ಕರ್ನಾಟಕದ ಅಪರೂಪದ ವಿದ್ವಾಂಸ ಪ್ರೊ. ಡಿ.ಕೆ. ಭೀಮಸೇನರಾವ್

Update: 2017-11-18 14:09 GMT
ದೇವೇಂದ್ರ ಕುಮಾರ್ ಹಕಾರಿ

ತಮ್ಮ ವಿದ್ವತ್ತು ಸಂಶೋಧನೆಗಳಿಂದ ಅಖಿಲ ಕರ್ನಾಟಕ ಮಟ್ಟದ ಗೌರವ ಮನ್ನಣೆಗಳಿಗೆ ಪಾತ್ರರಾಗಿ, ಸುಮಾರು ಅರ್ಧ ಶತಮಾನ ಕಾಲ ಹೈದರಾಬಾದ್ ನಗರ ಸಾಹಿತ್ಯಿಕ ಮತ್ತು ಸಂಶೋಧನಾತ್ಮಕ ನೆಲೆಗಳಲ್ಲಿ ತಮ್ಮ ನಿರಂತರ ಅಧ್ಯಯನಶೀಲ ಪ್ರವೃತ್ತಿಯಿಂದ ವ್ಯಾಪಕ ಪ್ರಭಾವ ಬೀರಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ರಾಯಚೂರು ಪ್ರದೇಶದ ಸಿಂಧನೂರು ತಾಲೂಕಿನ ದಿದ್ದಿಗೆ ಕೇಶವರಾವ್ ಅವರ ಪುತ್ರ ಪ್ರೊ. ಡಿ.ಕೆ. ಭೀಮಸೇನರಾವ್ ಅತ್ಯಂತ ಪ್ರಮುಖರು.

1904 ರಲ್ಲಿ ದಿದ್ದಿಗೆಯ ಕೇಶವರಾವ್-ಲಕ್ಷ್ಮೀಬಾಯಿ ದಂಪತಿಗೆ ಜನಿಸಿದ ಪುತ್ರ ಭೀಮಸೇನರಾಯರು ಬಾಲ್ಯದಿಂದಲೇ ತುಂಬ ತೀಕ್ಷ್ಣಮತಿ.

ತಮ್ಮ ಹಳ್ಳಿಯಲ್ಲಿದ್ದ ಅಯ್ಯನವರ ಗಾಂವಠಿ ಅಭ್ಯಾಸ ಮಾಡಿದ ಬಳಿಕ 1912ರಲ್ಲಿ ಸ್ಥಾಪಿತವಾದ ನಿಝಾಂ ಸರಕಾರದ ಉರ್ದು ಮಾಧ್ಯಮದ ಶಾಲೆಯನ್ನು ಸೇರಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಆದರೆ ವಿದ್ಯಾರ್ಥಿ ಭೀಮಸೇನರಾವ್ ಅದೇ ಶಾಲೆಯಲ್ಲಿದ್ದ ಕನ್ನಡ ಚೆನ್ನಾಗಿ ಬಲ್ಲ ಒಬ್ಬ ಶಿಕ್ಷಕರಿಂದ ವಿವಿಧ ವಿಷಯಗಳನ್ನು ಕನ್ನಡದಲ್ಲಿ ತಿಳಿಸಿಕೊಂಡು ಎಲ್ಲ ವಿಷಯಗಳಲ್ಲಿ ಪರಿಣತಿ ಪಡೆದರು.

ಡಿ.ಕೆ. ಭೀಮಸೇನರಾವ್ ಜೊತೆ ವಿದ್ಯಾರ್ಥಿ ದೇವೇಂದ್ರ ಕುಮಾರ್ ಹಕಾರಿ

ಅವರ ಕನ್ನಡ, ಗಣಿತ, ಇಂಗ್ಲಿಷ್ ಭಾಷೆಗಳ ಜ್ಞಾನ ವಿಸ್ಮಯಕಾರಿಯಾಗಿತ್ತು. ಮುಂದಿನ ನಾಲ್ಕೂ ತರಗತಿಗಳ ಗಣಿತ, ಕನ್ನಡ, ಇಂಗ್ಲಿಷ್ ಪಾಠಗಳನ್ನು ಕರತಲಾಮಲಕ ಮಾಡಿಕೊಂಡಿದ್ದರು. ಸಂಸ್ಕೃತದ ಅಭ್ಯಾಸವಂತೂ ಬಾಲ್ಯದಿಂದಲೇ ನಿಖರವಾಗಿ ನಡೆದಿತ್ತು. ಇವೇ ಕಾರಣಗಳಿಂದಾಗಿ ಅವರಿಗೆ ಶಿಕ್ಷಣದಲ್ಲಿ ಹಿನ್ನಡೆ ಎನ್ನುವುದೇ ಎದುರಾಗಲಿಲ್ಲ.

ಭೀಮಸೇನರಾವ್ ತಮ್ಮ 15ನೆಯ ವಯಸ್ಸಿನಲ್ಲಿ ಉರ್ದು ಮಿಡ್ಲ್ ಸ್ಕೂಲ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದರು. 1922ರಲ್ಲಿ ಉಸ್ಮಾನಿಯಾ ಮೆಟ್ರಿಕ್ಯುಲೇಶನ್ - ‘ಆಲಾಸಾನ್ವಿ’ - ಪರೀಕ್ಷೆಗೆ ರಾಯಚೂರು ಪರೀಕ್ಷಾ ಕೇಂದ್ರದಿಂದ ಉತ್ತೀರ್ಣರಾದರು. ಅಂದು ಉನ್ನತ ಶಿಕ್ಷಣ ಪಡೆಯಬೇ ಕಾದರೆ ಉರ್ದು ಶಿಕ್ಷಣ ಮಾಧ್ಯಮವಿದ್ದ ಹೈದರಾಬಾದ ನಗರಕ್ಕೇ ಹೋಗಬೇ ಕಾಗುತ್ತಿತ್ತು. ಲಿಂಗಸುಗೂರ-ಸಿಂಧನೂರಿನಿಂದ ತಮ್ಮ ಬಳಗದ ಒಬ್ಬ ಶಿಕ್ಷಕರ ನೆರವಿನಿಂದ ಹೈದರಾಬಾದಿಗೆ ತೆರಳಿ ಪಡಬಾರದ ಕಷ್ಟಪಟ್ಟು ಇಂಟರ್‌ಮೀಡಿಯೆಟ್ ಪಾಸಾಗಿ, 1924ರಲ್ಲಿ ಕನ್ನಡ ಸಂಸ್ಕೃತ ವಿಷಯಗಳನ್ನು ಐಚ್ಛಿಕ ಎಂದು ಆರಿಸಿಕೊಂಡು ಬಿ.ಎ. ಪದವಿ ಪಡೆದರು. ಆಗ ಅವರಿಗೆ ಕನ್ನಡ ಭಾಷೆ, ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡುವ ಹಂಬಲ ದಿನೇ ದಿನೇ ಪ್ರಬಲವಾಗುತ್ತ ಹೋಯಿತು. ಆದರೆ ಆ ಹಂತದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಪದವಿ ಪಡೆದ ಭೀಮಸೇನರಾವ್‌ರಿಗೆ ಅನೇಕ ಆತಂಕಗಳು ಎದುರಾದುವು. ಅದರಲ್ಲಿ ಮುಖ್ಯವಾದದ್ದು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಪದವಿಗಳಿಗೆ ಮದ್ರಾಸ್, ಮೈಸೂರು ಇಂಥ ಯಾವುದೇ ವಿಶ್ವವಿದ್ಯಾನಿಲಯ ಮನ್ನಣೆ ನೀಡಿರಲಿಲ್ಲ. ಹೀಗಾಗಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗೆ (ಎಂ.ಎ) ಪ್ರವೇಶ ಪಡೆಯುವುದಕ್ಕಾಗಿ ದಾರಿ ಮುಕ್ತವಾಗಿರಲಿಲ್ಲ. ಅಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಭಾವಶಾಲಿ ಪ್ರಾಧ್ಯಾಪಕರಾಗಿದ್ದ ಪ್ರೊ. ಬಿ.ಎಂ. ಶ್ರೀಕಂಠಯ್ಯ ಅವರನ್ನು ಕಂಡಾಗ ಭೀಮಸೇನರಾವ್‌ರನ್ನು ಎಂ.ಎ. ಕನ್ನಡ ತರಗತಿಗೆ ಸೇರಿಸಿದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ರಾಯರು ಅಲ್ಲಿದ್ದ ಅನೇಕ ಪ್ರಾಧ್ಯಾಪಕರ ಗಮನ ಸೆಳೆದರು. ಬಿ.ಎಂ.ಶ್ರೀ. ಅವರು ವಿಶೇಷ ಆಸಕ್ತಿ ವಹಿಸಿ ಪ್ರೋತ್ಸಾಹ ನೀಡಿದರು. ಸತತ ಪರಿಶ್ರಮ, ಅಧ್ಯಯನಶೀಲತೆಗಳ ಫಲವಾಗಿ 1929ರಲ್ಲಿ ಎಂ.ಎ. ಪದವಿ ಪಡೆದರು. ಮೈಸೂರಿನ ಅಂದಿನ ಪರಿಸರ ಮತ್ತು ಕನ್ನಡ ಸಂಶೋಧನಾ ಕ್ಷೇತ್ರಗಳ ಪ್ರಭಾವ ಇವೆಲ್ಲವುಗಳ ಜೊತೆಗೆ ಮುಂದೆ ತಮ್ಮ ಕೃತಿಗಳಿಂದ ಕನ್ನಡ ಸಾಹಿತ್ಯಕ್ಕೆ ಗೌರವ ಮನ್ನಣೆ ತಂದುಕೊಟ್ಟ ಚಿಂತನಶೀಲ ವ್ಯಕ್ತಿಗಳು. ಡಿ.ಎಲ್. ನರಸಿಂಹಾಚಾರ್, ಕೆ.ವಿ. ಪುಟ್ಟಪ್ಪ, ಅನಂತ ರಂಗಾಚಾರ್, ಕೆ.ವೆಂಕಟರಾಮಪ್ಪ ಮುಂತಾದ ಸಹಪಾಠಿಗಳ ಸ್ನೇಹ, ಜೊತೆಗೆ ತಮ್ಮ ಗುರುಗಳಾದ ಬಿ.ಎಂ.ಶ್ರೀ ಅವರ ವಾತ್ಸಲ್ಯ ಅಂದು ಮೈಸೂರು ಪ್ರದೇಶದ ಕನ್ನಡದ ಒಟ್ಟಾರೆ ಕರ್ನಾಟಕ ಸಾಹಿತ್ಯ, ಸಂಶೋಧನೆಯ ಮತ್ತು ಸಾಂಸ್ಕೃತಿಕ ಪರಂಪರೆಯ ಪುನರುಜ್ಜೀವನದ ಅತ್ಯುತ್ಸಾಹದ ವಾತಾವರಣ ಭೀಮಸೇನರಾವ್‌ರಲ್ಲಿ ಕನ್ನಡ ಭಾಷೆ ಸಾಹಿತ್ಯಗಳನ್ನು ಸ್ಥಿರಗೊಳಿಸುವ ನೂರಾರು ಕನಸುಗಳನ್ನು ಚಿಗುರಿಸಿದವು.

    ಬಿ.ಎಂ.ಶ್ರೀಕಂಠಯ್ಯ

‘ಕನ್ನಡವನ್ನು ಉರ್ದು ಮಾಧ್ಯಮದಲ್ಲಿ ಕಲಿತು ಬಂದಿದ್ದೀರಾ?’ ಎನ್ನುವ ವಿಡಂಬನೆಯ ಚಾಟಿ ಅವರನ್ನು ಆತ್ಮಶೋಧನೆಗೆ ತೊಡಗಿಸಿತಂತೆ. ಆಗ ಜಿದ್ದಿನಿಂದಲೇ ಕನ್ನಡ ಸಾಹಿತ್ಯದ ವ್ಯಾಪಕ, ಆಳ ಅಧ್ಯಯನ ಮಾಡಿ, ತಮ್ಮ ವಿದ್ಯಾಗುರುಗಳಿಂದ ಭೇಷ್ ಅನಿಸಿಕೊಳ್ಳುವವರೆಗೆ, ಜೀವನದ ಕೊನೆಯುಸಿರು ಇರುವವರೆಗೆ (1969) ತಮ್ಮ ವಿದ್ವತ್ತು ಪ್ರತಿಭೆ ಮೆರೆದರು.

ಉಸ್ಮಾನಿಯಾ ವಿಶ್ವವಿದ್ಯಾನಿಲಯ ಮತ್ತು ಅದಕ್ಕೆ ಸಂಲಗ್ನಗೊಂಡ ವಿವಿಧ ಕಾಲೇಜುಗಳಲ್ಲಿ ಕನ್ನಡ ಅಧ್ಯಯನ ಅಧ್ಯಾಪನಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಕನ್ನಡ ತಲೆಯೆತ್ತುವ ಕಾರ್ಯ ಮಾಡಿದರು.

1930-31ರ ಸುಮಾರು ಉಸ್ಮಾನಿಯಾ ವಿಶ್ವ ವಿದ್ಯಾ ನಿಲಯದಲ್ಲಿ ಕನ್ನಡ ಬೋಧಕರಾಗಿ ಸೇರಿದ ಭೀಮ ಸೇನರಾವ್ ತಮ್ಮ ಭಾಷಾಶಾಸ್ತ್ರ, ವ್ಯಾಕರಣಶಾಸ್ತ್ರ, ಕಾವ್ಯ, ಕಾವ್ಯಮೀಮಾಂಸೆ ಮುಂತಾದ ವಿಷಯಗಳ ಪರಿಣತಿಯಿಂದಾ ಗಿ ಇತರ ವಿಭಾಗದ ಪ್ರಾಧ್ಯಾಪಕರ ಮನ್ನಣೆ ಗೌರವಗಳಿಗೆ ಪಾತ್ರರಾದರು.

‘13ನೆಯ ಶತಮಾನದ ಕರ್ನಾಟಕಾಂಧ್ರ ಮಹಾರಾಷ್ಟ್ರ ಸಾಹಿತ್ಯಾವ ಲೋಕನ’ ಎನ್ನುವ ಅವರ ಸಂಶೋಧನಾ ಪ್ರಬಂಧ ಉಸ್ಮಾನಿಯಾ ವಿಶ್ವ ವಿದ್ಯಾನಿಲಯದಿಂದಲೇಪ್ರಕಟಗೊಂಡು ಇತರ ಭಾಗದ ಹೆಚ್ಚಿನ ಸಂಶೋಧಕರ ಮೆಚ್ಚುಗೆ ಪಡೆಯಿತು, ಗಮನಸೆಳೆಯಿತು. ಈ ಕಾಲಾವಧಿಯಲ್ಲಿ ಉಸ್ಮಾನಿಯಾ ವಿಶ್ವದ್ಯಾನಿಲಯದ ಕನ್ನಡ ವಿಭಾಗವನ್ನು ಸಮಗ್ರವಾಗಿ ಮತ್ತು ಸಮರ್ಥವಾಗಿ ರೂಪಿಸುವ ಹೊಣೆ ಹೊತ್ತರು. ಕನ್ನಡದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನದ ಹಂಬಲವುಳ್ಳ ಕನ್ನಡದ ಪ್ರತಿಭಾವಂತರಿಗೆ ಸಂಶೋಧನೆಯ ಗಾಢ ನಿಷ್ಠೆ, ಸೃಜನಶೀಲ ಮನಸ್ಸು, ಸಂಶೋಧನೆಯ ವಿದ್ಯಾರ್ಥಿಗಳು - ಅಂಥವರಿಗೆ ಸಮರ್ಥ ಆಧಾರ ಮತ್ತು ಸಮಗ್ರ ಪ್ರಜ್ಞೆ ಮೂಡಿಸುವ ಕಾರ್ಯ ಜರುಗಿಸಿದರು.

1933 ರಿಂದ ಸುಮಾರು ಕಾಲ ಶತಮಾನ ಮಿಕ್ಕಿ ಕನ್ನಡ ವಿಭಾಗವನ್ನು ಬೆಳೆಸಿದರು. ಅನೇಕ ಪ್ರದೇಶಗಳಿಂದ - ರಾಯಚೂರು, ಕಲಬುರಗಿ, ಬೀದರ್ ಪ್ರದೇಶ ಮತ್ತು ಕೆಲ ವೊಮ್ಮೆ ಅಂದಿನ ಹಳೆಯ ಮೈಸೂರು ಪ್ರದೇಶದಿಂದಲೂ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ಸಾಹಿತ್ಯದ ಅಧ್ಯಯ ನಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಬಂದು ಪ್ರವೇಶ ಪಡೆಯುತ್ತಿದ್ದರು.

ವಿದ್ವಾನ್ ಮಾನ್ವಿ ನರಸಿಂಗರಾಯರು, ಕಾವ್ಯಾನಂದ, ಜಯತೀರ್ಥ ರಾಜ ಪುರೋಹಿತ, ಇಟಗಿ ರಾಘವೇಂದ್ರ, ಮಹಾಂತಯ್ಯ, ಬಿ.ವಿ. ಮಲ್ಲಾಪೂರ, ಶರಣಬಸವ ಜಾವಳಿ, ಶಿವಶರಣ ಜಾವಳಿ, ಶಾಂತರಸ, ಶೈಲಜಾ ಉಡುಚಣ, ರಾಘವೇಂದ್ರರಾವ್ (ನನ್ನ ಸಹಪಾಠಿ), ಕೆ.ವಿ. ಲಿಂಗಪ್ಪ, ಆರ್. ಇಂದಿರಾ, ಉಷಾ ಅಗ್ನಿಹೋತ್ರಿ, ಸುರಪುರ ಭೀಮಪ್ಪ, ಬಿ. ಮಹಾದೇವಪ್ಪ, ಲಕ್ಷ್ಮಣ ಜಾಗೀರ್‌ದಾರ್, ಸೀತಾರಾಮ ಜಾಗೀರ್‌ದಾರ್, ಮಂದಾಕಿನಿ ತವಗ- ಹೀಗೆ ಅನೇಕ ಶಿಷ್ಯಬಳಗ ಅವರದಾಗಿದೆ.

ಪ್ರೊ. ಭೀಮಸೇನರಾವ್‌ರ ವ್ಯಕ್ತಿತ್ವವೆಂದರೆ ವಿದ್ವತ್ತು-ವಿನಯಗಳ ಸಂಗಮ ವಾಗಿತ್ತು. ಹೈದರಾಬಾದ್ ನಗರದ ಬಾಗ್‌ಲಿಂಗಂಪಲ್ಲಿಯಿಂದ ಸುಲ್ತಾನ್‌ಬಜಾರ್‌ನ ಚಾವಡಿ, ಬಡಿ ಹೀಗೆ ವಿವಿಧ ಕಡೆಗೆ ಚದುರಿದ ಕನ್ನಡಿಗರನ್ನು ನಾಡಹಬ್ಬ, ಕವಿಗೋಷ್ಠಿ ಇಂಥ ಸಂದರ್ಭಗಳನ್ನು ಸೃಷ್ಟಿಸಿ ಎಲ್ಲರನ್ನೂ ಒಂದುಕಡೆ ಕೂಡಿಸುವ ಯತ್ನ ಮಾಡಿದರು. ಸಾಹಿತ್ಯ ಸಂವರ್ಧನೆ ಮತ್ತು ಸಾಹಿತ್ಯ ಪ್ರಸರಣೆಯ ಕಾರ್ಯ ಮಾಡಿದರು. ಗುರುಗಳಾದ ಪ್ರೊ. ಭೀಮಸೇನರಾವ್‌ರು, ಆಯಕಟ್ಟಿನ ಸ್ಥಳದಲ್ಲಿ ಅನೇಕರ - ಮಟ್ಮಾರಿ ಹನಮಂತರಾವ್, ಜಿ.ಕೆ. ಪ್ರಾಣೇಶಾಚಾರ್, ರಾಘವೇಂದ್ರರಾವ್ ಜಾಗೀರ್‌ದಾರ್, ‘ಯಣ್ಣಿ’ ರಾಮಚಂದ್ರರಾವ್, ಗುಡಗುಂಟಿ ರಾಮಾಚಾರ್, ಜನಾರ್ಧನರಾವ್ ದೇಸಾಯಿ, ಜಿ.ಎಸ್. ಮೇಲ್ಕೋಟೆ, ಮುಂತಾದವರ - ಸಹಕಾರದಿಂದ ಕರ್ನಾಟಕ ಸಾಹಿತ್ಯ ಮಂದಿರದ ಪ್ರೇರಕಶಕ್ತಿಯಾಗಿ ಮತ್ತೆ ಕೆಲವು ವರ್ಷ ಅದರ ಅಧ್ಯಕ್ಷರಾಗಿ ಕರ್ನಾಟಕ ಸಾಹಿತ್ಯ ಮಂದಿರವೊಂದು ಸಾಂಸ್ಕೃತಿಕ ಕೇಂದ್ರವಾಗಿ ಅದಕ್ಕೆ ಪ್ರತ್ಯೇಕ ಕಟ್ಟಡ (ಮುಂದೆ ಮಾನ್ಯ ಶ್ರೀ ವೀರೇಂದ್ರ ಪಾಟೀಲರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದಾಗ ಅವರು ಕೊಡಮಾಡಿದ ವಿಶೇಷ ಅನುದಾನದಿಂದ ಇಂದಿನ ಕಟ್ಟಡ ತಲೆಯೆತ್ತಿದೆ) ಅದರದೇ ಮುದ್ರಣಾಲಯ, ವಾಚನಾಲಯ, ಪ್ರಕಾಶನ ಇತ್ಯಾದಿಗಳನ್ನು ಇತರರ ಸಹಕಾರ ಪಡೆದು ರೂಪಿಸಿದರು. ‘ಹೂಮಾಲೆ’, ‘ಪಂಚತಂತ್ರ’ ಮುಂತಾದ ಕೃತಿಗಳು ಪಠ್ಯಪುಸ್ತಕವಾದಾಗ ಅದರಿಂದ ಬಂದ ಗೌರವಧನವನ್ನು ನೀಡಿ ಕರ್ನಾಟಕ ಸಾಹಿತ್ಯ ಮಂದಿರದ ಕಾರ್ಯ ನಿರ್ವಹಣೆ ಸುಗಮವಾಗಲು ದಾರಿ ಮಾಡಿ .ಕೊಟ್ಟರು. ತಮ್ಮ ವಿಚಾರ ಚರ್ಚೆಗಳ ಮೂಲಕ ಹೈದರಾಬಾದ್ ಕನ್ನಡಿಗರಲ್ಲಿ ಸ್ವಾಭಿಮಾನ ಹೊಮ್ಮಿಸಿದರು.

ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿ ಲಯಗಳ ಪಠ್ಯಮಂಡಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನಿಘಂಟು, ವಿಶ್ವಕೋಶ ಹೀಗೆ ಸದಸ್ಯರಾಗಿದ್ದು ವಿವಿಧ ನೆಲೆಗಳಲ್ಲಿ ತಮ್ಮ ವಿದ್ವತ್ತಿನ ಪ್ರಯೋಜನ ನೀಡಿದರು.

ನನ್ನ ಗುರುಗಳಾಗಿದ್ದ ಪ್ರೊ. ಭೀಮಸೇನ ರಾವ್‌ರು ಒಂದಲ್ಲ ಒಂದು ಅಧಿಕೃತ ಕಾರಣ ದಿಂದ ಪ್ರೊ.ಡಿ.ಎಲ್. ನರಸಿಂಹಾಚಾರ್, ತೀ. ನಂ.ಶ್ರೀ, ಅಂಬಿಕಾತನಯದತ್ತ, ಅ.ನ ಕೃ. ಮುಂತಾ ದವರನ್ನು ಆಮಂತ್ರಿಸಿ ವಿಶ್ವವಿದ್ಯಾನಿಲಯ, ಕರ್ನಾಟಕ ಸಾಹಿತ್ಯ ಮಂದಿರ ಮತ್ತು ವೀರಶೈವ ವಿದ್ಯಾವರ್ಧಕ ಹಾಸ್ಟೆಲ್ ಗಳಲ್ಲಿಯೂ ಅಂಥ ಮಹನೀಯರ ಉಪನ್ಯಾಸಗಳನ್ನು ಏರ್ಪಡಿಸಿ ಕನ್ನಡ ಸಮುದಾಯಗಳಿಗೆ ಅಂಥ ಪ್ರಮುಖರ ವಿಚಾರಗಳ ಪ್ರಯೋಜನವಾಗುವಂತೆ ನೋಡಿಕೊಳ್ಳುತ್ತಿದ್ದರು. ಕನ್ನಡ ಸಾಹಿತ್ಯದ ರಸದೂಟದೊಂದಿಗೆ ಕನ್ನಡ ಹಬ್ಬದ ಸಡಗರದ ವಾತಾವರಣ ಅನುರಣಿಸುವಂತಾಗುತ್ತಿತ್ತು. ಪ್ರಸ್ತುತ ಸಂಕಲನದಲ್ಲಿ ಹೈದರಾಬಾದ್ ಪ್ರಾಂತದ ಕನ್ನಡ ಗ್ರಂಥಗಳ ಸಂಶೋಧನೆ, ಹೈದರಾಬಾದ್ ಪ್ರಾಂತದ ಕನ್ನಡ ಸಾಹಿತ್ಯ ಸೃಷ್ಟಿ, ಕಲಬುರಗಿ, ರಾಯಚೂರು, ಬೀದರ್ ಭಾಗದ ಕನ್ನಡ ಭಾಷೆಯ ವೈಶಿಷ್ಟ್ಯ, ಕನ್ನಡದ ಮೇಲೆ ಅನ್ಯ ಭಾಷೆಗಳ ಪ್ರಭಾವ, ಕನ್ನಡ ತೆಲುಗುಗಳಿಗೆ ಏಕಲಿಪಿ, ಶಿವಾನುಭವ ಮಂಟಪ, ಶ್ರೀ ಪುರಂದರದಾಸರು, ಆಂಧ್ರದ ಸ್ವಾತಂತ್ರವೀರರು ಮುಂತಾದ ಮಹತ್ವದ ಲೇಖನ ಬರೆದು, ಆಕಾಶವಾಣಿಯ ಮೂಲಕ ಪ್ರಸಾರಗೊಳಿಸಿ, ಹೈದರಾ ಬಾದ್ ಕರ್ನಾಟಕ ಸಾಹಿತ್ಯದ ಅಗ್ಗಳಿಕೆಯನ್ನು ವಿವೇಚಿಸಿ ಈ ಭಾಗದ ಕನ್ನಡಿಗರನ್ನು ಎಚ್ಚರಿಸಿದರು ಮತ್ತು ಅವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸಗಳನ್ನು ಒಡಮೂಡಿಸಿದರು. ಈ ಬಗೆಯ ಪ್ರಯತ್ನಗಳಿಂದಾಗಿ 1945ರ ಜುಲೈ ತಿಂಗಳು ಹೈದರಾಬಾದ್ ಸಾಹಿತ್ಯ ಸಮ್ಮೇಳನದ ಪ್ರಥಮ ಅಧಿವೇಶನ ಜರುಗಿದ್ದು, ಒಂದು ಚಾರಿತ್ರಿಕ ದಾಖಲೆ. ಆ ಅಧಿವೇಶನಕ್ಕೆ ರಾಯಚೂರಿನ ಸಾಹಿತ್ಯಾಸಕ್ತರ ಒಲುಮೆಯ ಒತ್ತಾಯದ ಮೇರೆಗೆ ಪ್ರೊ. ಭೀಮಸೇನರಾವ್ ಅವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಆ ಅಧಿವೇಶನದ ಅಧ್ಯಕ್ಷ ಸ್ಥಾನದಿಂದ ಸಾಹಿತ್ಯ ಸೃಷ್ಟಿ ಕುರಿತು ಮಾತಾಡುತ್ತ, ‘‘ಅದು ಹುಟ್ಟುವುದು ಮನುಷ್ಯ ಪ್ರಯತ್ನದಿಂದ. ಅದನ್ನೇ ಸಾಹಿತ್ಯದೇವಿಯ ಪ್ರಸನ್ನತೆಗಾಗಿ ನಾವು ಮಾಡುವ ತಪಸ್ಸು ಎಂದು ಹೇಳಬಹುದು... ಈ ತಪಸ್ಸನ್ನು ನಾವು ಎಷ್ಟರಮಟ್ಟಿಗೆ ಮಾಡಿದ್ದೇವೆ ಎನ್ನುವುದನ್ನು ನಾವೇ ವಿಚಾರಿಸಿಕೊಳ್ಳಬೇಕು’’.

ಆತ್ಮಶೋಧದ ಅವರ ಈ ಕರೆಯಿಂದಾಗಿ ಹೈದರಾಬಾದ್ ಕರ್ನಾಟಕ ಕನ್ನಡ ಭಾಷಿಕರು ಜಾಗೃತರಾಗಿ ಅಲ್ಲಲ್ಲಿ ನಾಡ ಹಬ್ಬದ ಆಚರಣೆಗಳ ಮೂಲಕ ಸಾಹಿತ್ಯಚಿಂತನೆ ನಡೆಸಿದರು. ಮುಂದೆ ಕೆಲವೇ ವರ್ಷಗಳ ಅವಧಿಯಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾದರಿಯಲ್ಲಿ ‘ಹೈದರಾಬಾದ್ ಕನ್ನಡ ಸಾಹಿತ್ಯ ಪರಿಷತ್ತು’ ಎನ್ನುವ ಸಂಘಟನೆ ತಲೆಯೆ ತ್ತಿತು. ವಿದ್ವಾನ್ ಮಾನ್ವಿ ನರಸಿಂಗರಾವ್, ಕಾವ್ಯಾನಂದ, ಮುಂತಾದವರು ಈ ಕನ್ನಡದ ತೇರು ಸಾಗಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದರು.

1943ನೆ ಜನವರಿ 28-29-30 ಮೂರೂ ದಿನ,ಅಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾ ಪಕರಾಗಿದ್ದ ಪ್ರೊ. ಡಿ.ಕೆ. ಭೀಮಸೇನ ರಾವ್, ಧಾರವಾಡದ ಪ್ರತಿಷ್ಠಿತ ಕನ್ನಡ ಸಂಶೋಧನಾ ಸಂಸ್ಥೆಯಿಂದ ಆಹ್ವಾನಿತ ರಾಗಿ ಧಾರವಾಡಕ್ಕೆ ಬಂದು ಶಬ್ದಮಣಿದರ್ಪಣದ ಪಾಠಾಂತರ ಗಳು ಕುರಿತು ಒಂದು, ಎರಡು, ‘ಅನುಭ ವಾಮೃತ’, ‘ಹರಿಕಥಾಮೃತಸಾರ’ ಹೀಗೆ ಮೂರು ಸಂಶೋಧನ, ದಾರ್ಶನಿಕ, ತುಲನಾತ್ಮಕ ಪ್ರಬಂಧಗಳನ್ನು ಮಂಡಿಸಿದರು. ಅಂದೇ ಅಚ್ಚಾಗಿದ್ದ ಅವು ಕೂಡ ಇಂದು ಲಭ್ಯವಿಲ್ಲ. ಆ ಮೌಖಿಕ ಪ್ರಬಂಧ ಗಳನ್ನೂ ಇದರಲ್ಲಿ ಏಕೆ ಸೇರಿಸಬಾರದು ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಲಕ್ಕಪ್ಪಗೌಡರು ಸೂಚಿಸಿದರು. ‘ನೇಕಿ ಔರ ಪೂಛಿ ಪೂಛಿ’ ಎನ್ನುವುದು ಉರ್ದು ಭಾಷೆಯ ಒಂದು ಕಹಾವತ್ (ಒಳ್ಳೆಯ ಕಾರ್ಯ ಮಾಡಲು ಕೇಳುವುದೇಕೆ?) ಸರಿ ತಕ್ಷಣ ಸಾಹಿತಿಮಿತ್ರ ಗೋನುವಾರ ಕಿಶಿನ್‌ರಾವ್, ಹಿರಿಯ ಮಿತ್ರ ಪ್ರೊ. ತಿರುಮಲರಾವ್ ಅವರಿಂದ ಪ್ರತಿ ಒದಗಿಸಿದರು. ಹೀಗೊಂದು ಕಡೆ ತಾಯಿನುಡಿಯ ಅಧಿಕ ಅಭಿಮಾನದಿಂದ ಕನ್ನಡ ಭಾಷೆ ಸಾಹಿತ್ಯಗಳ ಪ್ರಾಚೀನತೆ, ಸತ್ವಗಳನ್ನು, ಆಳವಾದ ಅಧ್ಯಯನಗಳ ಮೂಲಕ ಅರಿತು, ಶಿಲಾಶಾಸನಗಳ ಶೋಧ ಮತ್ತು ತೌಲನಿಕ ವಿವೇಚನೆಗಳಿಂದಾಗಿ ಹೈದರಾಬಾದ್ ಪ್ರದೇಶದ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿಯ ಸಂವರ್ಧನೆಯ ಕಾರ್ಯ ಮಾಡಿದರೆ, ಇನ್ನೊಂದು ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆ ಸಂಘಟನೆಗಳ ಮೂಲಕ ಕನ್ನಡ ಕಟ್ಟುವ ಮತ್ತು ಕನ್ನಡಿಗರಿಗೆ ಕನ್ನಡ ಭಾಷೆ, ಸಾಹಿತ್ಯಗಳ ಹಿರಿಮೆಯನ್ನು ಎತ್ತಿತೋರುವ ಮಹತ್ತರ ಕಾರ್ಯ ಸಾಧಿಸಿದರು. ತನ್ಮೂಲಕ ಹೈದರಾಬಾದ್ ರಾಜ್ಯದ ಕನ್ನಡ ಭಾಷಿಕರಲ್ಲಿ ಆತ್ಮಗೌರವ, ಆತ್ಮವಿಶ್ವಾಸಗಳನ್ನು ಮೂಡಿಸುವ ವಿರಳ ಕಾರ್ಯ ಮಾಡಿದರು. 1950ರ ಸುಮಾರು ನಾನು (ಉರ್ದು ಮಾಧ್ಯಮದಿಂದ ಶಿಕ್ಷಣ ಪಡೆದ ಕಾರಣ) ಪದವಿ ಅಭ್ಯಾಸಕ್ಕಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಸೇರಿದಾಗ ಬಿ.ಎ. ಮುಗಿಸುವ ಹೊತ್ತಿಗೆ ಸಿ. ನಾರಾಯಣರೆಡ್ಡಿ (ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ), ಎಂ.ಬಾಗಾರೆಡ್ಡಿ (ಐದು ಸಲ ಶಾಸಕ ಮತ್ತು ಮೂರು ಸಲ ಲೋಕಸಭಾ ಸದಸ್ಯ), ಮಹಾಂತಯ್ಯ (ತೆಲುಗು-ಕನ್ನಡ ಎರಡೂ ಭಾಷೆ ಸಾಹಿತ್ಯ ಬಲ್ಲ ವಿದ್ವಾಂಸ - ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದವರು) ನಮ್ಮೆಲ್ಲರ ನಡುವೆ ಸೇತುವೆಯಾಗಿದ್ದು, ಅಂದು ವಿವಿಧ ಭಾಷಿಕ ಗುಂಪುಗಳ ನಡುವೆ ಆರೋಗ್ಯಕರವಾದ ಸಾಹಿತ್ಯಿಕ ಸ್ನೇಹ-ಸ್ಫರ್ಧೆಗಳನ್ನು ಹುಟ್ಟುಹಾಕಿದರು.

ಪದವಿ ಪರೀಕ್ಷೆ ಮುಗಿಸಿ ಪರಿಣಾಮ ಪ್ರಕಟವಾದ ಕೆಲವು ದಿನಗಳ ಬಳಿಕ ಸ್ನಾತಕೋತ್ತರ ವರ್ಗಗಳಿಗೆ ಸೇರಲು ವಿಶ್ವವಿದ್ಯಾನಿಲಯಕ್ಕೆ ಬಂದಾಗ ನನಗೆ ವಿವಿಧ ಆಕರ್ಷಣೆಗಳು ಎದುರಾದವು. ಆದರೆ ಪ್ರೊ. ಡಿ.ಕೆ. ಭೀಮಸೇನರಾವ್‌ರ ಕೈಯಲ್ಲಿ ಕನ್ನಡ ಭಾಷೆ ಸಾಹಿತ್ಯ ಅಧ್ಯಯನ ಮಾಡಬೇ ಕೆನ್ನುವ ನನ್ನ ಹಂಬಲಕ್ಕೆ ನೀರೆರೆದವರು ಎಂ.ಎಸ್. ಮಹಾಂತಯ್ಯ ಮತ್ತು ಇಟಗಿ ರಾಘವೇಂದ್ರ ರಾವ್ ‘ಇರಾ’.

ಐದು ವರ್ಷ ಅವರು ನನಗೆ ಗುರುಗಳಾಗಿ ಪಾಠ ಮಾಡಿದ್ದು, ಕನ್ನಡ ಕಲಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದೆ; ಕಿವಿ ತುಂಬಿದೆ. ನಮ್ಮ ಗುರುಗಳು ಬರೆದ ಈ ಕೆಳಗಿನ ವಾಕ್ಯಗಳು ಬಹು ಮಾರ್ಮಿಕವಾಗಿವೆ.

‘‘ಸಂಸ್ಕೃತಕ್ಕೂ ದೇಶಭಾಷೆಗಳಿಗೂ ಹೋರಾಟ ಬಹುಕಾಲದಿಂದಲೇ ನಡೆದು ಬಂದದ್ದು. ಆತ್ಮಜ್ಞಾನ ಕ್ಕಾಗಿಯೂ ವೇದಾಂತ ಬೋಧನೆಗಾಗಿಯೂ ಸಂಸ್ಕೃತವಲ್ಲದೆ ದೇಶಭಾಷೆ ಅಲ್ಲವೆಂಬ ಭಾವವು ಎಲ್ಲದರಲ್ಲಿಯೂ ಬೇರೂರಿತ್ತು...’’ ಇಂಥ ಕಾರಣಗಳಿಂದಾಗಿ ‘ದಾಸಕೂಟ’ದವರು ತಮಗೆ ಸಂಸ್ಕೃತ ಜ್ಞಾನವಿದ್ದರೂ ತಮ್ಮ ಅಧ್ಯಾತ್ಮದ ದಿವ್ಯ ಅನುಭಾವಗಳನ್ನು, ದಾರ್ಶನಿಕ ರಹಸ್ಯಗಳನ್ನು (ಸಾಕ್ಷಾತ್ಕಾರ ಇತ್ಯಾದಿ) ಕನ್ನಡ ನುಡಿಯಲ್ಲಿಯೇ ಹೇಳುವ ಪ್ರಯತ್ನ ಮಾಡಿದ್ದು ಅಂದಿನ ಅಗತ್ಯವಾಗಿತ್ತೆಂದು ತೋರುತ್ತದೆ. ಆದ್ದರಿಂದಲೇ ‘ಮುನ್ನ ಉಪನಿಷದರ್ಥವನು ಸಂಪನ್ಜಮತಿಗಳು ಪೇಳ್ದುದನೆ ನಾನು ಕನ್ನಡಿಸಿದೆನು’ ಎಂದು ಹೇಳಿಕೊಂಡಿದ್ದಾನೆ. ಅದಕ್ಕೆ ಜಗನ್ನಾಥದಾಸರು ‘ಭಕ್ತಿ’ ಎನ್ನುವ ಮತ್ತೊಂದು ಆಯಾಮ ಸೇರಿಸಿ ‘ಕುಹಕಿ ತಿರಸ್ಕರಿಸಲೇನುಹುದು ಭಕ್ತಿ ಪುರಸ್ಕರದಿ ಕೇಳ್ವರಿಗೊಲಿಯುವನು...’ ಈ ಕಾರಣದಿಂದ ದೂಸಾದಗಳು ಕನ್ನಡಕ್ಕೆ ಒಲಿದ ಸಂಗತಿ ಸಂವಹನಗೊಳ್ಳುತ್ತದೆ.

ಪ್ರೊ. ಡಿ.ಕೆ. ಭೀಮಸೇನರಾವ್ ಅವರು, ಎಷ್ಟೋ ಸಲ ವೀರಶೈವ ಧರ್ಮದ ಷಟ್‌ಸ್ಥಲ ಮತ್ತು ಸಪ್ತಭೂಮಿಕೆಗಳ ಹೋಲಿಕೆಯನ್ನು ಕೂಡ ವಿವರಿಸು ತ್ತಿದ್ದರು. ಹೀಗೆ ಅಂಗೈಯಲ್ಲಿ ಕನ್ನಡಿಯಿರುವಾಗ ಇನ್ನು ಬೇರೆ ವ್ಯಾಖ್ಯಾನ ವೇಕೆ?

Writer - ದೇವೇಂದ್ರ ಕುಮಾರ್ ಹಕಾರಿ

contributor

Editor - ದೇವೇಂದ್ರ ಕುಮಾರ್ ಹಕಾರಿ

contributor

Similar News