‘‘ಎಲ್ಲ ಕಾಲಗಳಲ್ಲಿಯೂ ಒಳ್ಳೆಯ ಸಿನೆಮಾಗಳ ಹಾಗೆ ಕೆಟ್ಟ ಸಿನೆಮಾಗಳೂ ಇರುತ್ತವೆ’’: ಜಾವೇದ್ ಅಖ್ತರ್

Update: 2017-11-19 05:33 GMT

ಹಿಂದಿ ಸಿನೆಮಾಗಳಿಗೆ ಸಂಭಾಷಣೆ ಹಾಗೂ ಹಾಡುಗಳನ್ನು ದಶಕಗಳ ಕಾಲ ಬರೆದ ಬಳಿಕ, ಜಾವೇದ್ ಅಖ್ತರ್, ನಂದಿತಾ ದಾಸ್‌ರವರ ಮುಂದಿನ ಸಿನೆಮಾ ‘ಮ್ಯಾಂಟೊ’ದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಚಲನಚಿತ್ರಕಥಾ ಲೇಖಕ, ಭಾವಗೀತೆ ರಚನೆಕಾರ ಹಾಗೂ ಕವಿಯಾಗಿರುವ ಅಖ್ತರ್ ಟ್ವ್ಟಿಟರ್‌ನಲ್ಲಿ ಒಂದು ಸಕ್ರಿಯ ಧ್ವನಿಯಾಗಿ ಉಳಿದಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಹೆಚ್ಚಾಗಿ ಅಪ್ರಿಯವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ, ಮೂಲಭೂತವಾದಿಗಳ ಹಾಗೂ ಟ್ರಾಲ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ. 1970ರ ದಶಕದಲ್ಲಿ ಅವರು ಸೃಷ್ಟಿಸಿದ ಅತ್ಯಂತ ಜನಪ್ರಿಯ ಪಾತ್ರವಾದ ಅಮಿತಾಭ್ ಬಚ್ಚನ್‌ರ ವಿಜಯ್ ಪಾತ್ರದ ಬಗ್ಗೆ ಈಗಲೂ ಅವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇಲ್ಲಿ ಬಾಲಿವುಡ್‌ನ ಸ್ಟಾರ್ ವ್ಯವಸ್ಥೆ ಎಂದಾದರೂ ಬದಲಾಗುತ್ತದೆಯೇ? ಮತ್ತು ಸಿನೆಮಾ ಉದ್ಯಮದಲ್ಲಿರುವ ಲೈಂಗಿಕ ಕಿರುಕುಳವೂ ಸೇರಿದಂತೆ ಇನ್ನೂ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

►ನೀವ್ಯಾಕೆ ಎಂದೂ ಸಿನೆಮಾ ನಿರ್ಮಾಣ ಅಥವಾ ನಿರ್ದೇಶನಕ್ಕೆ ಪ್ರಯತ್ನಿಸುತ್ತಿಲ್ಲ?

ಉ: ಒಂದು ಕಾರಣ ಎಂದರೆ ನಾನು ತುಂಬ ಸೋಮಾರಿ ಯಾಗಿದ್ದೆ, ಅಲ್ಲದೆ ನಾನು ಚಿತ್ರಕಥೆ ಮತ್ತು ಹಾಡುಗಳನ್ನು ಬರೆಯುವುದರಲ್ಲಿ ತುಂಬಾ ಬಿಜಿಯಾಗಿದ್ದೆ. ಹಾಗಾಗಿ ನಾನು ಬೇರೆ ಏನೂ ಮಾಡುವ ಬಗ್ಗೆ ಯೋಚಿಸಲೇ ಇಲ್ಲ.

► ಈಗ ನೀವು ಒಂದು ಚಿತ್ರಕಥೆ ಬರೆಯುತ್ತಿದ್ದೀರಾ?

ಉ: ಹೌದು ಬರೆಯುತ್ತಿದ್ದೇನೆ. ಆದರೆ ನಟರು ಹಾಗೂ ನಿರ್ದೇಶಕರು ಯಾರೆಂದು ಇನ್ನೂ ನಿರ್ಧಾರವಾಗಿಲ್ಲ.

► ಎ-ಲಿಸ್ಟ್ ಸಿನೆಮಾಗಳು ನಡೆಯುವ ರೀತಿಯನ್ನು ಗಮನಿಸಿದರೆ, ಸೂಪರ್ ಸ್ಟಾರ್‌ಗಳ ಯುಗ ಅಂತ್ಯಗೊಳ್ಳುತ್ತಿದೆ ಎನ್ನಬಹುದೇ?

ಉ: ನಾವು ಬಹಳ ಬೇಗನೆ ನಿರ್ಧಾರಗಳನ್ನು, ತೀರ್ಮಾನಗಳನ್ನು ತೆಗೆದುಕೊಂಡು ಅಷ್ಟೇ ಬೇಗ ಅವುಗಳನ್ನು ಬದಲಿಸುತ್ತೇವೆ ಅನಿಸುತ್ತದೆ ನನಗೆ. ಎರಡು ಸಿನೆಮಾಗಳು ಚೆನ್ನಾಗಿ ನಡೆದರೆ, ಬಾಕ್ಸ್ ಆಫೀಸ್ ಹಿಟ್ ಆದರೆ ಒಂದು ಹೊಸ ಪ್ರವೃತ್ತಿ ಆರಂಭವಾಗಿದೆ ಎಂದು ಅರ್ಥವಲ್ಲ ಅಥವಾ ಎರಡು ಸಿನೆಮಾಗಳು ಹಿಟ್ ಆಗದಿದ್ದರೆ ನಾವು ಒಂದು ಯುಗ ಅಂತ್ಯಗೊಂಡಿತೆಂದು ಘೋಷಿಸುವಂತಿಲ್ಲ.

ಅಭಿವೃದ್ಧಿ ಒಂದೇ ಗೆರೆಯಲ್ಲಿ ಸಾಗುವಂಥದಲ್ಲ, ಪ್ರತಿಯೊಂದು ಕಾಲಘಟ್ಟದಲ್ಲೂ, ವಿಭಿನ್ನ ರೀತಿಯ ಸಿನೆಮಾಗಳು ತಯಾರಾಗುತ್ತವೆ. ವಿಭಿನ್ನ ಸಿನೆಮಾಗಳು ಯಶಸ್ವಿಯಾಗುತ್ತವೆ. ಯಾವುದೇ ಒಂದು ರೀತಿಯ ಸಿನೆಮಾಗಳು ಎಲ್ಲ ಕಾಲದಲ್ಲೂ ಇರುತ್ತವೆ ಮತ್ತು ಪ್ರತೀ ವರ್ಗದ ಸಿನೆಮಾದಲ್ಲೂ ಒಳ್ಳೆಯ ಸಿನೆಮಾಗಳೂ ಇರುತ್ತವೆ, ಕೆಟ್ಟ ಸಿನೆಮಾಗಳೂ ಇರುತ್ತವೆ...

►ಸಿನೆಮಾ ಮಾಡುವವನೊಬ್ಬ ಒಂದು ಸಿನೆಮಾ ಯಶಸ್ವಿಯಾಗುತ್ತದೆಂದು ಹೇಗೆ ಖಚಿತಪಡಿಸಿಕೊಳ್ಳಬಹುದು?

ಉ: ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಂತಹ ಯಾವ ವಿಧಾನವೂ ಇಲ್ಲ. ಸಿನೆಮಾಗಳು ಮನುಷ್ಯರ ಹಾಗೆ. ಕೆಲವು ಮನುಷ್ಯರು ಯಶಸ್ವಿಯಾಗುತ್ತಾರೆ, ಕೆಲವರು ಆಗುವುದಿಲ್ಲ. ಸಿನೆಮಾಗಳೂ ಹಾಗೆಯೇ, ಒಂದು ಸಿನೆಮಾ ಮಾಡಲು ಇರುವ ಒಂದೇ ಒಂದು ರೀತಿ ಎಂದರೆ, ನೀವು ಕನಿಷ್ಠ ಪಕ್ಷ ಇಷ್ಟಪಡುವಂತಹ ಒಂದು ಸಿನೆಮಾ ಮಾಡುವುದು.

►ನೀವು ಮತ್ತು ಸಲೀಂ ಖಾನ್ ಬರೆದ ಚಿತ್ರಕಥೆಯಿಂದ ಮಾಡಿದ, ಅಮಿತಾಭ್ ಬಚ್ಚನ್ ಪಾತ್ರ ವಹಿಸಿದ, ವಿಜಯ್ ಪಾತ್ರ ಈಗಲೂ ಪ್ರಸ್ತುತವೇ?

ಉ: ಹಲವು ನಗರಗಳಲ್ಲಿ ಹಲವು ಜನ ನನಗೆ ಪುನಃ ಅಂತಹದೇ ರೀತಿಯ ಚಿತ್ರಕಥೆ ಬರೆಯಲು ಹೇಳಿದ್ದಾರೆ. ಯಾಕೆಂದರೆ ಆ ಆ್ಯಂಗ್ರಿಯಂಗ್ ಮ್ಯಾನ್ ಪುನಃ ಪ್ರಸ್ತುತ ಎಂದು ಆವರಿಗನ್ನಿಸುತ್ತಿದೆ.

ಆದರೆ ಯಾವುದೇ ಒಂದು (ಕಥೆ) ಅದು ಇದ್ದ ರೂಪದಲ್ಲೇ ಯಥಾವತ್ತಾಗಿ ಪುನಃ ಮರಳಿ ಬರುತ್ತದೆಂದು ನನಗನ್ನಿಸುವುದಿಲ್ಲ. ಸಮಾಜ, ರೀತಿ ನೀತಿಗಳು, ಆಕಾಂಕ್ಷೆಗಳು ನೈತಿಕತೆ ಎಲ್ಲ ಬದಲಾಗಿದೆ. ಆದ್ದರಿಂದ ಅವನು (ವಿಜಯ್) ಇನ್ನೂ ಆ್ಯಂಗ್ರಿ ಆಗಿಯೇ ಇರಬಹುದು. ಆದರೆ ಈಗ ಅವನು ಒಂದು ಭಿನ್ನವಾದ ರೀತಿಯಲ್ಲಿ ಆ್ಯಂಗ್ರಿಯಾಗಿರುತ್ತಾನೆ.

►ಇಂದಿನ ನಟರಲ್ಲಿ ಯಾರು ಅವನ ಪಾತ್ರ ವಹಿಸಬಹುದು?

ಉ: ಹಲವಾರು ಮಂದಿ. ನಮಗೆ ನಟರ ಕೊರತೆ ಇಲ್ಲ. ರಣಬೀರ್ ಕಪೂರ್, ರಣಬೀರ್ ಸಿಂಗ್, ಫರ್ಹಾನ(ಅಖ್ತರ್), ವರುಣ್ ಧವನ್ ಇವರೆಲ್ಲ ತುಂಬ ಉತ್ತಮ ನಟರು.

►ನಿಮ್ಮ ಮೊಮ್ಮಕ್ಕಳು ನಿಮ್ಮ ಸಿನೆಮಾಗಳನ್ನು ನೋಡಿದರೆ, ಅವುಗಳಲ್ಲಿ ಯಾವ ಸಿನೆಮಾ ನಿಮಗೆ ಹೆಮ್ಮೆ ಉಂಟು ಮಾಡೀತು?

ಉ: ನನಗೆ ಹೆಮ್ಮೆ ಅನ್ನಿಸುತ್ತದೆಯೋ ಇಲ್ಲವೋ, ನನ್ನ ಮೊಮ್ಮಕ್ಕಳು ‘ಶೋಲೆ’ಯನ್ನಂತೂ ನೋಡುತ್ತಾರೆ. ಆದರೆ ಅವರು ‘ದೀವಾರ್’, ‘ತ್ರಿಶೂಲ್’, ‘ಡಾನ್’, ‘ಶಕ್ತಿ’, ‘ಮಿಸ್ಟರ್ ಇಂಡಿಯಾ’ ಗಳನ್ನು ನೋಡಬೇಕೆಂದು ನನಗನ್ನಿಸುತ್ತದೆ.

►ಸಮಯ ಕಳೆದಂತೆ ನಿಮ್ಮ ಕಾವ್ಯ ಹೆಚ್ಚುಹೆಚ್ಚು ತಾತ್ವಿಕವಾಗಿದೆಯೇ? ಫಿಲಾಸಫಿಕಲ್ ಆಗಿದೆಯೇ?

ಉ: ನನ್ನ ಕಾವ್ಯದ ಮೊದಲ ಪದರ ನೆನಪುಗಳು ಕಳೆದು ಹೋದ ಕಾಲ, ನನ್ನ ಬಾಲ್ಯ ನನ್ನ ಹದಿಹರೆಯ, ನನ್ನ ತಾಯಿ, ನಾನು ವಾಸವಾಗಿದ್ದ ಕೋಣೆ, ಮನೆ ಇತ್ಯಾದಿ ಇತ್ಯಾದಿ. ಕ್ರಮೇಣ ನಾನು ಗತಕಾಲಕ್ಕಿಂತ ಹೆಚ್ಚಾಗಿ ವರ್ತಮಾನ ಮತ್ತು ಭವಿಷ್ಯದಲ್ಲಿ ಆಸಕ್ತನಾದೆ. ಈಗ ಅಂತಹ ಗತಕಾಲದ ನೆನಪು ಹಳಹಳಿಕೆ, ಕೇವಲ ಭಾವನೆಗಳು ಇಲ್ಲ. ಈಗ ನನಗನ್ನಿಸುವ ವಿಚಾರಗಳ ಬಗ್ಗೆಯೇ ಹೆಚ್ಚು ಬರೆಯುತ್ತೇನೆ.

►ನೀವು ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದೀರಿ, ವೋಕಲ್ ಆಗಿದ್ದೀರಿ. ಯಾಕೆ?

 ಉ: ಅಲ್ಲಿ ಇರುವ ತಪ್ಪು ಮಾಹಿತಿ ಅಥವಾ ಮಾಹಿತಿಯ ಕೊರತೆ ಆಘಾತಕಾರಿ. ಪರಿಣಾಮವಾಗಿ, ಜನರು ಸಮಾಜದ ಮೇಲೆ ಪರಿಣಾಮ ಬೀರುವ ಪೂರ್ವಾಗ್ರಹಗಳಿಂದ ಪೀಡಿತರಾಗಿದ್ದಾರೆ. ಅವರ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸುವುದು ಮತ್ತು ಇದು ಅಪಾಯಕಾರಿ ಎಂದು ಅವರಿಗೆ ಹೇಳುವುದು ಅನಿವಾರ್ಯವಾಗುತ್ತದೆ.

ವಿಚಿತ್ರವೆಂದರೆ, ಒಮ್ಮಮ್ಮೆ ಮುಸ್ಲಿಂ ಮೂಲಭೂತವಾದಿ ಗಳು ನನ್ನನ್ನು ದೂಷಿಸಿ ನನ್ನ ಹೆಸರನ್ನು ಬದಲಿಸಬೇಕೆಂದು ನನಗೆ ಸಲಹೆ ನೀಡುತ್ತಾರೆ. ಹಿಂದೂ ಮೂಲಭೂತವಾದಿಗಳು ಮತ್ತು ತೀವ್ರಗಾಮಿಗಳು ನಾನು ನನ್ನ ಪೌರತ್ವವನ್ನೇ ಬದಲಿಸಬೇಕೆಂದು ಸೂಚಿಸುತ್ತಾರೆ. ನಾನು ಈ ಎರಡನ್ನೂ ಮಾಡುವುದಿಲ್ಲ. ಎರಡೂ ಕಡೆಯ ಮೂಲಭೂತವಾದಿಗಳು ನಿಮ್ಮನ್ನು ಬೈಯುತ್ತಾರೆಂದರೆ, ನೀವೇನೋ ಒಳ್ಳೆಯದನ್ನೇ ಮಾಡುತ್ತಿದ್ದೀರಿ ಎಂದೇ ಅರ್ಥವೆಂದು ನಾನು ತಿಳಿದಿದ್ದೇನೆ.

►ನೀವು ಓರ್ವ ಘೋಷಿತ ನಾಸ್ತಿಕ. ಈ ವಿಭಜಕ ಕಾಲದಲ್ಲಿ ಓರ್ವ ಮುಸ್ಲಿಮನಾಗಿ ಇರುವುದು ಕಷ್ಟ ಅನ್ನಿಸುತ್ತದೆಯೇ?

ಉ: ಮುಸ್ಲಿಂ ತೀವ್ರಗಾಮಿಗಳು ನಾನೊಬ್ಬ ಜಿಹಾದಿ ಎಂದು ತಿಳಿಯುತ್ತಾರೆ.

►ಒಬ್ಬ ಒಳಗಿನವನಾಗಿ, ಬಾಲಿವುಡ್‌ನಲ್ಲಿ ಲೈಂಗಿಕ ಪೀಡನೆ ಮತ್ತು ಕಿರುಕುಳ ಎಷ್ಟರ ಮಟ್ಟಿಗೆ ಇದೆ ಎಂದು ನಿಮಗೆ ಅನಿಸುತ್ತದೆ?

 ಉ: ಅದು ಗುಟ್ಟಾಗಿ ನಡೆಯುತ್ತದೆ ಮತ್ತು ಕಿರುಕುಳಕ್ಕೊಳ ಗಾಗುವ ಪ್ರತಿಯೊಬ್ಬ ವ್ಯಕ್ತಿಯೂ ಯಾವಾಗಲೂ ಅದನ್ನು ವರದಿ ಮಾಡುವುದಿಲ್ಲ. ಅದು ಸಿನೆಮಾ ಉದ್ಯಮದಲ್ಲಿ ಸ್ವಲ್ಪ ಹೆಚ್ಚು ಇರುವಂತೆ ಕಾಣಿಸುತ್ತದೆ. ಯಾಕೆಂದರೆ ಈ ಉದ್ಯಮ ಯಾವಾ ಗಲೂ ಸೂಕ್ಷ್ಮ ದರ್ಶಕದ ಅಡಿಯಲ್ಲೇ ಇರುತ್ತದೆ. ಸಿನೆಮಾ ಮಂದಿಯ ಖಾಸಗಿ ಜೀವನ ತಿಳಿದುಕೊಳ್ಳುವುದರಿಂದ ಜನರಿಗೆ ಒಂದು ರೀತಿಯ ಥ್ರಿಲ್ ಸಿಗುತ್ತದೆ. ಆದ್ದರಿಂದ ಅದನ್ನು ತುಂಬಾ ದೊಡ್ಡ ಸುದ್ದಿ ಮಾಡುತ್ತಾರೆ.

►ನಾವು ಲಿಂಗ ಸಮಾನತೆಯ ಕಡೆಗೆ ಸಾಗುತ್ತಿದ್ದೇವೆಯೇ?

ಉ: ಇದು ಕೆಲವು ಗಂಡಸರಿಗೆ ಇಷ್ಟವಿಲ್ಲದಿದ್ದರೂ ಲಿಂಗ ಸಮಾನತೆ ಮುಂದುವರಿಯುತ್ತದೆ.

►ಈ ಬದಲಾವಣೆಯಲ್ಲಿ ಸಿನೆಮಾಗಳ ಪಾತ್ರವೇನು?

ಉ: ಸಿನೆಮಾಗಳಿಗೆ ನಾವು ಕೊಡಬೇಕಾದುದಕ್ಕಿಂತಲೂ ಹೆಚ್ಚು ಕ್ರೆಡಿಟ್, ಹೆಚ್ಚು ಹೊಗಳಿಕೆ ಕೊಟ್ಟಿದ್ದೇವೆ. ಅಂತಿಮವಾಗಿ ಸಿನೆಮಾ ಒಂದು ಗತಿಶೀಲವಲ್ಲದ ಮಾಧ್ಯಮ, ಅದು ವಸ್ತು ಸ್ಥಿತಿಗೆ ಪಂಥಾಹ್ವಾನ ಒಡ್ಡುವುದಿಲ್ಲ.

scroll.in(ಕೃಪೆ: )

Writer - ಇಂದು ಮಿರಾನಿ

contributor

Editor - ಇಂದು ಮಿರಾನಿ

contributor

Similar News