ದೀಪಿಕಾ ಪಡುಕೋಣೆ, ಕುಟುಂಬಕ್ಕೆ ಭದ್ರತೆ ಒದಗಿಸಲು ಗೃಹ ಸಚಿವರ ಸೂಚನೆ

Update: 2017-11-20 14:02 GMT

ಬೆಂಗಳೂರು, ನ. 20: ಪದ್ಮಾವತಿ ಸಿನಿಮಾ ವಿವಾದದ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಕುಟುಂಬದ ಸದಸ್ಯರು ರಾಜ್ಯದಲ್ಲಿ ಇರುವ ಸಂದರ್ಭ ಸೂಕ್ತ ಭದ್ರತೆ ಒದಗಿಸುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.

ಸೋಮವಾರ ಪತ್ರ ಬರೆದಿರುವ ಸಚಿವರು, ದೀಪಿಕಾ ಅಭಿನಯಿಸಿರುವ ‘ಪದ್ಮಾವತಿ’ ಸಿನಿಮಾದ ಕುರಿತು ವಿವಾದ ಎದ್ದು, ರಜಪೂತ ಸಮುದಾಯ ಪ್ರತಿಭಟನೆಗೆ ಇಳಿದಿದೆ. ಕೆಲವರು ದೀಪಿಕಾರನ್ನು ಕೊಂದರೆ 10 ಕೋಟಿ ರೂ. ಬಹುಮಾನ ಕೊಡುವುದಾಗಿ ಹೇಳಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಇದು ಸ್ವಾತಂತ್ರದ ಹಕ್ಕನ್ನು ಹತ್ತಿಕ್ಕುವ ಮತ್ತು ಅಪರಾಧ ಚಟುವಟಿಕೆಗೆ ಪ್ರಚೋದನೆ ನೀಡುವ ಹೇಳಿಕೆಯಾಗಿದೆ. ಹಾಗಾಗಿ ದೀಪಿಕಾ ಹಾಗೂ ಅವರ ಕುಟುಂಬದ ಸದಸ್ಯರು ರಾಜ್ಯದಲ್ಲಿ ಇರುವ ಸಮಯದಲ್ಲಿ ಸೂಕ್ತ ರಕ್ಷಣೆ ಒದಗಿಸಿ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಲನಚಿತ್ರದಲ್ಲಿ ಇತಿಹಾಸವನ್ನು ತಿರುಚಿದ್ದರೆ ಅಥವಾ ರಜಪೂತ ಸಮುದಾಯಕ್ಕೆ ಅಪಮಾನ ಮಾಡಿದ್ದರೆ, ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಸೆನ್ಸಾರ್ ಮಂಡಳಿಗೆ ನಿರ್ದೇಶನ ನೀಡಬೇಕಾಗಿತ್ತು. ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆಗಳನ್ನು ಗಮನಿಸಿದರೆ, ಅವರ ಮನಸ್ಥಿತಿ ತಿಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News