನಡೆಯುತ್ತಿರುವ ಸಪ್ತಾಹದಲ್ಲಿ ದುಂದುವೆಚ್ಚ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಸೇರಿಸಲು ದೊಡ್ಡ ಪೆಂಡಾಲು ಹಾಕಲು, ಅವರಿಗೆ ಬೆಳ್ಳಿ ಬಟ್ಟಲು, ಬಟ್ಟೆ ಹಾಗೂ ಡ್ರೈಫ್ರೂಟ್ಸ್ ನೀಡಲು ದೇಣಿಗೆ ಹಣ ಬಳಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಹಕಾರಿ ರಂಗವನ್ನು ಪ್ರೋತ್ಸಾಹಿಸಬೇಕಾದ ಸಪ್ತಾಹ ಇಂದಿರಾಗಾಂಧಿ ಜಯಂತ್ಯುತ್ಸವವಾಗಿ ಮಾರ್ಪಟ್ಟಿದ್ದೆ. ಈ ಅಕ್ರಮಕ್ಕೆ ಸಹಕಾರಿ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಲು ಆದಷ್ಟು ಬೇಗೆ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News