ಗೋವಾ ಚಲನಚಿತ್ರೋತ್ಸವ ಬಹಿಷ್ಕರಿಸಲು ಶಬನಾ ಅಝ್ಮಿ ಕರೆ

Update: 2017-11-18 12:20 GMT

ಹೊಸದಿಲ್ಲಿ, ನ.18: ‘ಪದ್ಮಾವತಿ’ ಸಿನೆಮದ ವಿವಾದದಿಂದ ದೇಶದಲ್ಲಿ ಈಗ ಸಾಂಸ್ಕೃತಿಕ ವಿನಾಶದ ಪರಿಸ್ಥಿತಿ ನೆಲೆಸಿದೆ ಎಂದು ಟೀಕಿಸಿರುವ ಹಿರಿಯ ನಟಿ ಶಬನಾ ಅಝ್ಮಿ, ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು (ಐಎಫ್‌ಎಫ್‌ಐ) ಬಹಿಷ್ಕರಿಸುವ ಮೂಲಕ ಚಿತ್ರೋದ್ಯಮವು , ಸಿನೆಮದ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಹಾಗೂ ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ ಹಾಕುತ್ತಿರುವುದನ್ನು ಪ್ರತಿಭಟಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಸಿನೆಮ ‘ಪದ್ಮಾವತಿ’ಯನ್ನು ವಿರೋಧಿಸಿ ಸಿನೆಮದ ನಿರ್ಮಾಪಕರು ಹಾಗೂ ಕಲಾವಿದರಿಗೆ ಬೆದರಿಕೆ ಒಡ್ಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಝ್ಮಿ ಒತ್ತಾಯಿಸಿದ್ದಾರೆ.

 ಈ ಮಧ್ಯೆ, ಸೆನ್ಸಾರ್ ಪ್ರಮಾಣಪತ್ರ ಕೋರಿ ಸಲ್ಲಿಸಿದ್ದ ಅರ್ಜಿ ಅಪೂರ್ಣವಾಗಿದೆ ಎಂದು ‘ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್’(ಸಿಬಿಎಫ್‌ಸಿ) ‘ಪದ್ಮಾವತಿ’ ನಿರ್ಮಾಪಕರಿಗೆ ತಿಳಿಸಿದೆ. ಇದನ್ನು ಪ್ರಶ್ನಿಸಿರುವ ಅಝ್ಮಿ, ಸಿಬಿಎಫ್‌ಸಿಯು ಸಿನೆಮವನ್ನು ವರ್ಗೀಕರಿಸಿ ಸೂಕ್ತ ಪ್ರಮಾಣಪತ್ರ ನೀಡುವ ಅಧಿಕಾರವನ್ನು ಹೊಂದಿರುವ ಒಂದು ಶಾಸನಬದ್ಧ ಸಂಸ್ಥೆಯಾಗಿದೆ ಎಂಬುದನ್ನು ನೆನಪಿಸಿದ್ದಾರೆ.

ದೇಶದಲ್ಲಿ ಈಗ ಸಾಂಸ್ಕೃತಿಕ ವಿನಾಶದ ಪರಿಸ್ಥಿತಿ ನೆಲೆಸಿದೆ ಎಂದಿರುವ ಅವರು, ಈ ವಿವಾದದ ಬಗ್ಗೆ ಮೌನವಹಿಸಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮತಿ ಇರಾನಿಯನ್ನು ಟೀಕಿಸಿದ್ದಾರೆ. ಐಎಫ್‌ಎಫ್‌ಐ ದಿನಾಂಕ ನಿಗದಿ ಮಾಡಿದರೆ ಸಾಕು, ಪದ್ಮಾವತಿ ವಿವಾದದ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಬೇಕು ಎಂಬ ಧೋರಣೆ ಸ್ಮತಿ ಇರಾನಿಯವರದ್ದು ಎಂದು ಟೀಕಿಸಿದ್ದಾರೆ.

 ಸೆನ್ಸಾರ್ ಪ್ರಮಾಣಪತ್ರ ಕೋರಿ ಸಲ್ಲಿಸಿರುವ ಅರ್ಜಿ ಅಪೂರ್ಣವಾಗಿದೆ ಎಂದು ಸಿಬಿಎಫ್‌ಸಿ ಸೂಚಿಸಿರುವ ಕಾರಣ, ಈ ಹಿಂದೆ ನಿಗದಿಯಾಗಿರುವಂತೆ ಡಿ.1ರಂದು ಸಿನೆಮದ ಬಿಡುಗಡೆ ವಿಳಂಬವಾಗಬಹುದು ಎನ್ನಲಾಗಿದೆ. ‘ಪದ್ಮಾವತಿ’ ನಿರ್ಮಾಪಕರು ಸೆನ್ಸಾರ್ ಪ್ರಮಾಣಪತ್ರ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ. ಸಿಬಿಎಫ್‌ಸಿ ನಿಯಮದ ಪ್ರಕಾರ ಸಿನೆಮಕ್ಕೆ ಪ್ರಮಾಣಪತ್ರ ನೀಡಲು ಮಂಡಳಿಗೆ 61 ದಿನದ ಕಾಲಾವಕಾಶ ಇರುತ್ತದೆ. ಹೊಸ ಅರ್ಜಿ ಸಲ್ಲಿಸಿದ ಬಳಿಕ, ಮೊದಲು ಬಂದ ಸಿನೆಮಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಎಲ್ಲಾ ಸಿನೆಮಗಳಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಸೆನ್ಸಾರ್ ಮಂಡಳಿ ತಿಳಿಸಿದೆ.

ಆದರೆ ಅರ್ಜಿಯಲ್ಲಿ ಒಂದು ಸಣ್ಣ ತಾಂತ್ರಿಕ ತಪ್ಪು ಇದೆ ಅಷ್ಟೇ. ಸೆನ್ಸಾರ್ ಮಂಡಳಿಗೆ ಇಚ್ಛೆ ಇದ್ದರೆ ಸಿನೆಮ ವೀಕ್ಷಿಸಿ ಪ್ರಮಾಣಪತ್ರದ ಬಗ್ಗೆ ನಿರ್ಧರಿಸಲು ಇದರಿಂದ ಏನೂ ತೊಡಕಾಗದು ಎಂದು ‘ವಯಕಾಮ್ 18 ಮೋಷನ್ ಪಿಕ್ಚರ್ಸ್‌’ನ ಸಿಒಒ ಅಜಿತ್ ಅಂಧಾರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News