ಸಾಹಿತ್ಯ ಸಮ್ಮೇಳನ ಏಕಮುಖ ಸಂಚಾರ

Update: 2017-11-18 13:16 GMT

ಹಿಂದಿ ಭಾಷೆಯ ಹೇರಿಕೆ ಮತ್ತು ಮಧ್ಯಮ ವರ್ಗಗಳ ಆಂಗ್ಲ ಭಾಷೆಯ ಒಲವು ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುವಂತೆ ಮಾಡಿರುವುದನ್ನು ನಾಗರಿಕ ಸಮಾಜ ಗಮನಿಸದೆ ಹೋದರೆ ಬಹುಶಃ ಕನ್ನಡ ಕೇವಲ ಆಡುಭಾಷೆಯಾಗಿ ಪರ್ಯಾವಸಾನ ಹೊಂದುತ್ತದೆ. ಇದು ಭಾಷೆ ನಶಿಸುವ ಅಥವಾ ಉಳಿಯುವ ಪ್ರಶ್ನೆಯಲ್ಲ. ಭಾಷಾ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾನಾ ಆಯಾಮಗಳಲ್ಲಿ ನೋಡಲಾಗುತ್ತದೆ. ಸಾಹಿತ್ಯ ಜಾತ್ರೆ, ಸಾಹಿತಿಗಳ ಪರಿಷೆೆ, ಕನ್ನಡದ ತೇರನೆಳೆಯುವ ಸಾರೋಟು, ಕನ್ನಡ ವಿದ್ವತ್ ಲೋಕದ ಸಭೆ, ಕನ್ನಡದ ಭವಿಷ್ಯ ನಿರ್ಧರಿಸುವ ದನಿ ಹೀಗೆ ಹತ್ತು ಹಲವಾರು ರೀತಿಯಲ್ಲಿ ಸಾಹಿತ್ಯ ಸಮ್ಮೇಳನ ಮುನ್ನಡೆಯುತ್ತಲೇ ಇದೆ. ಈ ಬಾರಿ ಮೈಸೂರು ಮಲ್ಲಿಗೆಯ ಘಮಲು, ಸಾಂಸ್ಕೃತಿಕ ನಗರಿಯ ನಗಾರಿ, ಅರಮನೆಗಳ ನಗರಿಯ ಭವ್ಯತೆಯ ನಡುವೆ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ನಿಜ ಈ ಎಲ್ಲ ವ್ಯಾಖ್ಯಾನಗಳೂ ಸಾಹಿತ್ಯ ಸಮ್ಮೇಳನಕ್ಕೆ ಒಪ್ಪುತ್ತವೆ. ಏಕೆಂದರೆ ಕನ್ನಡದ ಮನಸುಗಳನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸುವ ಒಂದು ಪ್ರಯತ್ನವನ್ನು ಇಲ್ಲಿ ಕಾಣಬಹುದು. ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶ ಏನು? ಸಾಹಿತ್ಯದ ಮೂಲಕ ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಜನಾಂಗೀಯ ಸಮಸ್ಯೆಗಳಿಗೆ ಉತ್ತರ ಪರಿಹಾರ ಕಂಡುಕೊಳ್ಳುವುದೋ? ಅಥವಾ ಸಮಸ್ತ ಕನ್ನಡ ಜನತೆಯನ್ನು ಪ್ರತಿನಿಧಿಸುವ ಒಂದು ಸಂವೇದನಾಶೀಲ ವೇದಿಕೆಯ ಮೂಲಕ ಕನ್ನಡಿಗರ ಐಕ್ಯಮತ್ಯ ಹಾಗು ಭಾವನಾತ್ಮಕ ಬೆಸುಗೆಯನ್ನು ದೃಢಪಡಿಸುವುದೋ? ಅಥವಾ ಕನ್ನಡಿಗರು ಎದುರಿಸುತ್ತಿರುವ ಭಾಷಾ ಸಮಸ್ಯೆಗಳಿಗೆ, ಸಾಂಸ್ಕೃತಿಕ ಸವಾಲುಗಳಿಗೆ, ಭೌಗೋಳಿಕ ಬಿಕ್ಕಟ್ಟುಗಳಿಗೆ ಸಾಹಿತ್ಯ ಸಮ್ಮೇಳನ ಒಂದು ಧನಾತ್ಮಕ ಪರಿಹಾರ ಮಾರ್ಗವನ್ನು ಸೂಚಿಸುವುದೋ?

ಈ ಪ್ರಶ್ನೆಗಳ ನಡುವೆಯೇ ಮೈಸೂರು ಮಲ್ಲಿಗೆಯ ಘಮಲು ಕನ್ನಡ ಸಾಹಿತ್ಯ ಭಂಡಾರವನ್ನು ತನ್ನೊಳಗೆ ಆವಾಹನೆ ಮಾಡಿಕೊಳ್ಳುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ನಾಡಿನ ಜನಸಾಮಾನ್ಯರ, ವಿಶೇಷವಾಗಿ ಕನ್ನಡಿಗರ ನಿರೀಕ್ಷೆಗಳಿಗೆ ಸ್ಪಂದಿಸುವುದೋ ಇಲ್ಲವೋ ಎಂಬ ಜಿಜ್ಞಾಸೆ ಒಂದೆಡೆಯಾದರೆ ಮತ್ತೊಂದೆಡೆ ಸಮ್ಮೇಳನದಲ್ಲಿ ವ್ಯಕ್ತವಾಗುವ ಆಶಯಗಳು, ಪ್ರಕಟವಾಗುವ ಕನಸುಗಳು ಮತ್ತು ಬಿತ್ತಲಾಗುವ ಭರವಸೆಗಳು ಸಾಕಾರಗೊಳ್ಳುವುದೋ ಇಲ್ಲವೋ ಎಂಬ ಆತಂಕ ಸದಾ ಕನ್ನಡಿಗರನ್ನು ಕಾಡುತ್ತಲೇ ಇರುತ್ತದೆ. ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೂಚಿಸುವ ವೇದಿಕೆ ಇದಲ್ಲ. ಅಥವಾ ಕನ್ನಡಿಗರ ಜ್ವಲಂತ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಾಂತ್ವನ ಹೇಳುವ ಭೂಮಿಕೆಯೂ ಇದಲ್ಲ. ಇಲ್ಲಿ ಕನ್ನಡಿಗರ ಆಶಯಗಳು ವ್ಯಕ್ತವಾಗುತ್ತವೆ. ಜನಸ್ಪಂದನೆಯ ನೆಲೆಯಲ್ಲಿ ಸಾಹಿತ್ಯದ ಭೂಮಿಕೆಯಲ್ಲಿ ರಾಜ್ಯದ ಜನತೆಯ ವೈವಿಧ್ಯಮಯ ಸಮಸ್ಯೆಗಳನ್ನು ಗಂಭೀರ ಚರ್ಚೆಗೊಳಪಡಿಸಿ ಒಂದು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಮಂಡಿಸುವ ಮಟ್ಟಿಗೆ ಸಾಹಿತ್ಯ ಸಮ್ಮೇಳನ ಯಶಸ್ಸು ಕಾಣಬಹುದಷ್ಟೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಹೊಸ ಆಯಾಮದ ಆವಶ್ಯಕತೆ ಇರುವುದನ್ನು ಮನಗಾಣಬಹುದು. ಕರ್ನಾಟಕ ವಿಭಿನ್ನ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ನಾಲ್ಕೂ ದಿಕ್ಕುಗಳಲ್ಲಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕಾವೇರಿ, ಮಹಾದಾಯಿ, ನೇತ್ರಾವತಿ ತಿರುವು ಯೋಜನೆ, ಬೆಳಗಾವಿ ಗಡಿ ಬಿಕ್ಕಟ್ಟು, ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು, ಲಿಂಗಾಯತ ವೀರಶೈವರ ಸಂಘರ್ಷ, ಕೋಮುವಾದದ ಬಿಕ್ಕಟ್ಟು, ಜಾತಿ ದೌರ್ಜನ್ಯದ ಘಟನೆಗಳು, ಕನ್ನಡ ಭಾಷೆಯ ಅವಗಣನೆ, ನಿರುದ್ಯೋಗ ಸಮಸ್ಯೆ, ಕ್ಷೀಣಿಸುತ್ತಿರುವ ಕನ್ನಡ ಭಾಷಾ ಬಳಕೆ ಹೀಗೆ ಹಲವು ಆಯಾಮಗಳಲ್ಲಿ ಸಮಸ್ಯೆಗಳು ತಲೆದೋರುತ್ತಿವೆ. ಈ ಎಲ್ಲಾ ಸಮಸ್ಯೆಗಳಿಗೆ ಸಾಹಿತ್ಯ ಸಮ್ಮೇಳನ ಸಿದ್ಧೌಷಧವಾಗಲಾರದು. ಆದರೆ ಖಂಡಿತವಾಗಿಯೂ ತಾತ್ವಿಕ ನೆಲೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಸೂತ್ರಗಳನ್ನು ಮಂಡಿಸಲು ಸಾಧ್ಯ.

ಸಾಹಿತ್ಯದಿಂದ ಸಾಮಾಜಿಕ ಸುಧಾರಣೆ ಅಥವಾ ಪರಿವರ್ತನೆ ಸಾಧ್ಯವಿಲ್ಲ ಎಂಬ ವಾದ ಕನ್ನಡ ಸಾಹಿತ್ಯ ಲೋಕದಲ್ಲೇ ಕೇಳಿಬಂದಿದೆ. ಮತ್ತೊಂದೆಡೆ ಸಾಹಿತ್ಯದ ಮೂಲಕವೇ ಸಾಮಾಜಿಕ ಪರಿವರ್ತನೆ ಮತ್ತು ಕ್ರಾಂತಿಕಾರಿ ಆಂದೋಲನಗಳು ರೂಪುಗೊಂಡಿರುವುದನ್ನೂ ಕನ್ನಡಿಗರು ಕಳೆದ ಐದಾರು ದಶಕಗಳಲ್ಲಿ ಕಂಡಿದ್ದಾರೆ. ಮಡಿವಂತಿಕೆ ಮತ್ತು ಸಾಂಪ್ರದಾಯವನ್ನು ಬದಿಗಿಟ್ಟು ವೈಚಾರಿಕ ನೆಲೆಯಲ್ಲಿ ಜನಸಾಮಾನ್ಯರ ನಾಡಿಮಿಡಿತವನ್ನು ಗ್ರಹಿಸಿ ಮುಂದಡಿಯ ಮಾರ್ಗವನ್ನು ತೋರುವ ಸಾಹಿತ್ಯ ಎಂದಿಗೂ ಜನಸಾಮಾನ್ಯರಿಗೆ ಮಾರ್ಗದರ್ಶಕವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಹಲವಾರು ಸಂದರ್ಭಗಳಲ್ಲಿ ನಿರೂಪಿಸಿದೆ. ಆದರೆ ಪ್ರಸ್ತುತ ಸಮಾಜೋ ಸಾಂಸ್ಕೃತಿಕ ಸಂದರ್ಭದಲ್ಲಿ ಮತ್ತು ರಾಜಕೀಯ ಸಂದರ್ಭದಲ್ಲಿ ಇದು ಎಂದಿಗಿಂತಲೂ ಹೆಚ್ಚು ಅಗತ್ಯ ಎನಿಸುತ್ತಿದೆ. ಭಾಷೆ ಜನಸಾಮಾನ್ಯರನ್ನು ಒಂದುಗೂಡಿಸುತ್ತದೆ ನಿಜ ಬದುಕು ಕಟ್ಟಿಕೊಡುವುದಿಲ್ಲ. ಬದುಕು ಕಟ್ಟಿಕೊಡಲು ಭಾಷೆಗೆ ಸಾಂಸ್ಕೃತಿಕ,ಸಾಮಾಜಿಕ ಮತ್ತು ಔದ್ಯಮಿಕ ಸ್ಪರ್ಶ ಅತ್ಯಗತ್ಯವಾಗುತ್ತದೆ. ಈ ಸ್ಪರ್ಶ ಒದಗಿಸಲು ಭಾಷೆಯನ್ನು ಜನಸಾಮಾನ್ಯರ ನಿತ್ಯಜೀವನದ ಒಂದು ಭಾಗವಾಗಿ ಸ್ಥಾಪಿಸುವುದೂ ಅಷ್ಟೇ ಮುಖ್ಯ.

ಸಾಹಿತ್ಯ ಮತ್ತು ನಾಗರಿಕ ಪ್ರಜ್ಞೆ

ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಸಂರಕ್ಷಿಸುವುದರಲ್ಲಿ ಸಂವಿಧಾನಕ್ಕಿಂತಲೂ ಹೆಚ್ಚಾಗಿ ನಾಗರಿಕ ಪ್ರಜ್ಞೆ ಮುಖ್ಯವಾಗುತ್ತದೆ. ಸಮಾಜದ ಆಗುಹೋಗುಗಳನ್ನು ಗ್ರಹಿಸುವುದೇ ಅಲ್ಲದೆ ಜನಸಾಮಾನ್ಯರು ಎದುರಿಸುವ ದಿನನಿತ್ಯದ ಸವಾಲುಗಳಿಗೆ ನಾಗರಿಕ ಪ್ರಜ್ಞೆ ಸಾಂತ್ವನ ಮತ್ತು ಪರಿಹಾರ ಒದಗಿಸಬಲ್ಲದು. ಸಾಹಿತ್ಯ ಮತ್ತು ಸಾಹಿತ್ಯಕ ಮೌಲ್ಯಗಳು ಇಲ್ಲಿ ಪ್ರಧಾನ ಪಾತ್ರ ವಹಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ. ಸಾಹಿತ್ಯದಿಂದ ಸಮಾಜ ಸುಧಾರಣೆ ಅಥವಾ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎಂದು ಹೇಳುವ ಎಸ್.ಎಲ್. ಭೈರಪ್ಪನವರಂತಹ ಸಾಹಿತಿಗಳಿಗೆ ಸಾಹಿತ್ಯ ಸಮ್ಮೇಳನಗಳು ತಕ್ಕ ಉತ್ತರ ನೀಡುವಂತಾಗಬೇಕಿದೆ. ಅಷ್ಟೇ ಅಲ್ಲ, ಕರ್ನಾಟಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಾಹಿತ್ಯ ಲೋಕ ಮಾರ್ಗದರ್ಶಕ ಸೂತ್ರಗಳನ್ನು ನೀಡಲೂ ಸಿದ್ಧವಾಗಬೇಕಿದೆ. ವೈಚಾರಿಕ ನೆಲೆಯ ಸಾಹಿತಿ ಚಂಪಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮೈಸೂರು ಸಾಹಿತ್ಯ ಸಮ್ಮೇಳನದ ಆಶಯ ಮತ್ತು ಘೋಷವಾಕ್ಯ, ಹಾದಿ ತಪ್ಪುತ್ತಿರುವ ನಾಗರಿಕ ಸಮಾಜ ಮತ್ತು ಕಳೆದು ಹೋಗುತ್ತಿರುವ ನಾಗರಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಸಿದ್ಧವಾಗಬೇಕಿದೆ. ಕರ್ನಾಟಕದ ಸಂದರ್ಭದಲ್ಲಿ ಈ ನಾಗರಿಕ ಪ್ರಜ್ಞೆಯನ್ನು ಎರಡು ನೆಲೆಗಳಲ್ಲಿ ಗಮನಿಸಬೇಕಿದೆ.

ಮೊದಲನೆಯದು ಕನ್ನಡ ಭಾಷೆಯ ಸಮಸ್ಯೆಗಳು: ಭಾಷೆ ಮಾನವ ಸಮಾಜವನ್ನು ಬೆಸೆಯುವ ಸಂವಹನ ಪ್ರಕ್ರಿಯೆಯ ಒಂದು ಸಾಧನ ಮಾತ್ರ. ಮಾನವನ ಸಾಮಾಜಿಕ ಅಭ್ಯುದಯದಲ್ಲಿ ಭಾಷೆಯ ಪಾತ್ರವನ್ನು ಅವಲೋಕಿಸಿದರೆ ಬಹುಶಃ ಭಾಷೆ ಮಾನವ ಸಮಾಜದ ವಿಭಿನ್ನ ಸ್ತರಗಳನ್ನು ಒಂದೇ ಭೂಮಿಕೆಯಲ್ಲಿ ಕಟ್ಟಿಹಾಕುವ ಒಂದು ಸಾಧನವಾಗಿ ಕಾಣುತ್ತದೆ. ಕರ್ನಾಟಕದಲ್ಲಿ ಈ ಪ್ರವೃತ್ತಿಯನ್ನು ಎರಡು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಒಂದು ಕಾವೇರಿ, ಮಹಾದಾಯಿ ರೀತಿಯ ಅಸ್ತಿತ್ವ ಮತ್ತು ನಾಗರಿಕ ಹಕ್ಕುಗಳ ಬಿಕ್ಕಟ್ಟುಗಳು. ಎರಡು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ನಂತರದ ಚರ್ಚೆಗಳು. ಕನ್ನಡಿಗರು ಭಾವುಕತೆಯ ನೆಲೆಯಲ್ಲಿ ಥಟ್ಟನೆ ಒಂದಾಗುತ್ತಾರೆ ಎನ್ನುವುದನ್ನು ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಗಮನಿಸಬಹುದು. ಗೋಕಾಕ್, ಕಾವೇರಿ, ಮಹಾದಾಯಿ, ಬೆಳಗಾವಿ ಇಲ್ಲಿ ಉಲ್ಲೇಖಾರ್ಹ.

ಆದರೆ ಭಾಷಾ ಸಮಸ್ಯೆ ಎದುರಾದಾಗ ಕನ್ನಡದ ಸಾರ್ವಜನಿಕ ಪ್ರಜ್ಞೆ ಸ್ಪಂದಿಸುತ್ತಿಲ್ಲ. ಕನ್ನಡ ಭಾಷೆ ನಶಿಸುತ್ತಿದೆ ಎಂಬ ಕೂಗು ಮಾತ್ರ ಕೇಳಿಬರುತ್ತಲೇ ಇದೆ. ಇದು ಅರ್ಧಸತ್ಯ ಮಾತ್ರ. ಭಾವುಕತೆಯ ಚೌಕಟ್ಟಿನಿಂದ ಹೊರನಿಂತು ನೋಡಿದಾಗ ಕನ್ನಡದ ಜೀವಂತಿಕೆ ಗೋಚರಿಸುತ್ತದೆ. ಹಾಗೆಯೇ ಬೆಂಗಳೂರು ಎಂಬ ಮೆಟ್ರೋಪಾಲಿಟನ್ ನಗರವನ್ನು ಹೊರಗಿಟ್ಟು ನೋಡಿದಾಗ ಕನ್ನಡದ ಉಸಿರು ಕೇಳಿಬರುತ್ತದೆ. ತಮ್ಮ ದೈನಂದಿನ ಜೀವನದ ಅಗತ್ಯಗಳಿಗಾಗಿ ಜನಸಾಮಾನ್ಯರು ತಾವು ಬಳಸುವ ಸಂವಹನ ಮಾಧ್ಯಮದಲ್ಲಿ ಕನ್ನಡವನ್ನು ಬಳಸುವುದು ಕಡಿಮೆಯಾದ ಮಾತ್ರಕ್ಕೆ ಕನ್ನಡ ಸಾಯುತ್ತಿದೆ ಎಂದು ಬೊಬ್ಬಿರಿಯುವುದು ಕೇವಲ ಭಾವನಾತ್ಮಕ ಅಭಿವ್ಯಕ್ತಿಯಾಗುವುದೇ ಹೊರತು ವಾಸ್ತವತೆಗೆ ಹತ್ತಿರವಾಗಿ ತೋರುವುದಿಲ್ಲ. ಆದರೆ ಶಿಕ್ಷಣದಲ್ಲಿ, ಆಡಳಿತದಲ್ಲಿ ಕನ್ನಡದ ಬಳಕೆ ಕ್ಷೀಣಿಸುತ್ತಿರುವುದನ್ನು ಮಾತ್ರ ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯವಾಗಿದೆ. ಅನ್ಯಭಾಷಿಕರಿಂದ ಕನ್ನಡಕ್ಕೆ ಅಪಾಯವಿದೆ ಎಂದು ಗುರುತಿಸುವ ಸಾಹಿತ್ಯ ಲೋಕಕ್ಕೆ ಸ್ವಂತ ಭಾಷಿಕರಿಂದಲೇ ಎದುರಾಗುತ್ತಿರುವ ಅಪಾಯ ಕಾಣಲೇಬೇಕಲ್ಲವೇ? ಕನ್ನಡ ಭಾಷೆ ಬೆಳೆಯಬೇಕು, ಜೀವಂತವಾಗಿರಬೇಕು, ಶಾಸ್ತ್ರೀಯ ಪಟ್ಟ ದೊರೆತ ಹಿನ್ನೆಲೆಯಲ್ಲಿ ತನ್ನ ಸುಪ್ತ ಮೂಲ ಬೇರುಗಳನ್ನು ಹುಡುಕಿ, ತೆಗೆದು ಸಮೃದ್ಧಿ ಹೊಂದಬೇಕು. ಇದು ಎಲ್ಲ ಸಾಹಿತ್ಯ ಸಮ್ಮೇಳನದ ಆಶಯ. ಕನ್ನಡಿಗರ ಆಶಯವೂ ಹೌದು. ಕನ್ನಡ ಭಾಷೆ ಸಮೃದ್ಧಿ ಹೊಂದಬೇಕಾದಲ್ಲಿ ಸಮಸ್ತ ಕನ್ನಡಿಗರೂ ಸಮೃದ್ಧಿ ಹೊಂದಬೇಕು. ಸಾಹಿತ್ಯ ಒಂದು ಸೀಮಿತ ಜನವರ್ಗದ ಸ್ವತ್ತಾಗಿರಬಹುದು ಆದರೆ ಭಾಷೆ ಸಮಸ್ತ ಕನ್ನಡಿಗರ ಸ್ವತ್ತು. ಕನ್ನಡ ಭಾಷೆಯನ್ನು ಬೆಳೆಸುವ ಮುನ್ನ ಈ ಭಾಷೆಯನ್ನು ತಮ್ಮ ನುಡಿಭಾಷೆಯಾಗಿ ಸ್ವೀಕರಿಸಿರುವ ಜನಸಮುದಾಯಗಳೂ ಮುಕ್ತ ವಾತಾವರಣದಲ್ಲಿ ಬೆಳೆಯಬೇಕು. ತಮ್ಮ ಅಸ್ಮಿತೆಗಳನ್ನೇ ಒತ್ತೆ ಇಟ್ಟು ಬಾಳುತ್ತಿರುವ ಯಾವುದೇ ಜನಸಮುದಾಯಕ್ಕೆ ಭಾಷೆ ಒಂದೇ ಮುಖ್ಯವಾಗುವುದಿಲ್ಲ. ತಮ್ಮ ಸಾಮುದಾಯಿಕ ಘನತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳೂ ಮುಖ್ಯವಾಗುತ್ತವೆ. ಈ ಸೂಕ್ಷ್ಮವನ್ನು ಪರಿಗಣಿಸದ ಸಾಹಿತ್ಯ ಸಮ್ಮೇಳನದ ಸಾರ್ಥಕತೆಯಾದರೂ ಏನು? ಇಲ್ಲಿ ಕನ್ನಡ ಭಾಷೆಯ ಬಳಕೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಹಿಂದಿ ಭಾಷೆಯ ಹೇರಿಕೆ ಮತ್ತು ಮಧ್ಯಮ ವರ್ಗಗಳ ಆಂಗ್ಲ ಭಾಷೆಯ ಒಲವು ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುವಂತೆ ಮಾಡಿರುವುದನ್ನು ನಾಗರಿಕ ಸಮಾಜ ಗಮನಿಸದೆ ಹೋದರೆ ಬಹುಶಃ ಕನ್ನಡ ಕೇವಲ ಆಡುಭಾಷೆಯಾಗಿ ಪರ್ಯಾವಸಾನ ಹೊಂದುತ್ತದೆ. ಇದು ಭಾಷೆ ನಶಿಸುವ ಅಥವಾ ಉಳಿಯುವ ಪ್ರಶ್ನೆಯಲ್ಲ. ಭಾಷಾ ಅಸ್ಮಿತೆಯ ಅಳಿವು ಉಳಿವಿನ ಪ್ರಶ್ನೆಯಾಗಿ ಕಾಣುತ್ತದೆ.

ತಂತ್ರಜ್ಞಾನದ ಬಳಕೆ ಆಂಗ್ಲ ಭಾಷೆಯ ಅಧಿಪತ್ಯಕ್ಕೆ ಸ್ಪಷ್ಟ ಭೂಮಿಕೆ ಒದಗಿಸುತ್ತಿರುವ ಸಂದರ್ಭದಲ್ಲಿ ಕನ್ನಡದ ಬಳಕೆಯ ಪ್ರಶ್ನೆಯೂ ಜಟಿಲವಾಗುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಲ್ಲಿ, ವಿಮಾ ಕ್ಷೇತ್ರದಲ್ಲಿ, ಅಂಚೆ ವ್ಯವಸ್ಥೆಯಲ್ಲಿ ಕನ್ನಡ ಬಳಕೆಯ ಭಾಷೆಯಾಗುತ್ತಿಲ್ಲ. ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬ ಆಶಯ ಜನಧನ ಯೋಜನೆಯಲ್ಲಿ ಕಂಡುಬರುತ್ತದೆ. ಆದರೆ ಇಲ್ಲಿ ಬ್ಯಾಂಕ್ ವಹಿವಾಟು ಹಾಗೂ ವ್ಯವಹಾರ ಸಾಮಾನ್ಯ ಜನತೆಗೆ ಅರಿವಾಗದ ಭಾಷೆಯಲ್ಲಿಯೇ ಇರುವುದು ಆಳ್ವಿಕರ ಗಮನಕ್ಕೆ ಬರುವುದೇ ಇಲ್ಲ. ರಾಷ್ಟ್ರೀಯತೆಯ ನೆಲೆಯಲ್ಲಿ ಸ್ಥಾನಿಕ ಅಸ್ಮಿತೆಗಳು ನಶಿಸುವ ಒಂದು ವಿಕೃತಿಯನ್ನು ಇಲ್ಲಿ ಕಾಣಬಹುದು. ಕನ್ನಡ ಭಾಷೆ ಈ ವಿಕೃತ ವ್ಯವಸ್ಥೆಗೆ ಬಲಿಯಾಗುತ್ತಿದೆ.

ಇಲ್ಲಿ ಸಾಹಿತ್ಯ ಸಮ್ಮೇಳನದ ಪಾತ್ರವೇನು? ಈ ಪ್ರಶ್ನೆ ಪ್ರತಿಯೊಂದು ಸಮ್ಮೇಳನದಲ್ಲೂ ಉದ್ಭವಿಸುತ್ತಿದೆ. ವಿಚಾರಗೋಷ್ಠಿಗಳಲ್ಲಿ ನಡೆಯುವ ಚರ್ಚೆಗಳು ಪಾಂಡಿತ್ಯದ ಚೌಕಟ್ಟಿನಿಂದ ಹೊರಬಂದು ವಾಸ್ತವ ಸನ್ನಿವೇಶಗಳಿಗೆ ಸ್ಪಂದಿಸುವಂತಾಗಬೇಕಿದೆ. ಸಾಹಿತ್ಯ ಲೋಕದಲ್ಲಿನ ಆತ್ಮರತಿ ಮತ್ತು ಶ್ರೇಷ್ಠತೆಯ ಅಹಮಿಕೆ ಈ ನಿಟ್ಟಿನಲ್ಲಿ ತೊಡಕಿನಂತೆಯೇ ಕಾಣುತ್ತಿದೆ. ಈ ತೊಡಕನ್ನು ನಿವಾರಿಸದೆ ಹೋದರೆ ಇದು ಸಾಧ್ಯವಾಗುವುದಿಲ್ಲ. ಇಲ್ಲಿ ವಿಚಾರವಾದ, ವೈಜ್ಞಾನಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಯ ಜೊತೆಗೇ ಭಾಷಾ ಬಳಕೆಯ ಸಂಬಂಧಗಳನ್ನೂ ಪರಾಮರ್ಶಿಸುವುದು ಅತ್ಯಗತ್ಯ.

ಎರಡನೆಯದು ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳ ಸಮಸ್ಯೆಗಳು: ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಕನ್ನಡ ಸಾಹಿತ್ಯ ಪ್ರೇಮಿಗಳಿಗಾಗಿ ಮಾತ್ರವೇ ಅಲ್ಲ. ಸಮಸ್ತ ಕನ್ನಡಿಗರ, ಅಂದರೆ ಕರ್ನಾಟಕದಲ್ಲಿ ವಾಸಿಸುವ ಸಮಸ್ತ ಜನತೆಯ ಆಶೋತ್ತರಗಳನ್ನು, ಕನಸುಗಳನ್ನು, ಆಶಯಗಳನ್ನು ಸಾಹಿತ್ಯದ ದೃಷ್ಟಿಕೋನದಿಂದ ಹೇಗೆ ನೋಡಬಹುದು ಎಂದು ನಿರೂಪಿಸುವ ಒಂದು ವೇದಿಕೆಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ಅಥವಾ ನಡೆಯಬೇಕು. ಇಲ್ಲಿ ವೈಫಲ್ಯಗಳಿರಬಹುದು, ನ್ಯೂನತೆಗಳಿರಬಹುದು, ಲೋಪಗಳೂ ಇರಬಹುದು. ಸಮ್ಮೇಳನಗಳು ಜಾತ್ರೆಯಾಗಿರಬಹುದು. ಆದರೆ ಅಲ್ಲಿ ಒಂದು ಆಶಯವಿರುತ್ತದೆ, ಕನಸು ಇರುತ್ತದೆ. ಕನ್ನಡ ಜನತೆಯ ಏಳಿಗೆಗೆ ಶ್ರಮಿಸಲು ಕರೆ ನೀಡುವ ಒಂದು ಹಪಾಹಪಿ ಅಲ್ಲಿರುತ್ತದೆ. ಈ ಸಮ್ಮೇಳನಕ್ಕೆ ಸರಕಾರ ಅನುದಾನ ನೀಡಿದ್ದರೂ ಅದು ಕನ್ನಡ ಜನತೆಗೆ ಸಲ್ಲಬೇಕಾದ ಹಣವೇ ಹೊರತು, ಅಧಿಕಾರಾರೂಢ ಪಕ್ಷಗಳ ಪರಿಶ್ರಮದಿಂದ ಗಳಿಸಿದ ಹಣವಲ್ಲ. ಈ ಅನುದಾನ ಇಲ್ಲದೆಯೂ ಸಮ್ಮೇಳನವನ್ನು ನಡೆಸುವ ಸಾಮರ್ಥ್ಯ ಜನಸಾಮಾನ್ಯರಿಗಿದೆ ಎಂದು ಸರಕಾರ ಅರಿಯಬೇಕಿದೆ.

ಕರ್ನಾಟಕದ ಜನಸಾಮಾನ್ಯರ ಮುಖ್ಯ ಆಕ್ಷೇಪ ಎಂದರೆ ಕನ್ನಡದ ಬಹುತೇಕ ಸಾಹಿತಿಗಳು ರಾಜಕೀಯ-ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎನ್ನುವುದು. ಇದು ಭಾಗಶಃ ಸತ್ಯ. ಸಾಮಾಜಿಕ ಸಮಸ್ಯೆಗಳು, ಸಮಾಜವನ್ನು ಕಾಡುವ ಕ್ರೌರ್ಯ, ಮೂಢನಂಬಿಕೆ ಮತ್ತಿತರ ಅನಿಷ್ಟಗಳ ಬಗ್ಗೆ ಸಾಹಿತ್ಯ ರಚಿಸುವುದೆಂದರೆ ಇಸಂಗಳಿಗೆ ಗಂಟುಬಿದ್ದಂತೆಯೇ ಎಂದು ಪರಿಗಣಿಸುವ ಸಾಹಿತಿಗಳೂ ನಮ್ಮಲ್ಲಿದ್ದಾರೆ. ಆದರೆ ಸಮಾಜದ ಎಲ್ಲ ರೀತಿಯ ಸಮಸ್ಯೆಗಳನ್ನೂ ತಮ್ಮ ಸಾಹಿತ್ಯಕ ಪರಿಕಲ್ಪನೆಯಲ್ಲಿ ಅಳವಡಿಸಿಕೊಂಡು ಸಾಮಾಜಿಕ ಅನಿಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಹಿತ್ಯ ರಚಿಸುವವರೂ ಇದ್ದಾರೆ. ಇಲ್ಲಿ ಇಸಂಗಳ ಪ್ರಶ್ನೆಗಿಂತಲೂ ಸಾಹಿತ್ಯ ಲೋಕದ ಉತ್ತರದಾಯಿತ್ವ ಮತ್ತು ಜನಪರ ಕಾಳಜಿಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಕರ್ನಾಟಕದ ಸಾರಸ್ವತ ಲೋಕದಲ್ಲಿ ಇಸಂಗಳಿಗೆ ಗಂಟುಬೀಳದೆಯೇ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸುವ ಸಾಹಿತಿಗಳ ಸಂಖ್ಯೆ ಹೇರಳವಾಗಿದೆ. ಹಾಗಾಗಿಯೇ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ರಾಜ್ಯವನ್ನು ಕಾಡುತ್ತಿರುವ ಸಮಸ್ತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತದೆ. ಈ ಚರ್ಚೆಗಳು ಶುಷ್ಕವಾಗಿರುತ್ತವೆ, ಚರ್ಚೆಯ ವಿಸ್ತರಣೆಯಾಗುವುದಿಲ್ಲ, ನಿರ್ಣಯಗಳು ನಿರ್ಣಾಯಕ ಅಂತ್ಯ ಕಾಣುವುದಿಲ್ಲ ಈ ಎಲ್ಲಾ ಆಪಾದನೆಗಳ ನಡುವೆಯೇ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ಜನಸಾಮಾನ್ಯರ ಆಶಯಗಳನ್ನು ಬಿಂಬಿಸುವ ರೀತಿಯಲ್ಲಿ ನಡೆಯುತ್ತವೆ. ಪ್ರಸ್ತುತ ಸಂದರ್ಭದಲ್ಲೇ ನೋಡುವುದಾದರೆ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಸಾಹಿತ್ಯ ಸಮ್ಮೇಳನದಲ್ಲಿ ಯಾವ ರೀತಿಯ ಚರ್ಚೆಗಳು ನಡೆಯಬೇಕು ಎಂಬ ಪ್ರಶ್ನೆ ಎದುರಾದಾಗ, ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಕಂಡುಬರುವ ಎಲ್ಲ ಗಂಭೀರ ಸಮಸ್ಯೆಗಳೂ ಧುತ್ತೆಂದು ಎದುರಾಗುತ್ತವೆ. ಆದರೆ ಕಳೆದ ನಾಲ್ಕು ದಶಕಗಳಲ್ಲಿ ದೇಶದ ಚಹರೆಯೇ ಬದಲಾಗಿದೆ. ಸಮಾಜಮುಖಿಯಾಗಿದ್ದ ಬಹುತೇಕ ಕ್ಷೇತ್ರಗಳು ಅರ್ಥಮುಖಿಗಳಾಗಿವೆ. ಸಾಹಿತ್ಯ, ಕಲೆ, ಕ್ರೀಡೆ ಮತ್ತು ಇವೆಲ್ಲಕ್ಕೂ ತಳಹದಿಯಾದ ಶಿಕ್ಷಣ ಕ್ಷೇತ್ರವೂ ಸಹ ವಾಣಿಜ್ಯೀಕರಣಗೊಂಡಿದೆ. ಜಾಗತೀಕರಣ ಮತ್ತು ನವ ಉದಾರವಾದ ಈ ಕ್ಷೇತ್ರಗಳನ್ನು ಔದ್ಯಮೀಕರಣದತ್ತ ಕೊಂಡೊಯ್ಯುತ್ತಿದೆ. ಹಾಗಾಗಿಯೇ ಸ್ಥಾಪಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದ ದನಿಗಳು ಇಂದು ವ್ಯವಸ್ಥೆಯ ಆರಾಧಕರಲ್ಲದಿದ್ದರೂ ಪ್ರಶ್ನಿಸುವ ಮನಸ್ಥಿತಿಯನ್ನು ಕಳೆದುಕೊಂಡಿದ್ದಾರೆ.

ಪ್ರತಿರೋಧದ ದನಿಗಳು ಸೃಷ್ಟಿಸಿದ್ದ ಹಲವು ಮೌಲ್ಯ ಗಳು ಇಂದು ಪ್ರಶ್ನಾರ್ಹವಾಗುತ್ತಿವೆ. ಸ್ಥಾಪಿತ ಮೌಲ್ಯಗಳನ್ನು ಧಿಕ್ಕರಿಸಿ ರೂಪುಗೊಂಡಿದ್ದ ಸಮಾಜಮುಖಿ ಮೌಲ್ಯಗಳು ಇಂದು ಅನಾಥವಾಗಿವೆ. ಈ ಪ್ರವೃತ್ತಿ ಮತ್ತು ಪ್ರಕ್ರಿಯೆಯನ್ನು ವ್ಯಕ್ತಿಗತವಾಗಿ ಪರಿಗಣಿಸಿ ಬೆಟ್ಟು ಮಾಡಿ ತೋರಿಸುವುದಕ್ಕಿಂತಲೂ ಬದಲಾಗುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಇದು ಒಂದು ಸಹಜ ಪ್ರಕ್ರಿಯೆ ಎಂದು ಪರಿಗಣಿಸಿದಾಗ ವಾಸ್ತವದ ಅರಿವಾಗುತ್ತದೆ. ಕೋಮುವಾದ, ಮತಾಂಧತೆ, ಜಾತಿ ದೌರ್ಜನ್ಯಗಳ ನೆಲೆಯಲ್ಲಿ ಸಾಹಿತ್ಯ ಲೋಕ ತನ್ನದೇ ಆದ ಜನಸ್ಪಂದನಾ ಭೂಮಿಕೆಯನ್ನು ಸೃಷ್ಟಿಸದೆ ಹೋದರೆ ಬಹುಶಃ ನಾಗರಿಕ ಪ್ರಜ್ಞೆ ತನ್ನ ಅಂತಃಸತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಕನ್ನಡ ನುಡಿ ಜಾತ್ರೆಯಲ್ಲಿ ನೆರೆಯುವ ಲಕ್ಷ ಸಂಖ್ಯೆಯ ಜನರನ್ನು ಕರ್ನಾಟಕ ಮತ್ತು ಕನ್ನಡ ಭಾಷೆಯ ರಾಯಭಾರಿಗಳು ಎಂದು ಭಾವಿಸುವ ಮೂಲಕ ಸಾಹಿತ್ಯ ಸಮ್ಮೇಳನ ತನ್ನ ಹೆಜ್ಜೆಗಳನ್ನು ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಕನ್ನಡ ಕನ್ನಡಿಗರು ಮತ್ತು ಸಾಹಿತ್ಯ

ಇಲ್ಲಿ ಕನ್ನಡಿಗರ ಸಾರ್ವಜನಿಕ ನೆಲೆ ಮತ್ತು ನಾಗರಿಕ ಪ್ರಜ್ಞೆ ಮುಂಚೂಣಿಗೆ ಬರುತ್ತದೆ. ಸಾಹಿತ್ಯ ನುಡಿ ಜಾತ್ರೆಯಲ್ಲಿ ಒಂದಾಗುವ ಲಕ್ಷಾಂತರ ಮನಸುಗಳು, ಕಾವೇರಿ, ಮಹಾದಾಯಿಯ ಭಾವುಕತೆಯಲ್ಲಿ ಮಿಂದು ಒಂದಾಗುವ ಭಾವನಾತ್ಮಕ ಮನಸುಗಳು ಭಾಷೆಯ ಸಂರಕ್ಷಣೆಯ ಸಂದರ್ಭದಲ್ಲಿ, ನಾಗರಿಕ ಮೌಲ್ಯಗಳ ಅಧಃಪತನದ ಸಂದರ್ಭದಲ್ಲಿ, ಸಾಂಸ್ಕೃತಿಕ ಮೌಲ್ಯಗಳ ಅವನತಿಯ ನೆಲೆಯಲ್ಲಿ ಏಕೆ ವಿಮುಖವಾಗುತ್ತಿವೆ? ಈ ಪ್ರಶ್ನೆ ಮೈಸೂರು ಮಲ್ಲಿಗೆಯ ಕಂಪಿನ ನಡುವೆಯೇ ಸಮ್ಮೇಳನದಲ್ಲಿ ಮೂಡಬೇಕಿದೆ. ಪ್ರಜಾತಂತ್ರ ವ್ಯವಸ್ಥೆ ಮತ್ತು ನಾಗರಿಕ ಪ್ರಜ್ಞೆಯ ಮುಖಾಮುಖಿಯಲ್ಲಿ ಸಾರ್ವಜನಿಕ ಉತ್ತರದಾಯಿತ್ವ ಬಲಿಯಾಗುತ್ತಿರುವ ವಿಷಮ ಸನ್ನಿವೇಶದಲ್ಲಿ ನಾವಿದ್ದೇವೆ. ನುಡಿಯಾತ್ರೆಯಲ್ಲಿ ನೆರೆಯುವ ಜನತೆಗೆ ಈ ವಾಸ್ತವದ ಅರಿವಾಗುವಂತೆ ಸಮ್ಮೇಳನದ ವಿಚಾರ ಸಂಕಿರಣಗಳು ರೂಪುಗೊಳ್ಳಬೇಕಿದೆ. ಸಾಹಿತ್ಯ ಒಂದು ಸಮಾಜದ ಉನ್ನತಿಗೆ ಪೂರಕವಾಗುವ ಅಸ್ತ್ರವಾದಾಗ ಮಾತ್ರವೇ ಒಂದು ಸಮಾಜ ತನ್ನ ಪ್ರಜ್ಞೆಯನ್ನು ಸ್ಥಿಮಿತದಲ್ಲಿರಿಸಿಕೊಳ್ಳಲು ಸಾಧ್ಯ, ಖಡ್ಗವಾಗಲಿ ಕಾವ್ಯ ಎಂಬ ದಿವ್ಯ ಕವಿವಾಣಿ ಇಂದಿನ ಸನ್ನಿವೇಶದಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ. ಮತಾಂಧತೆ ಮಾನವೀಯ ಮೌಲ್ಯಗಳನ್ನು ಸದ್ದಿಲ್ಲದೆ ಸಮಾಧಿ ಮಾಡುತ್ತಿದೆ. ದ್ವೇಷ ರಾಜಕಾರಣ ಮತ್ತು ಹಿಂಸಾತ್ಮಕ ಧೋರಣೆ ನಾಗರಿಕ ಸಮಾಜವನ್ನು ಕಂಗೆಡಿಸುತ್ತಿದೆ. ಇತಿಹಾಸ ಮತ್ತು ಪುರಾಣಗಳ ಸಮ್ಮಿಲನದ ಮೂಲಕ ಜನಸಾಮಾನ್ಯರಲ್ಲಿ ಮೌಢ್ಯದ ಬೀಜಗಳನ್ನು ಬಿತ್ತಲಾಗುತ್ತಿದೆ. ಗತ ಇತಿಹಾಸದ ಶವಪರೀಕ್ಷೆಯ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಕೃತ ಪ್ರವೃತ್ತಿ ಆವರಿಸುತ್ತಿದೆ. ಇದರ ನಡುವೆಯೇ ಪ್ರ�

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News