ಹೊಟೇಲ್ ಮಾಲಕನಿಗೆ ಲಾಠಿ ಏಟು ಪ್ರಕರಣ: ಎಸಿಪಿ ವಿರುದ್ಧ ವರದಿ
ಬೆಂಗಳೂರು, ನ.20: ಆರ್‌ಟಿ ನಗರದ ದಿಣ್ಣೂರು ಮುಖ್ಯರಸ್ತೆಯ ಹೊಟೇಲ್‌ಗೆ ನುಗ್ಗಿ ಮಾಲಕನಿಗೆ ಎಸಿಪಿ ಮಂಜುನಾಥ್ ಬಾಬು ಅವರು ಲಾಠಿಯಿಂದ ಹೊಡೆದಿರುವುದು ತಪ್ಪುಎಂದು ಪ್ರಕರಣದ ತನಿಖೆ ನಡೆಸಿರುವ ಉತ್ತರ ವಲಯ ಡಿಸಿಪಿ ಚೇತನ್ ಸಿಂಗ್ ರಾತೋರ್ ಅವರು ವರದಿ ನೀಡಿದ್ದಾರೆ ಎನ್ನಲಾಗಿದೆ.
ಹೊಟೇಲ್ ಮಾಲಕ ರಾಜೀವ್ ಶೆಟ್ಟಿಗೆ ಲಾಠಿಯಿಂದ ವಿನಾಕಾರಣ ಹೊಡೆದು ತಪ್ಪು ಮಾಡಿರುವ ಎಸಿಪಿ ಮಂಜುನಾಥ್ ಬಾಬು ವಿರುದ್ಧ ಕ್ರಮ ಕೈಗೊಳ್ಳುವಂತೆ ಚೇತನ್ ಸಿಂಗ್ ಅವರು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಅವರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ: ನ.9ರಂದು ಆರ್.ಟಿ.ನಗರದ ದಿಣ್ಣೂರು ರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಂ ತಡರಾತ್ರಿ ರಾತ್ರಿ 11-55ರವರೆಗೆ ತೆರೆದಿದ್ದರಿಂದ ಮಾಲಕ ರಾಜೀವ್ ಶೆಟ್ಟಿಗೆ ಎಸಿಪಿ ಮಂಜುನಾಥ್ ಲಾಠಿಯಿಂದ ಹೊಡೆದಿದ್ದರು. ಎಸಿಪಿ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟಗೊಳ್ಳುತ್ತಲೇ ಎಚ್ಚರಗೊಂಡ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಅವರು ತನಿಖೆಗೆ ಆದೇಶಿಸಿದ್ದರು.