ಪತ್ರಕರ್ತರು ಸುದ್ದಿ ಸೂಕ್ಷ್ಮತೆ ಹೊಂದಿರಬೇಕು: ವಿಶ್ವೇಶ್ವರ ಭಟ್

Update: 2017-11-20 15:53 GMT

ಬೆಂಗಳೂರು, ನ.20: ಪತ್ರಕರ್ತರು ಸಮಾಜದಲ್ಲಿರುವ ಹಲವು ವಿಷಯಗಳ ಕುರಿತು ಪೂರ್ವ ತಯಾರಿ ಹಾಗೂ ಸುದ್ದಿ ಸೂಕ್ಷ್ಮತೆ ಹೊಂದಿರಬೇಕು ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತಿಳಿಸಿದ್ದಾರೆ.

ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಗರದ ಪದ್ಮನಾಭನಗರದಲ್ಲಿರುವ ಪ್ರಾದೇಶಿಕ ಸಹಕಾರ ಆಡಳಿತ ನಿರ್ವಹಣಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವೀಧರರಿಗೆ ಹಮ್ಮಿಕೊಂಡಿದ್ದ ವೃತ್ತಿ ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಮ್ಮ ಪ್ರತಿಭೆಯ ಬಗ್ಗೆ ತಮಗೇ ನಂಬಿಕೆ ಇಲ್ಲದವರು ಪತ್ರಿಕೋದ್ಯಮ ಪ್ರವೇಶಿಸಬಾರದು. ಮೊದಲಿಗೆ ಯುವ ಪತ್ರಕರ್ತರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯನ್ನು ಇಡಬೇಕು. ಉತ್ತಮ ಸಂವಹನ ಕೌಶಲ್ಯ, ಭಾಷಾ ಶುದ್ಧಿಯ ಮೇಲೆ ಹಿಡಿತ ಸೇರಿದಂತೆ ತಮ್ಮ ಪ್ರತಿಭೆಯನ್ನು ತಾವು ಪ್ರದರ್ಶಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸುದ್ದಿ ಬರೆಯುವಾಗ ಸರಳ ಪದಗಳು ಇದ್ದಲ್ಲಿ ಓದುಗ ಸರಳ ರೀತಿಯಲ್ಲಿ ಸುದ್ದಿಯನ್ನು ಅರ್ಥೈಸಿಕೊಳ್ಳಬಲ್ಲ. ಬರವಣಿಗೆಯಲ್ಲಿ ಕಠಿಣ ಪದ ಬಳಕೆ ಬೇಡ ಎಂದ ಅವರು, ಭಾಷೆಯ ಬಗ್ಗೆ ಪ್ರೀತಿಯಿಲ್ಲದಿದ್ದಲ್ಲಿ ಪತ್ರಕರ್ತರಾಗಲು ಸಾಧ್ಯವಿಲ್ಲ. ಕನ್ನಡ ಭಾಷೆಯ ಮೇಲೆ ಸರಾಗ ಹಿಡಿತದ ಜತೆಗೆ ಇತರೆ ಭಾಷೆಗಳಲ್ಲಿ ಸಂವಹನ ಮಾಡಬಲ್ಲ ಸಾಮರ್ಥ್ಯವನ್ನು ಯುವ ಪತ್ರಕರ್ತರು ಹೊಂದಬೇಕು ಎಂದು ಅವರು ಕರೆ ನೀಡಿದರು.

ಪತ್ರಕರ್ತ ವಿದ್ಯಾರ್ಥಿಗಳು ಯಾವುದೇ ಪತ್ರಿಕೆಯನ್ನು ಗ್ರಂಥ ಓದುವ ರೀತಿಯಲ್ಲಿ ಓದಬೇಕು ಮತ್ತು ಟಿವಿ ವೀಕ್ಷಿಸುವಾಗ ಸಾಕ್ಷ್ಯಾ ಚಿತ್ರದ ರೀತಿಯಲ್ಲಿ ಅವಲೋಕಿಸಬೇಕು. ಪತ್ರಿಕೆಗಳಲ್ಲಿರುವ ಸುದ್ದಿಯನ್ನು ಕೇವಲ ಬಿಸಾಡಬಾರದು. ಅಲ್ಲಿರುವ ಪ್ರತಿ ಸುದ್ದಿಯ ಕುರಿತು ವಿಶ್ಲೇಷಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಈ ತರಬೇತಿ ಕಾರ್ಯಾಗಾರದಲ್ಲಿ ಅತ್ಯುತ್ತಮ ಶಿಬಿರಾರ್ಥಿಯೆಂದು ಆಯ್ಕೆಯಾಗುವ ಐದು ಮಂದಿ ಯುವ ಪತ್ರಕರ್ತರಿಗೆ ತಮ್ಮ ಪತ್ರಿಕೆಯಲ್ಲಿ ‘ಟ್ರೈನಿ ಪತ್ರಕರ್ತ’ ಎಂದು ನೇಮಕಾತಿ ಮಾಡಿಕೊಳ್ಳುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಸಹಕಾರ ಆಡಳಿತ ನಿರ್ವಹಣಾ ಸಂಸ್ಥೆಯ ನಿರ್ದೇಶಕ ವಸಂತ ನಾಯ್ಕೆ, ಪತ್ರಕರ್ತ ಯತಿರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಆರ್.ಮಮತಾ, ಸಹಾಯಕ ಆಡಳಿತಾಧಿಕಾರಿ ಎ.ಸಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News