ಟಾಯ್ಲೆಟ್‌ಗಳೆಂದರೆ ಮೂಗು ಮುರಿಯುವವರು ಇಲ್ಲಿಗೆ ಭೇಟಿ ನೀಡಿ...

Update: 2017-11-20 11:26 GMT

ಅಗತ್ಯವಿದ್ದಾಗ ಟಾಯ್ಲೆಟ್‌ಗಳನ್ನು ಬಳಸುವವರು ಬಳಿಕ ಆ ಶಬ್ದವನ್ನು ಕೇಳಿದರೇ ಮೂಗು ಮುರಿಯುತ್ತಾರೆ. ಟಾಯ್ಲೆಟ್‌ಗಳೆಂದರೆ ಕೊಳಕಲ್ಲ ಎಂದು ಬಿಂಬಿಸುವ ಮ್ಯೂಝಿಯಂ ದಿಲ್ಲಿಯಲ್ಲಿದ್ದು, ಪ್ರತಿದಿನ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಭಾರತದಲ್ಲಿ ಶೌಚಾಲಯಗಳಿಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕಲು ಈ ಮ್ಯೂಝಿಯಂ ಶ್ರಮಿಸುತ್ತಿದೆ.

 ಫ್ರಾನ್ಸ್‌ನ ದೊರೆ 14ನೇ ಲೂಯಿಸ್ ಬಳಸುತ್ತಿದ್ದ, ಬಿಲ್ಟ್ ಇನ್ ಕಮೋಡ್ ಹೊಂದಿದ್ದ ಕಟ್ಟಿಗೆಯ ಸಿಂಹಾಸನದ ಪ್ರತಿಕೃತಿಯು ಇಲ್ಲಿಯ ಪ್ರಮುಖ ಆಕರ್ಷಣೆ ಯಾಗಿದೆ. ಮಲಬದ್ಧತೆಯಿಂದ ಬಳಲುತ್ತಿದ್ದ ಈ ದೊರೆ ಈ ಸಿಂಹಾಸನದಲ್ಲಿ ಕುಳಿತುಕೊಂಡು ಶೌಚ ಮಾಡುತ್ತಲೇ ದರ್ಬಾರ್ ನಡೆಸುತ್ತಿದ್ದ ಎನ್ನಲಾಗಿದೆ.

ಇಲ್ಲಿರುವ ಶತಮಾನಗಳಷ್ಟು ಹಳೆಯದಾದ ಕಮೋಡಗಳು, ಚೇಂಬರ್ ಪಾಟ್‌ಗಳು ಮತ್ತು ಬಿಡೆಟ್‌ಗಳನ್ನು ಇಲ್ಲಿಗೆ ಭೇಟಿ ನೀಡುವವರು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಸೆಕೆಂಡ್‌ಗಳಲ್ಲಿ ಮಾನವ ಮಲವನ್ನು ಬೂದಿಯನ್ನಾಗಿಸುವ 21ನೇ ಶತಮಾನದ ಯಂತ್ರವೊಂದನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಇದೊಂದು ವಿಲಕ್ಷಣ ಮ್ಯೂಸಿಯಂ ಆಗಿದೆ. ಬಹುಶಃ ವಿಶ್ವದಲ್ಲಿ ಇಂತಹ ಮ್ಯೂಝಿಯಂ ಇದೊಂದೇ ಆಗಿರಬಹುದು ಎನ್ನುತ್ತಾರೆ ಮೂಝಿಯಂ ಮತ್ತು ಲಾಭರಹಿತ ನೈಮರ್ಲ್ಯ ಸಂಸ್ಥೆ ಸುಲಭ್ ಇಂಟರ್‌ನ್ಯಾಷನಲ್‌ನ ಸ್ಥಾಪಕ ಬಿಂದೇಶ್ವರ ಪಾಠಕ್.

ನೈರ್ಮಲ್ಯ ಮತ್ತು ಟಾಯ್ಲೆಟ್‌ಗಳ ಕುರಿತು ಆರೋಗ್ಯಪೂರ್ಣ ಸಂವಾದವನ್ನು ಹುಟ್ಟುಹಾಕುವುದು ಈ ಮ್ಯೂಝಿಯಂ ಆರಂಭದ ಉದ್ದೇಶವಾಗಿದೆ. ಟಾಯ್ಲೆಟ್ ಕೊಳಕು ಶಬ್ದವಲ್ಲ ಎಂದು ಜನರಿಗೆ ಮನದಟ್ಟು ಮಾಡಲು ಪಾಠಕ್ ಬಯಸಿದ್ದರು.

2014ರಲ್ಲಿ ಟೈಮ್ ಮ್ಯಾಗಝಿನ್ ಇದನ್ನು ವಿಶ್ವದ 10 ಅತ್ಯಂತ ವಿಲಕ್ಷಣ ಮ್ಯೂಝಿಯಮ್‌ಗಳಲ್ಲೊಂದು ಎಂದು ಹೆಸರಿಸಿದ ಬಳಿಕ ಈ ಮ್ಯೂಝಿಯಂ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿದೆ ಎನ್ನುತ್ತಾರೆ ಭಾರತದ ‘ಟಾಯ್ಲೆಟ್ ಗುರು’ ಎಂದೇ ಹೆಸರಾಗಿರುವ 74ರ ಹರೆಯದ ಪಾಠಕ್.

ಮ್ಯೂಝಿಯಮ್‌ನ ಗೋಡೆಗಳಿಗೆ ಟಾಯ್ಲೆಟ್ ರೂಮ್ ಜೋಕ್‌ಗಳನ್ನು, ವಿಕ್ಟೋರಿಯನ್ ಯುಗದ ಐರೋಪ್ಯ ಮಹಿಳೆಯೋರ್ವಳು ಮಾನವ ಮಲವಿದ್ದ ಬುಟ್ಟಿಯನ್ನು ಹೊತ್ತೊಯ್ಯುತ್ತಿರುವ ಚಿತ್ರವೊಂದನ್ನು ಅಳವಡಿಸಲಾಗಿದೆ.

ಇಲ್ಲಿರುವ ಕುಶನ್ ಅಳವಡಿಸಿರುವ ಟಾಯ್ಲೆಟ್ ವೀಕ್ಷಕರ ಕಣ್ಣುಗಳನ್ನು ಸೆಳೆಯುತ್ತದೆ. ಇವುಗಳನ್ನು ಯುರೋಪಿನ ಜೂಜುಕೇಂದ್ರಗಳಲ್ಲಿ ಬಳಸುತ್ತಿದ್ದರು. ಜೂಜುಕೋರರು ಒಂದು ನಿಮಿಷವೂ ತಮ್ಮ ಆಸನಗಳನ್ನು ಬಿಟ್ಟೇಳದೆ ತಾವು ಒಡ್ಡಿದ ಪಣದ ಮೇಲೆ ನಿಗಾಯಿರಿಸಲು ಈ ಕುಷನ್ ಟಾಯ್ಲೆಟ್‌ಗಳು ನೆರವಾಗುತ್ತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News