ಲೈಂಗಿಕ ಶಿಕ್ಷಣ

Update: 2017-11-19 07:50 GMT

ಭಾಗ 1

ಲೈಂಗಿಕ ಶಿಕ್ಷಣವೆಂದರೆ ಸಂತಾನೋತ್ಪತ್ತಿಯ ಕ್ರಿಯೆಯ ವಿವರಣೆ ಅಲ್ಲ. ಮಗು ಹುಟ್ಟುವ ಕಥೆಯಲ್ಲ. ವೀರ್ಯಾಣು ಮತ್ತು ಅಂಡಾಣುಗಳ ವೈಜ್ಞಾನಿಕ ವಿವರ ಮಾತ್ರವಲ್ಲ. ಇನ್ನೂ ಪ್ರಾರಂಭಿಕ ಹಂತದಲ್ಲಿಯೇ ಲೈಂಗಿಕ ಶಿಕ್ಷಣ ಮಕ್ಕಳಿಗೆ ದೊರಕಬೇಕಾಗಿರುವುದು ಅವರ ವಿಸರ್ಜನಾಂಗಗಳು ದೇಹದಲ್ಲಿ ಇತರ ಅಂಗಗಳಂತೆಯೇ ಅವೂ ಸಾಮಾನ್ಯ ತಿಳುವಳಿಕೆಯನ್ನು ಹೊಂದುವುದೇ ಆರಂಭಿಕ ಪಾಠವಾಗಿರುತ್ತದೆ.

ಲೈಂಗಿಕ ಶೋಷಣೆಗಳು

ಇತ್ತೀಚೆಗೆ ಬೀದರಿನಲ್ಲಿ ಶಾಲೆಗೆ ಹೋಗುವ ಹದಿನಾಲ್ಕು ವರ್ಷದ ಹುಡುಗಿ ಮಗುವನ್ನು ಹೆತ್ತಳು. ಅವಳು ಶಾಲೆಗೆ ಹೋಗುತ್ತಿದ್ದಾಗ, ಗ್ಯಾರೆಜ್‌ನಲ್ಲಿ ಕೆಲಸ ಮಾಡುತ್ತಿದ್ದ ಇಪ್ಪತ್ತರ ಹರೆಯದ ಹುಡುಗ ಹುಡುಗಿಯನ್ನು ಮಾತಾಡಿಸಿಕೊಂಡು, ಸ್ನೇಹ ಸಂಪಾದಿಸಿಕೊಂಡು, ತನ್ನ ಪರಿಚಯವನ್ನು ಪ್ರಣಯಕ್ಕೆ ಬಳಸಿಕೊಂಡು ಶಾಲೆಗೆ ಹೋಗುವ ಹೆಣ್ಣುಮಗುವು ಗರ್ಭಿಣಿಯಾಯಿತು.ಅವಳನ್ನು ಈ ಪರಿಸ್ಥಿತಿಗೆ ತಂದಿಟ್ಟ ಹುಡುಗನನ್ನು ಪೊಕ್ಸೊ ಕಾಯ್ದೆಯಡಿ ಪೊಲೀಸರಿಗೊಪ್ಪಿಸಲಾಯಿತು. ಆದರೆ ಆ ಹುಡುಗಿಯ ಮನೆಯವರು ಬಡವರೂ ಮತ್ತು ಕೂಲಿ ಕೆಲಸ ಮಾಡುವವರೂ ಆಗಿದ್ದು ಪೋಲಿಸು, ಕೋರ್ಟು ಎಂದೆಲ್ಲಾ ಅಲೆಯಲು ಶಕ್ತರಾಗಿರದ ಕಾರಣ ಅವೆಲ್ಲಾ ಏನೂ ಬೇಡ, ಬಿಟ್ಟುಬಿಡೋಣ ಎನ್ನುವಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ. ಆ ಹುಡುಗಿಗೆ ಶಾಲೆಯನ್ನು ಬಿಡಲು ಇಷ್ಟವಿಲ್ಲ. ಶಿಕ್ಷಣವನ್ನು ಮುಂದುವರಿಸುವಲ್ಲಿ ಆಸಕ್ತಿಯೂ ಇದೆ ಮತ್ತು ಅವಳು ಅದಕ್ಕೆ ಅರ್ಹಳೂ ಇದ್ದಾಳೆ. ಹಾಗೆಯೇ ಅದು ಅವಳ ಹಕ್ಕೂ ಕೂಡ. ಆದರೆ, ಓದಿಕೊಂಡು, ವ್ಯಾಸಂಗ, ಕೆರಿಯರ್ ಎಂದು ಏನೆಲ್ಲಾ ವಿಷಯಗಳಿಗೆ ಗಮನ ಹರಿಸಬೇಕಾಗಿರುವ ಹುಡುಗಿ ಅನಗತ್ಯವಾಗಿ ದೈಹಿಕ ತೃಷೆಗೆ ಬಲಿಯಾಗಿ ಅವಾಂತರಗಳನ್ನು ಮೈಮೇಲೆ ಎಳೆದುಕೊಂಡಿರುವುದು ಬೇಸರದ ಮತ್ತು ಬೇಡದ ಸಂಗತಿ.

ಇಲ್ಲಿ ವಯಸ್ಸಿಗೆ ಬಂದಿರದ ಹುಡುಗಿಯನ್ನು ತನ್ನ ಕಾಮುಕತನಕ್ಕೆ ಬಳಸಿಕೊಳ್ಳುವ ಹುಡುಗನ ಅಪರಾಧಕ್ಕೆ ಶಿಕ್ಷೆ ಕೊಡುವುದು ಒಂದು ಭಾಗವಾದರೆ, ಈ ಹೆಣ್ಣುಮಗುವಿಗೆ ಸಮಾಲೋಚನೆ, ಮಗುವಿನ ಜನನದ ಕುರಿತಾಗಿ ತೆಗೆದುಕೊಳ್ಳಬೇಕಾದ ನಿರ್ಣಯಗಳು, ಅವರ ಮನೆಯವರಿಗೆ ಮತ್ತು ಅವಳಿಗೆ ಸ್ಥೈರ್ಯವನ್ನು ತುಂಬುವುದರ ಜೊತೆಗೆ ಅವಳಿಗೆ ಶಿಕ್ಷಣದಿಂದ ವಂಚಿತಳನ್ನಾಗಿ ಮಾಡದೇ ಇರುವುದಕ್ಕೆ ಮಹಿಳಾ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಆ ಕಾರ್ಯಕರ್ತರು ನನ್ನೊಡನೆ ಇಂಥಾ ವಿಷಯಗಳ ಹಲವು ಆಯಾಮಗಳನ್ನು ಹಂಚಿಕೊಂಡರೂ ನನಗೆ ನೈತಿಕವಾಗಿ ಅವನ್ನು ಬಹಿರಂಗ ಪಡಿಸುವ ಹಕ್ಕಿಲ್ಲ. ಹಾಗಾಗಿ ಇಲ್ಲಿ ಬರೆದಿಲ್ಲ.

ಇದು ಬೀದರ್ ಜಿಲ್ಲೆಯ ಒಂದು ಮಗುವಿನ ಕಥೆಯಲ್ಲ.ಶಾಲೆಗೆ ಹೋಗುತ್ತಿರುವ ಅನೇಕ ಹೆಣ್ಣುಮಕ್ಕಳಿಗೆ ಈ ಬಗೆಯ ಎಡವಟ್ಟುಗಳಾಗಿರುವ ವರದಿಗಳು ಬೀದರ್ ಮತ್ತು ಇತರ ಜಿಲ್ಲೆಗಳಿಂದಲೂ ಬಂದಿವೆ. ಸಣ್ಣ ಮಕ್ಕಳಿಗೆ ಅಥವಾ ಶಾಲೆಗೆ ಹೋಗುವಂತಹ ಗಂಡುಮಕ್ಕಳಿಗೂ ಇಂತಹ ಲೈಂಗಿಕ ಶೋಷಣೆ ಆಗಿದ್ದರೂ ಹೆಣ್ಣು ಮಕ್ಕಳ ಮೇಲೆ ಅಂತಿಮ ಪರಿಣಾಮ ಪ್ರದರ್ಶಿತವಾಗುತ್ತದೆ. ಇದು ನೈಸರ್ಗಿಕ.

ಲೈಂಗಿಕ ಸೆಳೆತಗಳು

ಪ್ರೌಢಶಾಲೆಯಲ್ಲಿ ಲೈಂಗಿಕಾಂಗಗಳ ಮತ್ತು ಸಂತಾನೋತ್ಪತ್ತಿಯ ವಿಷಯಗಳು ಇದ್ದರೂ, ಈಗಲೂ ವರದಿಗಳಾಗುತ್ತಿರುವಂತೆ, ಉಪಾಧ್ಯಾಯರು ಆ ವಿಷಯಗಳ ಕುರಿತಾಗಿ ಸ್ಪಷ್ಟವಾಗಿ ಹೇಳುವುದೂ ಇಲ್ಲ ಮತ್ತು ತೇಲಿಸಿಕೊಂಡು ಹೋಗಿಬಿಡುತ್ತಾರೆ. ಇನ್ನೂ ಕೆಲವರು ಆ ಪಾಠಗಳನ್ನೇ ಎಗರಿಸಿಬಿಡುತ್ತಾರೆ. ಇನ್ನು ಮನೆಯಲ್ಲಿಯೂ ಇವುಗಳ ಕುರಿತಾಗಿ ಯಾವ ಅನೌಪಚಾರಿಕ ರೀತಿಯಲ್ಲಿ ಶಿಕ್ಷಣವನ್ನು ಕೊಡದೇ ಇರುವ ಕಾರಣದಿಂದ ಲೈಂಗಿಕತೆಯ ಶಿಕ್ಷಣದ ಬದಲಾಗಿ ಕಾಮುಕತೆಯ ಮಗ್ಗುಲಿಗೆ ಪುಷ್ಟಿ ಸಿಗುತ್ತಾ ಹೋಗುತ್ತದೆ.ಅದರ ಪರಿಣಾಮ ತಿಳಿಯುವುದೇ ಎಡವಟ್ಟಾದ ಮೇಲೆ.

ನಾನು ನನ್ನ ಕ್ಷೇತ್ರದ ಸುತ್ತಮುತ್ತ ಗಮನಿಸುವಂತೆ ಶಾಲೆಗೆ ಹೋಗುವ ಬಾಲಕಿಯರು ಕಾಲೇಜು ಹುಡುಗರೊಂದಿಗೆ ಅಥವಾ ಆ ವಯಸ್ಸಿನ ಹುಡುಗರೊಂದಿಗೆ ಚೆಲ್ಲುಚೆಲ್ಲಾಗಿ ವರ್ತಿಸಿಕೊಂಡು ನಿರ್ಜನ ಪ್ರದೇಶಗಳಿಗೆ ಹೋಗುತ್ತಿರುತ್ತಾರೆ. ನಾನು ಕಂಡಾಗ ಯಾರದು ಎಂದು ಜೋರಾಗಿ ಕೂಗಿ ನಮ್ಮ ಇರುವನ್ನು ಪ್ರದರ್ಶಿಸಿದರೆ ಅವರು ದಿಕ್ಕು ಬದಲಿಸುತ್ತಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೂ ಯಾವಾಗಲೆಂದರಾವಾಗ ಬರುವ ಇವರನ್ನು ಕಾಯುತ್ತಾ ಕೂರುವವರು ಯಾರು?ಆ ಹೆಣ್ಣುಮಕ್ಕಳೆಲ್ಲಾ ಏಳನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಯೋಮಾನದವರು.

ನಮ್ಮ ಸಮಾಜದ ಅತಿದೊಡ್ಡ ಸಮಸ್ಯೆಯೆಂದರೆ ಲೈಂಗಿಕತೆಯನ್ನು ಕಾಮುಕತೆಯೆಂಬಂತೆ ಭಾವಿಸುವುದು. ಹಾಗಾಗಿಯೇ ಪೋಷಕರು ಮತ್ತು ಶಿಕ್ಷಕರು ಲೈಂಗಿಕತೆಯ ಬಗ್ಗೆ ಅಥವಾ ಲೈಂಗಿಕ ಶಿಕ್ಷಣದ ಬಗ್ಗೆ ಮುಕ್ತವಾಗಿರದೇ ಒಮ್ಮೆಯೂ ಅದರ ಬಗ್ಗೆ ಉಲ್ಲೇಖಿಸದಂತೆ ಬಹಳ ಎಚ್ಚರಿಕೆಯಿಂದ ತಮ್ಮನ್ನು ತಾವು ಕಾಯ್ದುಕೊಳ್ಳುವುದು. ವಿಚಿತ್ರ ಧೋರಣೆ ಮತ್ತು ಅತ್ಯಂತ ಕುಚೋದ್ಯದ ಮನಸ್ಥಿತಿಯೆಂದರೆ, ಗಂಡು ಹೆಣ್ಣು ಸರಸವಾಗಿ, ಪ್ರಣಯಭರಿತವಾಗಿ ವರ್ತಿಸುತ್ತಾ, ನರ್ತಿಸುತ್ತಾ ಚಲನಚಿತ್ರ ಗೀತೆಗಳನ್ನು ಅತಿಹೆಚ್ಚು ಸಾರ್ವಜನಿಕವಾಗಿ, ಸಾರ್ವತ್ರಿಕವಾಗಿ ಪ್ರದರ್ಶಿಸುತ್ತಿರುತ್ತಾರೆ. ಇನ್ನೂ ಹೇಳಬೇಕೆಂದರೆ, ಅಸಭ್ಯವಾಗಿ ಮತ್ತು ಅಶ್ಲೀಲವಾಗಿ ಆಡುವಂತಹ ಗೀತೆಗಳನ್ನೆಲ್ಲಾ ಮಕ್ಕಳು ಸಿನೆಮಾಗಳಲ್ಲಿ ನೋಡುತ್ತಾರೆ. ಅಲ್ಲದೇ ಮದುವೆ ಆಗುವ, ಮಗು ಹುಟ್ಟುವ ಎಲ್ಲಾ ಕಾರ್ಯಕ್ರಮಗಳಿಗೆ ಮಕ್ಕಳನ್ನು ಹಿರಿಯರೇ ಒಯ್ಯುತ್ತಿರುತ್ತಾರೆ. ಅವರು ಆ ಸಂಭ್ರಮದ ಭಾಗವಾಗಿರುತ್ತಾರೆ.ಆದರೆ ಇವನ್ನೆಲ್ಲಾ ಸಾಕ್ಷೀಕರಿಸುವ ಮಕ್ಕಳಿಗೆ ತಾವು ನೋಡುತ್ತಿರುವ ಚಿತ್ರಗೀತೆಗಳ ಬಗ್ಗೆ, ಭಾಗವಹಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಪ್ರಶ್ನೆಗಳು ಮೂಡದಿರುವವೇ? ಅಥವಾ ಗೊತ್ತಿಲ್ಲದೇ ಇರುವುದೇ? ಗೊತ್ತಾದರೂ ಏನೂ ಮಾತಾಡುವಂತಿಲ್ಲ ಅಥವಾ ಹಾಗೆ ಗೊತ್ತಿದೆ ಎಂದು ತೋರಿಸಿಕೊಳ್ಳುವಂತಿಲ್ಲ. ಇಂತಹ ವಿಚಿತ್ರವಾದ ಬಾಯ್ಮುಚ್ಚಿಕೊಂಡಿರುವಿಕೆಯ ಪ್ರತಿಫಲವೇ ಲೈಂಗಿಕ ದೌರ್ಜನ್ಯಗಳ ಎಡವಟ್ಟುಗಳು.

ದೇಶದ ಮತ್ತು ಸಮಾಜದ ಭವಿಷ್ಯ

ನಮ್ಮ ಭಾರತ ದೇಶದಲ್ಲಿ (2011 ಜನಗಣತಿಯ ಪ್ರಕಾರವೇ) 253 ಮಿಲಿಯನ್ ಹದಿಹರೆಯದ ಮಕ್ಕಳಿದ್ದರು. ಅದರಲ್ಲಿ 10ರಿಂದ 19 ವಯಸ್ಸಿನ ಮಕ್ಕಳು ದೇಶದ ಶೇ.21 ಇದ್ದರು.ಈಗ ಇನ್ನೂ ಹೆಚ್ಚಾಗಿರುತ್ತದೆ. ಆದರೆ ಈ ಹದಿಹರೆಯದವರೇ ಭಾರತದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಗಳು ಎಂಬುದನ್ನು ನಾವು ಮರೆಯಬಾರದು. ಸಮಾಜದ ಮತ್ತು ದೇಶದ ಪ್ರಬಲ ಶಕ್ತಿಗಳಾಗಿ ಹೊಮ್ಮುವ ಈ ಮಕ್ಕಳು, ತಾವು ಮಕ್ಕಳಾಗಿರುವಾಗ ಯಾವ ಬಗೆಯ ಅನುಭವ, ಧೋರಣೆ, ವರ್ತನೆಗಳನ್ನು ವ್ಯಾಪಕವಾಗಿ ಹೊಂದುತ್ತಾರೆ ಮತ್ತು ಅವುಗಳು ಯಾವ ರೀತಿಯಲ್ಲಿ ಅವರ ವ್ಯಕ್ತಿಗತ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತುರ್ತಾಗಿ ಮತ್ತು ಈ ಕ್ಷಣದ ಅಗತ್ಯವಾಗಿ ನೋಡಲೇ ಬೇಕು. ದೇಶದ ಮತ್ತು ಸಮಾಜದ ಸುಭದ್ರ ವಾತಾವರಣವನ್ನು ನಿರ್ಮಿಸುವುದರಲ್ಲಿ ಇವು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂಬ ಪ್ರಾಥಮಿಕ ವಿಷಯ ನಮಗೆ ಅರಿವಿರಬೇಕು.

ವಾಸ್ತವದ ಅರಿವಿಲ್ಲದೇ ಕೀಳು ಅಭಿರುಚಿಯ ಸಿನೆಮಾ ಮತ್ತು ಸಾಮಾಜಿಕ ತಾಣಗಳ ಉನ್ಮತ್ತತೆಯ ಪ್ರಭಾವಕ್ಕೆ ಸಿಕ್ಕುವ ಹದಿಹರೆಯದವರು ಮತ್ತು ಮಕ್ಕಳು ಆಕರ್ಷಕವಾಗಿ ತೋರುವ ಸುಳ್ಳಿನ ಮೋಹದ ಸೆಳೆತಕ್ಕೇ ಮನಸೋತರೆ ಆಗುವ ಅನಾಹುತಗಳು ಬಹಳಷ್ಟು. ವಿವೇಚನೆಯಿಂದ ಮುಂದೆ ಸಂಭವಿಸುವ ವಾಸ್ತವದ ಪರಿಣಾಮಕ್ಕಿಂತ ತಕ್ಷಣದ ಮೈ ಮರೆಸುವ ಮೋಹದ ಉನ್ಮಾದ ಹದಿಹರೆಯದವರನ್ನು ಬಹಳಷ್ಟು ಮರುಳು ಮಾಡುತ್ತದೆ.ಹಾಗಾಗಿಯೇ ಎಷ್ಟೆಷ್ಟೋ ರಚನಾತ್ಮಕವಾಗಿರ ಬೇಕಾಗಿರುವಂತಹ ಕೆಲಸ ಕಾರ್ಯಗಳು ಲೈಂಗಿಕ ಶೋಷಣೆಗೆ ಸಿಕ್ಕು ವ್ಯರ್ಥವಾಗಿ ಆ ಮಕ್ಕಳ ಚೈತನ್ಯ ಮತ್ತು ಸಮಯವು ಕಳೆದುಹೋಗುತ್ತದೆ. ಈ ಬಗೆಯ ಹಗರಣ ಅಥವಾ ಅವಘಡಗಳಲ್ಲಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗುವುದರಿಂದ ಅವರದ್ದೇ ಸಾಮರ್ಥ್ಯ, ಕೌಶಲ್ಯ ಮತ್ತು ಸಂಪನ್ಮೂಲಗಳು ಸಾರ್ಥಕವಾಗಿ ಬಳಕೆಯಾಗುವುದಿಲ್ಲ.

ದುರದೃಷ್ಟದ ಸಂಗತಿಯೆಂದರೆ, ಗಂಡು ಹುಡುಗ ಅಥವಾ ಹೆಣ್ಣು ಹುಡುಗಿಯರೇ ಲೈಂಗಿಕ ಹಗರಣಕ್ಕೆ ಕಾರಣವಾದರೂ ಪರಿಣಾಮ ಬೀರುವುದು ಹೆಣ್ಣು ಮಗುವಿನ ಮೇಲೆ. ಕಾನೂನು ಮತ್ತು ವ್ಯವಸ್ಥೆಯು ಮುಂದೆಯಾರನ್ನೇ ಅಪರಾಧಿ ಎಂದು ಗುರುತಿಸಿ ನಂತರ ಶಿಕ್ಷೆ ವಿಧಿಸುವುದು, ದಂಡ ವಿಧಿಸುವುದೇನೇ ಮಾಡಿದರೂ, ಮುಂದೆ ತನ್ನ ಕೌಶಲ್ಯ, ಸಾಮರ್ಥ್ಯ, ಬೌದ್ಧಿಕ ಮತ್ತು ಶೈಕ್ಷಣಿಕ ಸಂಪನ್ಮೂಲಗಳನ್ನು ತನ್ನ ಕುಟುಂಬಕ್ಕೆ, ಸಮಾಜಕ್ಕೆ ಮತ್ತು ದೇಶಕ್ಕೆ ಪ್ರಯೋಜನವಾಗಬಹುದಾಗಿರುವಂಥದ್ದು ನಿಷ್ಪ್ರಯೋಜನವಾಗಿ ಬಿಡುವುದಂತೂ ನಿಜ.

ಈ ಎಲ್ಲಾ ಕಾರಣಗಳಿಂದ ಕಾನೂನು ಮತ್ತು ವ್ಯವಸ್ಥೆಗಳಿಗಿಂತ ಮಿಗಿಲಾಗಿ ವ್ಯಕ್ತಿಗತವಾದಂತಹ ಅರಿವು ದೊರಕಿದರೆ, ಆ ತಿಳುವಳಿಕೆಯ ಪ್ರಕಾರ ಅವರು ತಮ್ಮ ಎಚ್ಚರಿಕೆಯಲ್ಲಿ ತಾವು ಇರಬಹುದು. ಹಾಗೂ ತಮ್ಮ ನಿಜವಾದ ದಾರಿ ಮತ್ತು ಗುರಿ ಏನೆಂಬುದನ್ನು ಸ್ಪಷ್ಟಗೊಳಿಸಿಕೊಳ್ಳಬಹುದು.

ಆದರೆ ಲೈಂಗಿಕ ಶಿಕ್ಷಣವೆಂದರೆ ಸಂತಾನೋತ್ಪತ್ತಿಯ ಕ್ರಿಯೆಯ ವಿವರಣೆ ಅಲ್ಲ. ಮಗು ಹುಟ್ಟುವ ಕಥೆಯಲ್ಲ. ವೀರ್ಯಾಣು ಮತ್ತು ಅಂಡಾಣುಗಳ ವೈಜ್ಞಾನಿಕ ವಿವರ ಮಾತ್ರವಲ್ಲ. ಇನ್ನೂ ಪ್ರಾರಂಭಿಕ ಹಂತದಲ್ಲಿಯೇ ಲೈಂಗಿಕ ಶಿಕ್ಷಣ ಮಕ್ಕಳಿಗೆ ದೊರಕಬೇಕಾಗಿರುವುದುಅವರ ವಿಸರ್ಜನಾಂಗಗಳು ದೇಹದಲ್ಲಿ ಇತರ ಅಂಗಗಳಂತೆಯೇ ಅವೂ ಸಾಮಾನ್ಯ ಎಂಬ ತಿಳುವಳಿಕೆಯನ್ನು ಹೊಂದುವುದೇ ಆರಂಭಿಕ ಪಾಠವಾಗಿರುತ್ತದೆ. ಅದರ ಹೊರತಾಗಿ ಇನ್ನೇನೇ ದೊಡ್ಡದೊಡ್ಡ ಲೈಂಗಿಕ ಶಿಕ್ಷಣ ಎಂದು ಪಠ್ಯದಲ್ಲಿ ಅಳವಡಿಸಿದರೂ ಅದನ್ನು ಕೊಂಚವೂ ಪ್ರಸ್ತಾಪಿಸದೆ, ಶಿಕ್ಷಣದ ಭಾಗವಾಗಿ ತೆಗೆದುಕೊಳ್ಳದೆ ಶಿಕ್ಷಕರೇ ಅದನ್ನು ಮರೆ ಮಾಚಿಬಿಡುತ್ತಾರೆ.

ಹಾಗಾದರೆ ಅನೌಪಚಾರಿಕ, ಔಪಚಾರಿಕ ಲೈಂಗಿಕ ಶಿಕ್ಷಣದ ಬಗೆಗಳ ಬಗ್ಗೆ, ವಿಶ್ವಸಂಸ್ಥೆ, ನಮ್ಮ ಶಿಕ್ಷಣ ಇಲಾಖೆ ಮತ್ತು ಇತರ ಶೈಕ್ಷಣಿಕ ಅಂಗಸಂಸ್ಥೆಗಳು ಅವುಗಳ ಬಗ್ಗೆ ಹೇಳುವುದರ ಬಗ್ಗೆ, ಯಾವ ಯಾವ ಹಂತದಲ್ಲಿ ಎಷ್ಟೆಷ್ಟರ ಮಟ್ಟಿಗೆ ಮಕ್ಕಳಿಗೆ ತಮ್ಮದೇ ಆದ ಲೈಂಗಿಕಾಂಗಗಳ ಬಗ್ಗೆ ಅರಿವು ಮೂಡಿಸಬೇಕು, ಯಾರು ಮೂಡಿಸಬೇಕು, ಇದರಿಂದ ಉಂಟಾಗುವ ಉಪಯೋಗವೇನು, ಸಮಸ್ಯೆಗಳೇನು, ಎಲ್ಲವನ್ನೂ ಮುಂದೆ ತಿಳಿದುಕೊಳ್ಳೋಣ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News