ಟಿಪ್ಪು ಸುಲ್ತಾನನ ರಾಜನೀತಿ

Update: 2017-11-18 13:06 GMT

ಟಿಪ್ಪು ಸುಲ್ತಾನನ ಸುಧಾರಣ ಕ್ರಮಗಳು ಬಹುತೇಕ ಎಲ್ಲ ಅಂಶಗಳನ್ನು ಒಳಗೊಂಡಿವೆೆ. ತನ್ನ ರಾಜ್ಯದಲ್ಲಿ ರಸ್ತೆಗಳ ಸಂಪರ್ಕ ಜಾಲ ನಿರ್ಮಿಸಿದ ಹೆಗ್ಗಳಿಕೆ ಟಿಪ್ಪು ಸುಲ್ತಾನನಿಗೆ ಸಲ್ಲು ತ್ತದೆ. ಮಲಬಾರ್‌ನ ಎಲ್ಲ ಪ್ರಮುಖ ಪ್ರದೇಶಗಳು, ನಿರ್ಲಕ್ಷಿತ ಪ್ರದೇಶಗಳ ನಡುವೆ ಈ ರಸ್ತೆಗಳು ಸಂಪರ್ಕ ಕಲ್ಪಿಸಿದ್ದವು. ಭ್ರಷ್ಟಾಚಾರ ನಿರ್ಮೂಲನೆಯ ವಿಷಯದಲ್ಲೂ ಟಿಪ್ಪು ಹಲವು ಆದೇಶಗಳನ್ನು ಹೊರಡಿಸಿ ಸರಕಾರಿ ಸೇವಕರನ್ನು ಹದ್ದುಬಸ್ತಿ ನಲ್ಲಿಟ್ಟಿದ್ದ. ಇದಕ್ಕೆ ಸಂಬಂಧಿಸಿದ ಕೆಲವು ಆದೇಶಗಳನ್ನು ಗಮನಿಸಿ:

ಆದೇಶ ಸಂಖ್ಯೆ 39

ಸೇನೆಯ ಪಿಯೋನ್‌ಗಳು ಪಟೇಲರು ಮತ್ತು ಇತರರಿಂದ ಲಂಚ ಪಡೆದು ಸರಕಾರಿ ಗ್ಯಾರಂಟಿಗಳಾಗುತ್ತಿದ್ದಾರೆ. ಅವರ ಗ್ಯಾರೆಂಟಿ ಯನ್ನು ತಿರಸ್ಕರಿಸಿ ನಂಬಿಕೆಗೆ ಅರ್ಹರಾದ ಮತ್ತು ಸ್ಥಿತಿವಂತ ಲೇವಾದೇವಿದಾರರನ್ನು ಗ್ಯಾರೆಂಟಿಗಳಾಗಿ ಒಪ್ಪಬೇಕು.

ಆದೇಶ ಸಂಖ್ಯೆ 40

ಸರಕಾರದ ಸಂದೇಶ ಸಾರುವ ಸಂದೇಶಕರು ರೈತರನ್ನು ಜೀತಕ್ಕೆ ಒತ್ತಾಯಿಸಿ ಅವರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿ ದ್ದಾರೆ. ಸರಕಾರದ ಆದೇಶದ ಪ್ರಕಾರ ಕೆಲಸ ಮಾಡುವಂತೆ ಅವರಿಗೆ ಎಚ್ಚರಿಕೆ ನೀಡಬೇಕು. ಎಚ್ಚರಿಕೆ ನೀಡಿದ ನಂತರವೂ ರೈತರನ್ನು ಶೋಷಿಸುವುದು ಮುಂದುವರಿದರೆ ಅಂಥವರನ್ನು ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಆದೇಶ ಸಂಖ್ಯೆ 91

ದೀರ್ಘವಾದ ಈ ಆದೇಶದ ಅಂತಿಮ ಪ್ಯಾರಾ ಹೀಗಿದೆ: ಕುದುರೆ ಲಾಯದ ಹುಡುಗರು ಅಗತ್ಯಕ್ಕಿಂತ ಹೆಚ್ಚು ಒಣ ಹುಲ್ಲು ಸಂಗ್ರಹಿ ಸಲು ಹಳ್ಳಿಗಳಿಗೆ ಹೋಗಬಾರದು. ಅಶ್ವದಳದ ಸೈನಿಕರು ನಗದು ಹಣ ಕೊಟ್ಟು ಹುಲ್ಲು ಖರೀದಿಸಬೇಕು. ಇಂಥ ಸಂದರ್ಭದಲ್ಲಿ ಬೈದಾಟಗಳಿಗೆ ಅವಕಾಶ ಮಾಡಿಕೊಡಬಾರದು. ಅಶ್ವದಳದ ಮಾರ್ಗವನ್ನು ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ಆದೇಶವನ್ನು ಧಿಕ್ಕರಿಸಿದವರನ್ನು ಬಂಧಿಸಿ ರಾಜನ ಬಳಿ ಕಳುಹಿಸತಕ್ಕದ್ದು. ಒಂದು ವೇಳೆ ಅಂಥವರನ್ನು ಬಂಧಿಸದಿದ್ದರೆ ಸೈನಿಕನ ಹೆಸರು, ಸೇನೆಯ ಅಧಿಕಾರಿ, ಅಶ್ವದಳದ ಅಧಿಕಾರಿಯ ಹೆಸರುಗಳನ್ನು ರಾಜನಿಗೆ ಕಳುಹಿಸತಕ್ಕದ್ದು. ಸರಕಾರದ ನಿಯಮದ ಪ್ರಕಾರ ಸಂಗ್ರಹಿಸಿದ ಹುಲ್ಲನ್ನು ಸರಕಾರದ ನಿಯಮಗಳ ಪ್ರಕಾರವೇ ಹಂಚಬೇಕು. ಇದರ ರಸೀದಿಗಳನ್ನು ಭದ್ರವಾಗಿಟ್ಟು ವರ್ಷಾಂತ್ಯದಲ್ಲಿ ಸರಕಾರಕ್ಕೆ ಸಲ್ಲಿಸತಕ್ಕದ್ದು. ಹೆಚ್ಚುವರಿ ಹುಲ್ಲು ಮಾರಾಟವಾದ ನಂತರ ಅದರ ಹಣವನ್ನು ಸರಕಾರದ ಬೊಕ್ಕಸಕ್ಕೆ ಪಾವತಿಸಬೇಕು. ಒಂದು ಸಣ್ಣ ಹುಲ್ಲುಕಡ್ಡಿಯೂ ನಿಮ್ಮ ಅನುಮತಿ ಇಲ್ಲದೆ ಮಾರಾಟವಾಗಬಾರದು ಎನ್ನುವ ಎಚ್ಚರಿಕೆ ಇರಬೇಕು.

ನಿರ್ಲಕ್ಷಿತ ಸಮುದಾಯಗಳ ಬಗ್ಗೆ ಟಿಪ್ಪುವಿನ ಸಾಮಾಜಿಕ ಕಾಳಜಿ ಪ್ರಶಂಸಾರ್ಹ.

ಆದೇಶ ಸಂಖ್ಯೆ 101

ಹಿಂದಿನ ಅಮೀರ್‌ಗಳು ಮತ್ತು ಸರಕಾರಿ ಅಧಿಕಾರಿಗಳು ಮಂಗಳ ಮುಖಿಯರು ಮತ್ತು ಅನಾಥ ಮಕ್ಕಳನ್ನು ತಂದು ಮಾರಾಟ ಮಾಡುತ್ತಿದ್ದರು. ನಂತರ ಕೆಲವು ಮಂಗಳ ಮುಖಿಯರನ್ನು ದೇವಸ್ಥಾನಗಳಿಗೆ ಸೇರಿಸಲಾಗುತ್ತಿತ್ತು. ಅವರನ್ನು ಮಾರಾಟ ಮಾಡಬಾರದು, ಅಥವಾ ದೇವಸ್ಥಾನಗಳಿಗೆ ಸೇರಿಸಬಾರದು. ಅವರೆಲ್ಲರ ಅಗತ್ಯಗಳನ್ನು ಸರಕಾರವೇ ಪೂರೈಸಬೇಕು. ಅವರು ರಾಜನ ಅರಮನೆ ತಲುಪುವ ತನಕ ಅವರಿಗೆ ಅನ್ನ ಮತ್ತು ಪ್ರತಿದಿನ ಒಂದು ನಾಣ್ಯ ಕೊಡಬೇಕು.

ಆದೇಶ ಸಂಖ್ಯೆ 116

ಒಬ್ಬ ವ್ಯಕ್ತಿ ಮದುವೆಯ ಮೊದಲು ಅಥವಾ ನಂತರ ಮಹಿಳೆ ಅಥವಾ ಬಾಲ ಸೇವಕಿಯರನ್ನು ಇಟ್ಟುಕೊಂಡಿದ್ದರೆ ಅಂಥವರನ್ನುಸರಕಾರದ ಅಧಿಕಾರಿಗಳಿಗೆ ಒಪ್ಪಿಸಬೇಕು. ಸೂಕ್ತ ವಿಚಾರಣೆಯ ನಂತರ ವ್ಯಕ್ತಿಯು ಅಪರಾಧಿ ಎಂದು ಕಂಡುಬಂದರೆ ಶಿಕ್ಷೆಗೆ ಒಳಪಡಿಸಬೇಕು.

Writer - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Editor - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Similar News