×
Ad

ಬುದ್ಧ, ಬಸವ, ಅಂಬೇಡ್ಕರ್ ಪ್ರತಿಪಾದಿಸಿದ ರಾಷ್ಟ್ರೀಯತೆ ಬೇಕು: ದ್ವಾರಕಾನಾಥ್

Update: 2017-11-19 22:32 IST

ಬೆಂಗಳೂರು, ನ.19: ಭಾರತೀಯರಿಗೆ ಗೋಳ್ವಾಲ್ಕರ್, ಹೆಗ್ಡೆ, ಸಾವರ್ಕರ್ ಪ್ರತಿಪಾದಿಸಿದ ರಾಷ್ಟ್ರೀಯತೆ ಅಗತ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಪ್ರತಿಪಾದಿಸಿದ ರಾಷ್ಟ್ರೀಯತೆ ಅಗತ್ಯವಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ತಿಳಿಸಿದ್ದಾರೆ.

 ರವಿವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಲಿಂಗಾಯತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯತೆ ಕುರಿತು ವಿಭಿನ್ನವಾದ ರೀತಿಯಲ್ಲಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ, ನಮಗೆ ಅಂಬೇಡ್ಕರ್ ಪ್ರತಿಪಾದಿಸಿದ ಬುದ್ಧ, ಬಸವರು ಬೋಧಿಸಿದ ರಾಷ್ಟ್ರೀಯತೆ ಬೇಕಿದೆ ಎಂದರು.

ಭಾರತದ ಸಂವಿಧಾನ ಬಸವಣ್ಣನ ಆಶಯಗಳನ್ನು ಒಳಗೊಂಡಿದ್ದು, ಪ್ರತಿ ಪುಟದಲ್ಲಿ ಬಸವಣ್ಣನ ವಚನಗಳನ್ನು ಅಡಿ ಟಿಪ್ಪಣಿಯಾಗಿ ಬಳಸಬಹುದಾಗಿದೆ ಎಂದರು. ಕೇರಳ ರಾಜ್ಯ ನಾರಾಯಣಗುರು, ತಮಿಳುನಾಡು ತಿರುವಳ್ಳುವರ್, ಪಶ್ಚಿಮ ಬಂಗಾಳ ರವೀಂದ್ರನಾಥ ಠಾಗೂರ್ ಹಾಗೂ ಮಹಾರಾಷ್ಟ್ರ ಶಿವಾಜಿಯನ್ನು ರಾಜ್ಯದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿದೆ. ಅದೇ ರೀತಿ ರಾಜ್ಯ ಸರಕಾರ ಬಸವಣ್ಣರನ್ನು ರಾಜ್ಯದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

 ಹಿರಿಯ ವಿಚಾರವಾದಿ ಕೆ.ಎಸ್.ಭಗವಾನ್ ಮಾತನಾಡಿ, ಬಸವಣ್ಣರನ್ನು ಪೂಜೆ ಮಾಡುವ ಎಲ್ಲರೂ ಲಿಂಗಾಯತರಾಗುವುದಿಲ್ಲ. ಬಸವಣ್ಣನ ತತ್ವಗಳನ್ನು ಅನುಸರಿಸುವವರು ನಿಜವಾದ ಲಿಂಗಾಯತರಾಗುತ್ತಾರೆ. ಬಸವಣ್ಣ ಸ್ಥಾಪಿಸಿದ ಧರ್ಮದಲ್ಲಿ ಹುಟ್ಟಿದ ಕೆಲವರು ಅಧಿಕಾರಕ್ಕಾಗಿ ಬೇರೆಯವರ ಹತ್ತಿರ ಗುಲಾಮರಾಗುತ್ತಿದ್ದಾರೆ ಎಂದು ಹೇಳಿದರು.

ಹಿಂದೂ ಧರ್ಮದಲ್ಲಿ ಜಾತೀಯತೆ, ಧರ್ಮಾಂದತೆ ತಾಂಡವವಾಡುತ್ತಿದೆ. ಆದರೆ, ಲಿಂಗಾಯತ ಧರ್ಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆ ಇದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಬರೆಯಲು ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ನ್ಯಾಯ ಹಾಗೂ ಒಂದು ಧರ್ಮ ಕುರಿತು ಪುಸ್ತಕ ಬರೆದರೆ ಅದನ್ನು ವಿರೋಧಿಸುವವರೇ ಹೆಚ್ಚಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News