ಬಾಡಿಗೆಗೆ ಕೊಠಡಿ ಪಡೆದು 21 ಎಲ್‌ಇಡಿ ಟಿವಿ ಕಳವು ಪ್ರಕರಣ: ಆರೋಪಿಯ ಬಂಧನ

Update: 2017-11-20 13:50 GMT

ಬೆಂಗಳೂರು, ನ.20:ಲಾಡ್ಜ್‌ಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ಬಾಡಿಗೆಗೆ ಕೊಠಡಿ ಪಡೆದು 21 ಎಲ್‌ಇಡಿ ಟಿವಿಗಳನ್ನು ಕಳವು ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಸಂಜಯನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಪೀಣ್ಯ ದಾಸರಹಳ್ಳಿಯ ವಾಸುದೇವ(34) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಅಂಗಡಿಯ ಮಾಲಕರೊಬ್ಬರಿಗೆ ಆರೋಪಿ ವಾಸುದೇವ ಆರು ಟಿವಿಗಳನ್ನು ಮಾರಾಟ ಮಾಡಿ ಹೋಗಿದಲ್ಲದೆ, ಈ ದಿನ ಮತ್ತೆ ಟಿವಿಗಳನ್ನು ತಂದು ಕೊಡುತ್ತೇನೆಂದು ಹೇಳಿ ಹೋಗಿದ್ದ. ಆದರೆ, ಈ ವಸ್ತುಗಳು ಆತ ಕಳವು ಮಾಡಿಕೊಂಡು ಬಂದು ಮಾರಾಟ ಮಾಡುತ್ತಿರಬಹುದೆಂಬ ಅನುಮಾನದಿಂದ ದೂರು ನೀಡಲಾಗಿತ್ತು. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಸಂಜಯನಗರ ಪೊಲೀಸರು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೊಡುಗು ಜಿಲ್ಲೆಯ ಮಡಕೇರಿ ತಾಲೂಕಿನ ಚೇರಂಭಾಣೆ ನಿವಾಸಿಯಾಗಿರುವ ಆರೋಪಿ ವಾಸುದೇವ ವಿರುದ್ಧ ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆ ಸೇರಿ ನಾಲ್ಕು ಠಾಣೆಗಳಲ್ಲಿ ಮೊಕದ್ದಮೆ ದಾಖಲಾಗಿದೆ. ಈತನಿಂದ 21 ಎಲ್‌ಇಡಿ ಟಿವಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ತನ್ನ ಸಾಲದ ಹಣವನ್ನು ತೀರಿಸಲು ಹಾಗೂ ಪ್ರಕರಣಯೊಂದರ ವಕೀಲರಿಗೆ ಹಣ ನೀಡಲು ಕಳವು ಮಾಡುತ್ತಿದ್ದ. ಮಂಜುನಾಥ್ ಎಂಬ ನಕಲಿ ಚುನಾವಣಾ ಗುರುತಿನ ಚೀಟಿಗೆ ತನ್ನ ಪೋಟೊ ಅಂಟಿಸಿಕೊಂಡು, ಲಾಡ್ಜ್‌ಗಳಿಗೆ ಹೋಗಿ ನಕಲಿ ಮೊಬೈಲ್ ಸಂಖ್ಯೆ ನೀಡಿ ಬಾಡಿಗೆಗೆ ಕೊಠಡಿ ಪಡೆದುಕೊಂಡು ಅಲ್ಲಿ  ಅಳವಡಿಸಿದ್ದ ಟಿವಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News