ಇಂದಿನ ವಿವಾದಗಳ ಪರಿಹಾರಕ್ಕೆ ‘ಗೌತಮ ಬುದ್ಧ’ ಕಾದಂಬರಿ ಮಾರ್ಗ: ಪ್ರೊ.ಮಲ್ಲೇಪುರಂ
ಬೆಂಗಳೂರು, ನ.19: ಇಂದಿನ ನೀರು, ಭೂಮಿ ವಿವಾದಗಳನ್ನು ಪರಿಹರಿಸಿಕೊಳ್ಳಲು ರುದ್ರಮೂರ್ತಿ ಶಾಸ್ತ್ರಿ ರಚಿಸಿರುವ ಗೌತಮ ಬುದ್ಧ ಕಾದಂಬರಿ ಪರಿಹಾರ ಮಾರ್ಗಗಳನ್ನು ಮುಂದಿಡಲಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದ್ದಾರೆ.
ರವಿವಾರ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನದಿಂದ ಆಯೋಜಿಸಿದ್ದ ಸು.ರುದ್ರಮೂರ್ತಿ ಶಾಸಿಯ ಅವರ ಕಾದಂಬರಿ ‘ಗೌತಮ ಬುದ್ಧ’, ಕೆ.ಮುಕುಂದನ್ ಅವರ ಪ್ರವಾಸ ಕಥನ ‘ಯುರೋಪ್ ಪ್ರವಾಸ’ ಹಾಗೂ ಅನು ಬೆಳ್ಳೆ ಅವರ ಕಾದಂಬರಿ ‘ಕುಡ್ಪಲ್ ಭೂತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿ.ಪಿ.ರಾಜರತ್ನಂ ಹಾಗೂ ಇನ್ನಿತರರು ಬರೆದ ಬೆರಳೆಣಿಕೆಯ ಜೀವನ ಚರಿತ್ರೆಗಳಿವೆ. ರವೀಂದ್ರನಾಥ್ ಠಾಗೋರ್ ಅವರು ಬರೆದಿದ್ದ ನಾಟಕವನ್ನು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡಕ್ಕೆ ಅನುವಾದ ಮಾಡಿ ಯಶೋಧರ ಎಂಬ ನಾಟಕ ಮಾಡಿದ್ದರು. ಕನ್ನಡದಲ್ಲಿ ಬುದ್ಧನ ಕುರಿತು ಜೀವನ ಚರಿತ್ರೆಗಳಿವೆ. ಇವುಗಳನ್ನು ಹೊರತುಪಡಿಸಿ ಕಾದಂಬರಿ ರೂಪದಲ್ಲಿ ಯಾವುದೂ ಬಂದಿರಲಿಲ್ಲ ಎಂದರು.
ರುದ್ರಮೂರ್ತಿ ಶಾಸಿಗಳು ಮೊಟ್ಟ ಮೊದಲ ಬಾರಿಗೆ ಕಾದಂಬರಿ ರೂಪದಲ್ಲಿ ಬುದ್ಧನನ್ನು ನಮ್ಮ ಮುಂದಿಟ್ಟಿದ್ದಾರೆ. ಮಹಾಯಾನ, ವಜ್ರಯಾನ ಹಾಗೂ ಹೀನಯಾನ ಹೀಗೆ 3 ಪಂಥಗಳಲ್ಲಿ ಬಂದ ಬುದ್ಧನ ಬಗೆಗಿನ ವಿಚಾರ ಸಂಗ್ರಹಿಸಿ ಈ ಕಾಲಕ್ಕೆ ಪ್ರಸ್ತುತವಿರುವ ಹಾಗೆ ಬರೆದಿದ್ದಾರೆ ಎಂದು ಮಲ್ಲೇಪುರಂ ಜಿ.ವೆಂಕಟೇಶ್ ಶ್ಲಾಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ವೈಚಾರಿಕ ಆಕೃತಿಗಳನ್ನು ಸಾಹಿತ್ಯಕ ಆಕೃತಿಗಳಲ್ಲಿ ನಿಹಿತಗೊಳಿಸುವುದು ಸುಲಭವಲ್ಲ. ಆದರೆ ರುದ್ರಮೂರ್ತಿ ಶಾಸಿಗಳು ಈ ರೂಪಾಂತರ ಗೊಳಿಸಿರುವುದು ಬಹುಮುಖ್ಯ ಎಂದರು.
ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಇತ್ತೀಚೆಗೆ ಸೆಲ್ಫಿ ಹುಚ್ಚು ಪ್ರಾರಂಭವಾದ ನಂತರ ಯಾವುದೇ ಪ್ರವಾಸಿ ತಾಣಗಳಿಗೆ ಹೋದರೆ ಸೆಲ್ಫಿಯೊಳಗೆ ಜನ ಬಂಧಿತರಾಗಿರುತ್ತಾರೆ. ಆ ಪ್ರದೇಶದ ಪ್ರಾಮುಖ್ಯತೆಯ ಬಗ್ಗೆ ಆಲೋಚನೆ ಮಾಡುವುದಿಲ್ಲ. ಹೀಗಾಗಿ ಹೊಸ ಅನುಭವದಿಂದಲೇ ಅವರೆಲ್ಲರೂ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಮುಕುಂದನ್ ಅವರ ಯುರೋಪ್ ಪ್ರವಾಸ ಇತರೆ ಪ್ರವಾಸ ಕಥನಕ್ಕಿಂತ ಭಿನ್ನವಾಗಿದೆ ಎಂದು ಹೇಳಿದರು.
ಅನು ಬೆಳ್ಳೆಯವರು ತಮ್ಮ ಕುಡ್ಪಲ್ ಭೂತ ಕಾದಂಬರಿ ಮೂಲಕ ಸ್ವಾರಸ್ಯಕರ ಕಥೆ ಹೇಳುವುದರ ಜತೆಗೆ ಅದರೊಳಗೆ ಸಂಶೋಧನೆಯನ್ನೂ ಅಳವಡಿಸಿರುವುದು ಅಭಿನಂದನಾರ್ಹ. ಪತ್ತೇದಾರಿ ಕಾದಂಬರಿಯೂ ಪರಿವರ್ತಿತ ರೂಪ ಪಡೆಯಬಹುದು ಎಂದು ಕುಡ್ಪಲ್ ಭೂತ ತೋರಿಸಿಕೊಡುತ್ತದೆ ಎಂದು ತಿಳಿಸಿದರು.
ಕನ್ನಡ ಪ್ರಾಧ್ಯಾಪಕರಾಗಿದ್ದ ಕಾರಣ ಸಾಹಿತ್ಯ ಪಾಠ ಮಾಡಿದವರು ಹಾಗೂ ಸಾಹಿತಿಗಳ ಒಡನಾಟದಲ್ಲಿದ್ದವರು ಕೆ.ಮುಕುಂದನ್. ಹೀಗಾಗಿಯೇ ಎಲ್ಲ ಸೂಕ್ಷ್ಮ ವಿಚಾರಗಳನ್ನು ತಮ್ಮ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ ಎಂದು ರಾಮೇಗೌಡ ಶ್ಲಾಘಿಸಿದರು.