ಉಳ್ಳವರು ಕಸಾಪ ಅಧ್ಯಕ್ಷರಾಗುತ್ತಿದ್ದಾರೆ: ಸಿದ್ದಲಿಂಗಯ್ಯ ಅಸಮಾಧಾನ

Update: 2017-11-20 16:01 GMT

ಬೆಂಗಳೂರು, ನ.20: ಮೂರು ಲಕ್ಷ ಮತದಾರರನ್ನು ಹೊಂದಿರುವ ಪರಿಷತ್ತಿನಲ್ಲಿ ಹಣ ಉಳ್ಳವರು ಅಧ್ಯಕ್ಷರಾಗುವ ಸಂಸ್ಕೃತಿ ನಿರ್ಮಾಣವಾಗಿದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಸಾಪ ಶತಮಾನೋತ್ಸವ ದತ್ತಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಸಾಹಿತ್ಯ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳಿದ್ದ ಕ್ಷೇತ್ರ. ಪರಿಷತ್ತಿಗೆ ಹಲವಾರು ಕನಸುಗಳಿವೆ. ಅವುಗಳನ್ನು ನನಸು ಮಾಡಲು ಈವರೆಗೂ ಸುಮಾರು 25 ಅಧ್ಯಕ್ಷರು ಸಂಸ್ಥೆು ಮುಂದಾಳತ್ವ ವಹಿಸಿಕೊಂಡಿದ್ದಾರೆ. 1977-78ರಲ್ಲಿ ನಡೆದ ಕೆಲ ಘಟನೆಗಳಿಂದಾಗಿ ಪರಿಷತ್ತು ಸರಕಾರದ ಆಡಳಿತಕ್ಕೆ ಒಳಪಟ್ಟಿತು. ಆ ವೇಳೆ ನಾನು ಅಧ್ಯಕ್ಷನಾದೆ. ಆಗ ಕಸಾಪ ಬಂಡಾಯ ಸಾಹಿತ್ಯವನ್ನೂ ಸೇರಿಸಬೇಕು ಎಂಬ ವಿಚಾರ ಕುರಿತು ಪರ ವಿರೋಧದ ಅಲೆ ಎದ್ದಿತ್ತು. ಈ ವೇಳೆ ಕಸಾಪದಲ್ಲಿ ನವ್ಯ, ನವೋದಯ, ಬಂಡಾಯ, ದಲಿತ, ಸ್ತ್ರೀವಾದ ಸೇರಿದಂತೆ ಎಲ್ಲ ತರಹದ ಸಾಹಿತ್ಯಕ್ಕೂ ಅವಕಾಶ ಇದೆ ಎಂದು ಎಲ್ಲರನ್ನೂ ಒಗ್ಗೂಡಿಸಿದೆ. ಆ ಸಂದರ್ಭದಲ್ಲಿ ಬಂಡಾಯ ಸಾಹಿತ್ಯ ಪರ ಧ್ವನಿ ಎತ್ತಿದ ಸಾಹಿತಿ ಈಗ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ ಎಂದು ವಿವರಿಸಿದರು.

ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ಪರಿಷತ್ತು ಅವುಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿಯೂ ಸಿಂಹಪಾಲು ವಹಿಸಿದೆ. ಇಂತಹ ಪರಿಷತ್ತಿನಲ್ಲಿ ನೀಡಲಾಗುವ ಪ್ರಶಸ್ತಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News