ಮೆಟ್ರೊ ನಿಲ್ದಾಣದಲ್ಲಿ ಪತ್ರಕರ್ತೆಗೆ ಕಿರುಕುಳ: ಆರೋಪಿಯ ಬಂಧನ

Update: 2017-11-17 15:24 GMT

ಹೊಸದಿಲ್ಲಿ, ನ.17: ಪತ್ರಕರ್ತೆಯೊಬ್ಬರಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಘಟನೆ ಇಲ್ಲಿನ ಐಟಿಒ ಮೆಟ್ರೊ ಸ್ಟೇಶನ್‌ನಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಿರುಕುಳದ ದೃಶ್ಯಾವಳಿಯು ದಾಖಲಾಗಿದ್ದು, ನಿಲ್ದಾಣದ ಒಳಗೆ ಪ್ರವೇಶಿಸುತ್ತಿದ್ದ ಮಹಿಳೆಗೆ ಆರೋಪಿಯು ಕಿರುಕುಳ ನೀಡಿ ಓಡುತ್ತಿರುವುದು ಮತ್ತು ಆತನನ್ನು ಪತ್ರಕರ್ತೆಯು ಬೆನ್ನಟ್ಟುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಪೊಲೀಸ್ ಆಯುಕ್ತರಾದ (ಮೆಟ್ರೊ) ಪಂಕಜ್ ಸಿಂಗ್, ಈ ಘಟನೆಯು ನವೆಂಬರ್ 13ರ ರಾತ್ರಿ ಸಂಭವಿಸಿದ್ದು, ಈ ಬಗ್ಗೆ ದೂರು ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಯು ಐಟಿಒ ಮೆಟ್ರೊ ನಿಲ್ದಾಣದಲ್ಲಿರುವ ಚಹಾ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ನಾವು ಆರೋಪಿಯ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಿದ್ದೆವು. ಆತನ ಭಾವಚಿತ್ರವನ್ನು ನಾವು ಐದು ಸಾವಿರಕ್ಕೂ ಅಧಿಕ ಜನರಿಗೆ ತೋರಿಸಿದ್ದೆವು. ಇದರಿಂದ ಆತನನ್ನು ಗುರುತಿಸಿ ಬಂಧಿಸುವುದು ಸುಲಭವಾಯಿತು ಎಂದವರು ತಿಳಿಸಿದ್ದಾರೆ.

ಆರೋಪಿ ಅಪರಾಧ ಹಿನ್ನೆಲೆಯನ್ನು ಹೊಂದಿಲ್ಲ. ಆತನ ವಿರುದ್ಧ ಹಿಂದೆ ಯಾವುದೇ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದರು.

ಐಟಿಒ ಮೆಟ್ರೊ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ನಾವು ಈಗಾಗಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಮನವಿ ಮಾಡಿದ್ದೇವೆ. ಮೆಟ್ರೊ ಪೊಲೀಸ್ ಕೂಡಾ ಇಂಥಾ ಘಟನೆಗಳ ವೇಳೆ ನೆರವಾಗಲು 23 ಬೂತ್‌ಗಳನ್ನು ತೆರೆದಿದ್ದಾರೆ. ನಮ್ಮ ಪೊಲೀಸರು ಪ್ರಮುಖ ಕಡೆಗಳಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂದು ಸಿಂಗ್ ವಿವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News