ಕಂಪ್ಯೂಟರ್‌ಗಳಲ್ಲಿ ಕನ್ನಡ ಬಳಸಲು ಈಗ ಸಮಸ್ಯೆಗಳಿಲ್ಲ

Update: 2017-11-18 12:07 GMT

ಎಲ್ಲಾ ಆಧುನಿಕ ಕಂಪ್ಯೂಟರ್ ಒ.ಎಸ್.ಗಳಲ್ಲಿ ಮತ್ತು ಅವುಗಳ ಮೇಲೆ ಕಾರ್ಯನಿರ್ವಹಿಸುವ ಅನ್ವಯಿಕ ತಂತ್ರಾಂಶಗಳಲ್ಲಿ ಕನ್ನಡವನ್ನು ಬಳಸುವಲ್ಲಿ ಈ ಹಿಂದೆ ಇದ್ದ ತಾಂತ್ರಿಕ ತೊಡಕುಗಳು ಈಗ ಇಲ್ಲವಾಗಿವೆ.

ಸಹಜ ಭಾಷೆಗಳ ಲಿಪಿಯನ್ನು ಕಂಪ್ಯೂಟರ್ ಮೊದಲಿಗೆ ಸೃಜಿಸುವಂತೆ, ನಂತರ ದಾಖಲಿಸುವಂತೆ, ದಾಖಲಿಸಿದ ಲಿಪಿಯನ್ನು ಮತ್ತೆ ಗುರುತಿಸುವಂತೆ ಒಂದು ಸದೃಢವಾದ, ಖಚಿತ ವಾಗಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ವ್ಯವಸ್ಥೆಯನ್ನು ನಿರ್ಮಿ ಸುವುದೇ ಭಾಷಾ ಲಿಪಿತಂತ್ರಜ್ಞಾನದ ಪ್ರಮುಖ ಕಾರ್ಯವಾಗಿದೆ. ಭಾಷಾಲಿಪಿಗಳನ್ನು ಮೊದಲಿಗೆ ಕಂಪ್ಯೂಟರ್‌ನಲ್ಲಿ ಅಳವಡಿಸು ವುದಕ್ಕೆ 'ಲಾಂಗ್ವೇಜ್ ಸ್ಕ್ರಿಪ್ಟ್ ಎನೇಬಲಿಂಗ್' ಎನ್ನಲಾಗಿದೆ. ಸಹಜ ಭಾಷೆಯ ಚಾಕ್ಷುಕ ರೂಪವಾದ ಲಿಪಿಗಳನ್ನು ಕಂಪ್ಯೂಟರ್ ಗುರುತಿಸುವಂತೆ ರೂಪಿಸುವ ವ್ಯವಸ್ಥೆಯು ಬಹಳ ಸಂಕೀರ್ಣ ವಾದುದು ಹಾಗೂ ಹಲವು ತಂತ್ರಜ್ಞಾನಗಳ ಸಮಗ್ರೀಕರಣ ವಾಗಿದೆ. ಇಂತಹ ತಂತ್ರಜ್ಞಾನಗಳನ್ನು ಬಳಸಿಯೇ ಭಾರತೀಯ ತಂತ್ರಾಂಶ ತಯಾರಕರು ತಾಂತ್ರಿಕವಾಗಿ ಕ್ಲಿಷ್ಟಕರವಾಗಿರುವ ದೇಸೀ ಭಾಷಾಲಿಪಿಗಳಿಗೆ 'ಡಿಜಿಟಲ್' ಕಿರೀಟವನ್ನು ತೊಡಿಸುವಲ್ಲಿ ಯಶಸ್ವಿಯಾದರು. ಭಾರತೀಯ ಭಾಷಾಲಿಪಿಗಳ ಸೌಂದರ್ಯ ಹೆಚ್ಚಿಸುವ ವೈವಿಧ್ಯಮಯ ಫಾಂಟ್‌ಗಳನ್ನೂ ಸಹ ಸಿದ್ಧಪಡಿಸಿದರು.

ಪಠ್ಯವನ್ನು ಊಡಿಸಲು ಬಹುರೀತಿಯ ಕೀಲಿಮಣೆ ವಿನ್ಯಾಸಗಳನ್ನೂ ನೀಡಿದರು. ಆದಾಗ್ಯೂ, ಬಳಕೆದಾರರಿಗೆ ಕಂಪ್ಯೂಟರ್ ಭಾಷಾ ಬಳಕೆಯಲ್ಲಿ ಹಲವು ಸಮಸ್ಯೆಗಳು ಇದ್ದವು. ಅಂತಾರಾಷ್ಟ್ರೀಯ ಮಟ್ಟದ ತಂತ್ರಾಂಶ ತಯಾರಕರು, ಈ ಹಿಂದೆ, ತಮ್ಮ ತಂತ್ರಾಂಶಗಳಲ್ಲಿ ಭಾರತೀಯ ಭಾಷಾ ಲಿಪಿಗಳ ಬಳಕೆಗಾಗಿ ಸೌಲಭ್ಯಗಳನ್ನು ನೀಡಿರಲಿಲ್ಲ. ಆಗ, ಭಾರತೀಯ ಭಾಷೆಗಳ ಪಠ್ಯ ವನ್ನು ಗಣಕೀಕರಿಸಲು ರಾಷ್ಟ್ರೀಯ ತಂತ್ರಾಂಶ ತಯಾರಕರು ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿದರು. ಕಂಪ್ಯೂಟರ್‌ನಲ್ಲಿ ಪಠ್ಯವನ್ನು ಕೀಲಿಮಣೆ ಬಳಸಿ ಊಡಿಸುವುದು; ಊಡಿಸಿದ ಪಠ್ಯವು ಸರಿಯಾಗಿ ಮಾನಿಟರ್ ಪರದೆಯಲ್ಲಿ ಮೂಡಿದೆಯೇ ಎಂದು ನೋಡುವುದು; ಮೂಡಿರುವ ಪಠ್ಯವನ್ನು ಪ್ರಿಂಟರ್ ಬಳಸಿ ಹಾಳೆಯ ಮೇಲೆ ಮುದ್ರಿಸಿಕೊಳ್ಳುವುದು; ಮುದ್ರಿಸಿದ ಪಠ್ಯ ವನ್ನು ಮುಂದೆ ಭವಿಷ್ಯದಲ್ಲಿ ಬಳಸಲು, ಅದನ್ನು ಹಾರ್ಡ್‌ಡಿಸ್ಕ್ ನಲ್ಲಿ ಉಳಿಸುವುದು - ಇವೆಲ್ಲವೂ ಕಂಪ್ಯೂಟರ್ ಬಳಕೆದಾರರ ಕೆಲಸ. ಇವುಗಳನ್ನು ತಂತ್ರಜ್ಞಾನದ ಪರಿಭಾಷೆಯಲ್ಲಿ 'ಪಠ್ಯದ ಇನ್ ಪುಟ್', 'ಪಠ್ಯದ ಸ್ಟೋರೇಜ್', 'ಪಠ್ಯದ ಡಿಸ್‌ಪ್ಲೇ' ಮತ್ತು 'ಪಠ್ಯದ ಪ್ರಿಂಟಿಂಗ್' ಎನ್ನಲಾಗಿದೆ. ಕಂಪ್ಯೂಟರ್‌ತಂತ್ರಜ್ಞಾನ ಬಳಸಿ ಭಾಷೆಯ ಅಕ್ಷರಗಳನ್ನು ಸೂಕ್ತ ರೀತಿಯಲ್ಲಿ ಕಂಪ್ಯೂಟರ್‌ನಲ್ಲಿ ಪ್ರತಿನಿಧಿಸುವ ಮೂಲಕ ಭಾಷಾ ಪಠ್ಯವನ್ನು ಮೂಡಿಸುವುದು, ಸಂಗ್ರಹಿಸುವುದು ಮತ್ತು ಪ್ರದರ್ಶಿಸುವುದು ಹಾಗೂ ಮುದ್ರಿ ಸುವುದು - ಇವೆಲ್ಲವುಗಳ ಏಕೀಕೃತ ವ್ಯವಸ್ಥೆಯನ್ನು 'ಭಾಷಾ ಲಿಪಿವ್ಯವಸ್ಥೆ' ಎನ್ನಲಾಗಿದೆ. ಇಂತಹ ಲಿಪಿವ್ಯವಸ್ಥೆಯನ್ನು ರೂಪಿಸು ವುದು ತಂತ್ರಾಂಶ ತಯಾರಕರ ಹೊಣೆಗಾರಿಕೆಯಾಗಿದೆ. ಕನ್ನಡ ಭಾಷೆಯನ್ನು ಕಂಪ್ಯೂಟರ್‌ನ ಹೊಸ ಹೊಸ ತಂತ್ರಜ್ಞಾನ ಗಳ ಪರಿಧಿಯೊಳಗೆ ತರುವ ಮೂಲಕ, ಇಂದು, ಕಂಪ್ಯೂಟರ್‌ನಲ್ಲಿ ಕನ್ನಡ ಲಿಪಿಯನ್ನು ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಬಳಸಲು ಸಾಧ್ಯವಾಗಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಕನ್ನಡದ ಲಿಪಿವ್ಯವಸ್ಥೆ ಗಳೂ ಸಹ ಆವಿಷ್ಕಾರಗೊಂಡು, ಕಾಲಕಾಲಕ್ಕೆ ಪರಿಷ್ಕರಣೆಗೊಂಡು ಬೆಳವಣಿಗೆ ಕಂಡಿವೆ. ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ತಕ್ಕಂತೆ ಬಗ್ಗಿಸುವ ಕೆಲಸಕ್ಕೆ ಕೈಹಾಕದೆ, ತಂತ್ರಜ್ಞಾನವನ್ನೇ ಕನ್ನಡ ಭಾಷೆಗೆ ಒಗ್ಗಿಸುವ ಕೆಲಸವನ್ನು ಸಮರ್ಥವಾಗಿ ಮಾಡಲಾಗಿದೆ. ಕನ್ನಡ ಭಾಷೆಯ ಪಠ್ಯವನ್ನು - ಕೀಲಿಮಣೆ ಬಳಸಿ ಊಡಿಕೆ (ಇನ್‌ಪುಟ್) ಮಾಡಲು ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹ (ಸ್ಟೋರೇಜ್) ಮಾಡಲು ಹಾಗೂ ತೆರೆಯ ಮೇಲೆ ಪ್ರದರ್ಶನ (ಡಿಸ್‌ಪ್ಲೇ) ಮಾಡಲು - ಸಾಧ್ಯವಾಗಿಸುವ ವ್ಯವಸ್ಥೆಯನ್ನು ಒಟ್ಟಾರೆಯಾಗಿ 'ಕನ್ನಡ ಲಿಪಿವ್ಯವಸ್ಥೆ' ಎನ್ನಲಾಗಿದೆ. ಕನ್ನಡ ಲಿಪಿವ್ಯವಸ್ಥೆಯ ಮೂಲ ಅಂಶಗಳಲ್ಲಿ ಒಂದಾದ, 'ಪಠ್ಯದ ಇನ್‌ಪುಟ್'ಗಾಗಿ ಟೈಪ್‌ರೈಟರ್ ವಿನ್ಯಾಸವೂ ಸೇರಿದಂತೆ, ಬಳಕೆ ದಾರರ ಅಗತ್ಯಕ್ಕೆ ತಕ್ಕಂತೆ ಕಾಲಕಾಲಕ್ಕೆ ವಿವಿಧ ರೀತಿಯ ಕೀಲಿಮಣೆ ವಿನ್ಯಾಸಗಳು ಬಳಕೆಗೆ ಬಂದವು. ಅವುಗಳಲ್ಲಿ ಇನ್‌ಸ್ಕ್ರಿಪ್ಟ್, ಫೋನೋಟಿಕ್, ಟ್ರಾನ್ಸ್‌ಲಿಟರೇಷನ್ ಇತ್ಯಾದಿ ವಿನ್ಯಾಸಗಳು ಪ್ರಮುಖವಾದವು. ನಂತರದಲ್ಲಿ, ಶಿಷ್ಟತೆಗಾಗಿ (ಸ್ಟಾಂಡರ್ಡ್) ಕರ್ನಾಟಕ ಸರಕಾರದಿಂದ ಏಕರೂಪ ಕೀಲಿಮಣೆ ವಿನ್ಯಾಸವು (ಕೆ.ಪಿ.ರಾವ್ ವಿನ್ಯಾಸ) ನಿಗದಿಯಾಯಿತು.

ಲಿಪಿವ್ಯವಸ್ಥೆಯ ಎರಡನೆಯ ಅಂಶವಾದ, 'ಪಠ್ಯದ ಸ್ಟೋರೇಜ್' ಗಾಗಿ, ಮೊದಲಿಗೆ, ಇಂಗ್ಲಿಷ್‌ನ ಮಾದರಿಯಲ್ಲಿಯೇ ಅನುಕರಣಾ ತಂತ್ರಗಳು ಬಳಕೆಗೊಂಡವು. ಇಂಗ್ಲಿಷ್ ಹೊರತಾದ ವಿದೇಶೀ ಭಾಷೆಗಳ ಅಕ್ಷರಸ್ಥಾನಗಳಲ್ಲಿ ಕನ್ನಡ ಅಕ್ಷರಭಾಗಗಳನ್ನು ಸಮೀಕರಿಸಿ ಇರಿಸುವ ತಂತ್ರವನ್ನು ಬಳಸಲಾಯಿತು. ನಂತರದಲ್ಲಿ, ಕನ್ನಡಕ್ಕೆ ಪ್ರತ್ಯೇಕ 'ಸ್ಟೋರೇಜ್ ಕೋಡ್' ಬಳಸುವ ಮೂಲಕ ಕನ್ನಡ ಲಿಪಿಯ ಅಸಂದಿಗ್ಧ ಬಳಕೆಗಾಗಿ ಈಗ ಯೂನಿಕೋಡ್ ((Unicode))ಎಂಬ ಹೆಸರಿನ ಅಂತಾರಾಷ್ಟ್ರೀಯ ಮಾನಕ ಅಥವಾ ಶಿಷ್ಟತೆ ಜಾರಿಗೊಂಡಿದೆ. ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಕಂಪ್ಯೂಟರಿನಲ್ಲಿ ಸ್ಥಾನಮಾನಗಳು ದೊರೆತಿರುವುದರಿಂದ ಈಗ 'ಪಠ್ಯದ ಎನ್‌ಕೋಡಿಂಗ್ ಸಮಸ್ಯೆಗಳು ಪರಿಹಾರಗೊಂಡಿವೆ.

ಲಿಪಿವ್ಯವಸ್ಥೆಯ ಮೂರನೆಯ ಅಂಶವಾದ 'ಪಠ್ಯದ ಡಿಸ್‌ಪ್ಲೇ'ಗಾಗಿ, ವಿವಿಧ ರೀತಿಯ ಅಕ್ಷರರೂಪ, ವಿನ್ಯಾಸಗಳನ್ನು ಹೊಂದಿ ರುವ ನೂರಾರು ಫಾಂಟ್‌ಗಳು ತಯಾರಾಗಿ ಬಳಕೆಯಲ್ಲಿವೆ. ಅಲ್ಲದೆ, ಆಸ್ಕಿ ((American Standard Code for Infor mation Interchange- ASCII))ಆಧಾರಿತ ಪಠ್ಯ ರೂಪದ ಮಾಹಿತಿಗಳ ವಿನಿಮಯಕ್ಕಾಗಿ, ಫಾಂಟ್‌ನ 'ಏಕರೂಪ ಅಕ್ಷರಭಾಗಗಳ ಸಂಕೇತಗಳ (ಗ್ಲಿಫ್ ಕೋಡ್) ಸ್ಟಾಂಡರ್ಡ್ ಸಹ ನಿಗದಿಯಾಗಿದೆ. ಉದಾಹರಣೆಗೆ 'ಕ' ಅಕ್ಷರವನ್ನು ಪ್ರತಿನಿಧಿಸಲು ಎಲ್ಲ ತಂತ್ರಾಂಶ ತಯಾರಕರೂ ಸಹ ನಿಗಿದಿಯಾದ ಒಂದೇ ಸಂಕೇತವನ್ನು ಬಳಸಬೇಕು. ಇಂತಹ ಏಕರೂಪದ ಕೋಡ್‌ಗಳನ್ನು ಬಳಸುವುದರಿಂದ ಹಳೆಯ ಬೇರೆ ಬೇರೆ ಫಾಂಟ್‌ಗಳಲ್ಲಿರುವ ಪಠ್ಯವನ್ನು ಪರಸ್ಪರ ಬದಲಾಯಿಸಿಕೊಳ್ಳಲು ಅನುಕೂಲವಾಗುತ್ತದೆ. ಹಿಂದೆ, ಅಕ್ಷರಭಾಗಗಳ ಸಂಕೇತ ಸಂಖ್ಯೆಗಳು ಒಂದೊಂದು ಫಾಂಟಿ ನಲ್ಲಿ ಒಂದೊಂದು ರೀತಿ ಇದ್ದ ಕಾರಣ, ಬೇರೆ ಬೇರೆ ಫಾಂಟ್ ಬಳಸಿ ಟೈಪ್ ಮಾಡಿದ ಪಠ್ಯಗಳನ್ನು ಮತ್ತೊಂದು ಫಾಂಟ್ ಬಳಸಿ ತೆರೆದು ಉಪಯೋಗಿಸಲು ಸಾಧ್ಯವಿರಲಿಲ್ಲ. ಕನ್ನಡ ಲಿಪಿಯನ್ನು ಕಂಪ್ಯೂಟರ್‌ಗಳಲ್ಲಿ ಇಂಗ್ಲಿಷ್‌ನಷ್ಟೇ ಸಮರ್ಥ ವಾಗಿ ಬಳಸುವಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಕೊಳ್ಳಲು, ಇಂದಿನ ಕನ್ನಡ ಲಿಪಿವ್ಯವಸ್ಥೆಗಳಲ್ಲಿ, ಇಂಗ್ಲಿಷ್‌ನೊಂದಿಗೆ ಕನ್ನಡದ ಲಿಪಿಯನ್ನೂ ಏಕಕಾಲಕ್ಕೆ ಬಳಸಬಹುದಾದ ದ್ವಿ-ಭಾಷಾ ಫಾಂಟ್‌ಗಳು ಬಳಕೆಗೆ ಬಂದು ಈಗ ಹಿನ್ನೆಲೆಗೆ ಸರಿದುಹೋಗಿವೆ. ಹಳತಾಗಿರುವ, ಬೇರೆ ಬೇರೆ ತಂತ್ರಾಂಶಗಳ ಮೂಲಕ ಸಿದ್ಧವಾದ ಕನ್ನಡದ ಪಠ್ಯವನ್ನು ಪರಸ್ಪರ ತಂತ್ರಾಂಶಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅನುವುಮಾಡಿಕೊಡುವ 'ಫಾಂಟ್ ಪರಿವರ್ತಕ ಗಳು (ಕನ್‌ವರ್ಟರ್ಸ್‌) ಇಂದು ಲಭ್ಯವಿವೆ. ಮಾಹಿತಿ ವಿನಿಮ ಯಕ್ಕಾಗಿ ಪರಿವರ್ತಕಗಳ ಬಳಸು ಮಾರ್ಗವನ್ನು ತಪ್ಪಿಸಲು ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ 'ಫಾಂಟ್ ಶಿಷ್ಟತೆ'ಗಳು ((Indian Standard Code for Information Interchange- ISCII))ಜಾರಿಯಾಗಿವೆ. ಈಗ ಯೂನಿ ಕೋಡ್ ಹೆಸರಿನ ಅಂತಾರಾಷ್ಟ್ರೀಯ ಶಿಷ್ಟತೆಯ ಅನುಸಾರ ಕನ್ನಡದ ಲಿಪಿವ್ಯವಸ್ಥೆಯು ಆಪರೇಟಿಂಗ್ ಸಿಸ್ಟಂನಲ್ಲಿಯೇ (ಒ.ಎಸ್) ಅಳವಡಿಕೆಯಾಗಿದೆ. ಒ.ಎಸ್.ಗಳ ಮೇಲೆ ನುಡಿ, ಬರಹ ತರಹದ ಕನ್ನಡದ ಲಿಪಿತಂತ್ರಾಂಶಗಳನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ಆವಶ್ಯಕತೆ ಇಲ್ಲ. ಮೈಕ್ರೋಸಾಫ್ಟ್ ಕಾರ್ಪೊರೇಷನ್ ಮತ್ತಿತರ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಕನ್ನಡ ಲಿಪಿವ್ಯವಸ್ಥೆ ಯನ್ನು, ಜಾಗತಿಕ ಶಿಷ್ಟತೆಯೊಡನೆ, ತಮ್ಮ ಒ.ಎಸ್.ಗಳಲ್ಲಿ ಅಳವಡಿಸಿದ್ದಾರೆ. ಮುಕ್ತ ಮತ್ತು ಉಚಿತ ತಂತ್ರಾಂಶ ಚಳವಳಿಯ ಕಾರ್ಯಕರ್ತರು ಎಲ್ಲ ರೀತಿಯ ತಂತ್ರಾಂಶಗಳಲ್ಲಿ ಕನ್ನಡಕ್ಕೂ ಸಮರ್ಥವಾದ ಬೆಂಬಲವನ್ನು ನೀಡಿದ್ದಾರೆ.

ಎಲ್ಲಾ ಆಧುನಿಕ ಕಂಪ್ಯೂಟರ್ ಒ.ಎಸ್.ಗಳಲ್ಲಿ ಮತ್ತು ಅವುಗಳ ಮೇಲೆ ಕಾರ್ಯನಿರ್ವಹಿಸುವ ಅನ್ವಯಿಕ ತಂತ್ರಾಂಶಗಳಲ್ಲಿ (ಅಪ್ಲಿಕೇಷನ್ಸ್) ಕನ್ನಡವನ್ನು ಬಳಸುವಲ್ಲಿ ಈ ಹಿಂದೆ ಇದ್ದ ತಾಂತ್ರಿಕ ತೊಡಕುಗಳು ಈಗ ಇಲ್ಲವಾಗಿವೆ. ಶಿಷ್ಟತೆಗಳು ಇಲ್ಲದಿದ್ದಾಗ, ಬೇರೆಬೇರೆ ತಂತ್ರಾಂಶ ತಯಾರಕರು ತಮಗೆ ತೋಚಿದಂತೆ ತಂತ್ರಾಂಶಗಳನ್ನು ಸಿದ್ಧಪಡಿಸಿದ್ದರು. ಇದರಿಂದ ಮಾಹಿತಿ ವಿನಿಮಯದಂತಹ ಅತಿದೊಡ್ಡ ಸಮಸ್ಯೆಯು ತಲೆದೋರಿತ್ತು. ಶಿಷ್ಟತೆಗಳು ನಿಗದಿಯಾದ ನಂತರದಲ್ಲಿ, ಎಲ್ಲ ಸಮಸ್ಯೆಗಳು ಪರಿಹಾರಗೊಂಡು ಇಂಗ್ಲಿಷ್‌ನಂತೆ ಕನ್ನಡ ಲಿಪಿವ್ಯವಸ್ಥೆಯೂ ಸಹ ಏಕರೂಪತೆಯನ್ನು ಪಡೆದಿದೆ. ಕಂಪ್ಯೂಟರಿನಲ್ಲಿ ಈಗ ಕನ್ನಡ ಬಳಸಲು ಹೆಚ್ಚಿನ ಸಮಸ್ಯೆಗಳೇನೂ ಇಲ್ಲ.

Writer - ಡಾ.ಎ.ಸತ್ಯ ನಾರಾಯಣ

contributor

Editor - ಡಾ.ಎ.ಸತ್ಯ ನಾರಾಯಣ

contributor

Similar News