×
Ad

ಸರಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ ರೋಗಿಗಳು

Update: 2017-11-16 22:09 IST

ಬೆಂಗಳೂರು, ನ.16: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದಿಂದ ಬಹುತೇಕ ರೋಗಿಗಳು ಸರಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದು, ನಗರದ ಪ್ರಮುಖ ಸರಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೋರಿಂಗ್, ವಾಣಿವಿಲಾಸ್, ಕೆ.ಸಿ.ಜನರಲ್, ಇಎಸ್‌ಐ ಆಸ್ಪತ್ರೆಗಳಲ್ಲಿ ಕಳೆದ 4ದಿನಗಳಲ್ಲಿ ಎಂದಿಗಿಂತ ಹೆಚ್ಚಿನ ರೋಗಿಗಳು ದಾಖಲಾಗಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಕೂಡ ರೋಗಿಗಳು ಸರಕಾರಿ ಆಸ್ಪತ್ರೆಗಳತ್ತ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು. ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯೇತರ ಸಿಬ್ಬಂದಿ ರಜೆ ಪಡೆಯದಂತೆ, ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಿರಬೇಕೆಂದು ಸರಕಾರ ಸೂಚನೆ ನೀಡಿದ್ದು, ದಿನದ 24 ಗಂಟೆಯೂ ಆರೋಗ್ಯ ಸೇವೆ ಲಭ್ಯವಿದೆ.

ಬೆಳಗ್ಗೆನಿಂದಲೇ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ಗಿಜಿಗುಡುತ್ತಿದ್ದವು. ಎಂದಿಗಿಂತ ಶೇ.25ರಷ್ಟು ರೋಗಿಗಳು ಬಂದ ಕಾರಣ, ಚೀಟಿ ಪಡೆಯಲು, ವೈದ್ಯರಿಂದ ತಪಾಸಣೆಗೊಳಗಾಗಲು ರೋಗಿಗಳು ಹಲವು ಗಂಟೆಗಳ ಕಾಲ ಕಾಯಬೇಕಾಯಿತು. ಎಲ್ಲ ಆಸ್ಪತ್ರೆಗಳ ಮುಂದೆ ಕ್ಯೂ ಮಾಮೂಲಾಗಿತ್ತು. ಆದರೆ, ವೈದ್ಯರು ಹಾಗೂ ಸಿಬ್ಬಂದಿಗಳು ಬಿಡುವಿಲ್ಲದಂತೆ ರೋಗಿಗಳತ್ತ ಗಮನ ಹರಿಸಿ, ಚಿಕಿತ್ಸೆಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಯಿತು.

ಖಾಸಗಿ ಆಸ್ಪತ್ರೆಗಳಲ್ಲಿರುವ ಎಲ್ಲ ಸೌಲಭ್ಯಗಳು ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿದೆ. ಮುಖ್ಯವಾಗಿ ಸ್ಕಾನಿಂಗ್, ಎಕ್ಸ್ ರೇ, ಡಯಾಲಿಸಸ್, ಕಿಮೋಥೆರಪಿ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಸರಕಾರಿ ಆಸ್ಪತ್ರೆಗಳಲ್ಲೂ ಇದೆ. ಆದರೆ, ಸರಕಾರಿ ಆಸ್ಪತ್ರೆಗಳ ಮೇಲಿನ ಅಸಡ್ಡೆಯಿಂದಾಗಿ ಮಧ್ಯಮ ವರ್ಗ ಹಾಗೂ ಶ್ರೀಮಂತರು ಸರಕಾರಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿರಲಿಲ್ಲ. ಈಗ ಅನಿವಾರ್ಯವಾಗಿ ಸರಕಾರಿ ಆಸ್ಪತ್ರೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು.

ಮುಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳನ್ನು ಸ್ವಚ್ಛವಾಗಿಟ್ಟು, ಸೌಲಭ್ಯಗಳನ್ನು ಸುಸ್ಥಿತಿಯಲ್ಲಿಟ್ಟು, ದಕ್ಷ ವೈದ್ಯರನ್ನು ನೇಮಿಸಿದರೆ ಸಾರ್ವಜನಿಕ ಆಸ್ಪತ್ರೆಗಳತ್ತ ಜನ ಬರುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ರೋಗಿ ಸುಬ್ಬಣ್ಣನವರು.

-ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
-ಸರಕಾರಿ ವೈದ್ಯರ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ
-ಮಸೂದೆ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ
-ವೈದ್ಯರ ಮುಷ್ಕರವನ್ನು ಖಂಡಿಸಿ ದಲಿತ ಸಂಘಟನೆಗಳು ಪ್ರತಿಭಟನೆ

ಮಸೂದೆ ಬೆಂಬಲಿಸಿ ಅಭಿಯಾನ
ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಬೆಂಬಲಿಸಿ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಯುವಜನತೆ ಅಭಿಯಾನವನ್ನು ಆರಂಭಿಸಿದ್ದಾರೆ. ಹಾಗೂ ಮಸೂದೆಯನ್ನು ವಿರೋಧಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಮಸೂದೆ ಪರವಾಗಿರುವ ಸಚಿವ ರಮೇಶ್‌ಕುಮಾರ್‌ಗೆ ನಮ್ಮ ಬೆಂಬಲವಿದೆ. ಕೆಎಂಪಿಇ ಕಾಯ್ದೆಗೂ ಬೆಂಬಲವಿದೆ ಎಂಬ ಹ್ಯಾಷ್‌ಟ್ಯಾಗ್‌ಗಳು ಸಾವಿರಾರು ಸಂಖ್ಯೆಯಲ್ಲಿ ಪ್ರಕಟಿಸಲಾಗಿದೆ. ಹಾಗೂ ಖಾಸಗಿ ವೈದ್ಯರು ಹಾಕುವ ಮನಸೋಯಿಚ್ಛೆ ಶುಲ್ಕಗಳನ್ನು ಕುರಿತು ತಮ್ಮ ಅನುಭವಗಳನ್ನು ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡು ಮಸೂದೆ ಪರವಾಗಿ ಅಭಿಯಾನ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News