ಸರಕಾರಿ ವೈದ್ಯರು 24 ತಾಸು ಸೇವೆಗೆ ಸನ್ನದ್ಧರಾಗಿರಿ: ಮೇಯರ್ ಸಂಪತ್‌ರಾಜ್
ಬೆಂಗಳೂರು, ನ.16: ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಸ್ಪತ್ರೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಹೆರಿಗೆ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ದಿನದ 24 ಗಂಟೆಗಳ ಕಾಲ ಸಜ್ಜಾಗಿರಬೇಕು ಎಂದು ಮೇಯರ್ ಸಂಪತ್‌ರಾಜ್ ಪಾಲಿಕೆಯ ವೈದ್ಯರಿಗೆ ಆದೇಶಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಸಂಬಂಧ ವೈದ್ಯರು ಕೇಳುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕಳೆದ 5 ವರ್ಷಗಳ ಹಿಂದೆ ಪಾಲಿಕೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೈದ್ಯರನ್ನು ಕೂಡಲೇ ಸಂಪರ್ಕಿಸಿ, ಅವರ ಸೇವೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಬಡ, ಮಧ್ಯಮ ವರ್ಗದ ರೋಗಿಗಳಿಂದ ಸುಲಿಗೆ ಮಾಡುವುದು ಮಾಮೂಲಿಯಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಜನಪರವಾದ ಮಸೂದೆಯನ್ನು ತರಲು ಉದ್ದೇಶಿಸಿದ್ದಾರೆ. ಆದರೆ, ಖಾಸಗಿ ವೈದ್ಯರು ರೋಗಿಗಳನ್ನು ಒತ್ತೆಯಾಳಗಿಟ್ಟುಕೊಂಡು ಮಸೂದೆಯನ್ನು ಹಿಂಪಡೆಯುವಂತೆ ಸರಕಾರಕ್ಕೆ ಬೆದರಿಕೆ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರಿ ವೈದ್ಯರ ಪಾತ್ರ ಮಹತ್ವದಾಗಿದೆ ಎಂದು ಅವರು ಹೇಳಿದರು.
ಬಿಬಿಎಂಪಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿನ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿದೆಯೇ ಇಲ್ಲವೇ ಎಂಬುದರ ಮೇಲ್ವಿಚಾರಣೆ ನೋಡಿಕೊಳ್ಳಬೇಕು ಎಂದು ಮೇಯರ್ ಸಂಪತ್‌ರಾಜ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಮುಖ್ಯ ವೈದ್ಯಾಧಿಕಾರಿಗಳು, ವೈದ್ಯರ ತಂಡಗಳು ಭಾಗಿಯಾಗಿದ್ದರು.