“ನಾನು ರೊಹಿಂಗ್ಯರನ್ನು ಸ್ವಾಗತಿಸುತ್ತೇನೆ”: ದೇಶಾದ್ಯಂತ 6,60,000 ಜನರ ಒಕ್ಕೊರಲ ಹೇಳಿಕೆ

Update: 2017-11-20 17:34 GMT

ಹೊಸದಿಲ್ಲಿ, ನ. 20: ಭಾರತದಲ್ಲಿ ಆಶ್ರಯ ಬಯಸಿದವರು ಹಾಗೂ ರೊಹಿಂಗ್ಯಾ ವಲಸಿಗರನ್ನು ಬೆಂಬಲಿಸುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಅಭಿಯಾನವನ್ನು ಭಾರತದಾದ್ಯಂತದ ಸುಮಾರು 660,000 ಜನರು ಬೆಂಬಲಿಸಿದ್ದಾರೆ ಹಾಗೂ ಭಾರತದಲ್ಲಿರುವ ಅಂದಾಜು 40,000 ರೊಹಿಂಗ್ಯಾ ಜನರನ್ನು ಸಾಮೂಹಿಕವಾಗಿ ಗಡಿಪಾರು ಮಾಡುವ ಪ್ರಸ್ತಾಪವನ್ನು ರದ್ದುಗೊಳಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಹೊಸದಿಲ್ಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಪುಣೆ ಹಾಗೂ ಮುಂಬೈಯಲ್ಲಿ ಸೋಮವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡರು ಹಾಗೂ ರೊಹಿಂಗ್ಯಾ ಜನರನ್ನು ಬಲವಂತವಾಗಿ ಮ್ಯಾನ್ಮಾರ್‌ಗೆ ಹಿಂದೆ ಕಳುಹಿಸಬೇಡಿ ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಳಾಸಕ್ಕೆ ಸಹಿ ಮಾಡಿದ ಪೋಸ್ಟ್ ಕಾರ್ಡ್ ಕಳುಹಿಸಿದರು.

     ರೊಹಿಂಗ್ಯ ಜನರು ಮ್ಯಾನ್ಮಾರ್‌ನಲ್ಲಿ ಕಿರುಕುಳಕ್ಕೆ ಒಳಗಾಗಿ ನಿರಂತರ ಪಲಾಯನ ಮಾಡುತ್ತಿದ್ದಾರೆ. ಜನಾಂಗೀಯ ಶುದ್ದೀಕರಣದ ಹಿನ್ನೆಲೆಯಲ್ಲಿ ದೌರ್ಜನ್ಯ ಎದುರಿಸಿ ವಲಸೆ ಬಂದಿರುವ ರೊಹಿಂಗ್ಯ ಜನರನ್ನು ಬಲವಂತವಾಗಿ ಮ್ಯಾನ್ಮಾರ್‌ಗೆ ಗಡಿ ಪಾರು ಮಾಡುವುದು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಭಾರತ ತನ್ನ ಭಾದ್ಯತೆ ಉಲ್ಲಂಘಿಸಿದಂತಾಗುತ್ತದೆ. ಮಾತ್ರವಲ್ಲ, ಕಿರುಕುಳದಿಂದ ತಪ್ಪಿಸಿಕೊಂಡು ಪಲಾಯನ ಮಾಡಿದವರಿಗೆ ಬೆಂಬಲ ನೀಡುವ ಭಾರತದ ಚರಿತ್ರೆಗೆ ಕಳಂಕ ತಂದಂತಾಗುತ್ತದೆ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ಹೇಳಿದ್ದಾರೆ.

  ವಲಸಿಗರನ್ನು ರಕ್ಷಿಸುತ್ತೇವೆ ಎಂದು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ತನ್ನ ನಿಲುವನ್ನು ಅಭಿವ್ಯಕ್ತಿಸಿದೆ. ಅಲ್ಲದೆ ಬಲವಂತದ ವಾಪಸಾತಿ ನಿಯಮವನ್ನು ದುರ್ಬಲಗೊಳಿಸುವುದನ್ನು ತಡೆಹಿಡಿಯುವಂತೆ ಇತರ ದೇಶಗಳನ್ನು ಆಗ್ರಹಿಸಿದೆ. ಆದರೆ, ಇಲ್ಲಿ ಸರಕಾರ ರೊಹಿಂಗ್ಯ ಜನರನ್ನು ಬಲವಂತವಾಗಿ ಮ್ಯಾನ್ಮಾರ್‌ಗೆ ಕಳುಹಿಸಲು ಕಠಿಣ ಕ್ರಮ ತೆಗೆದುಕೊಂಡಿದೆ ಎಂದು ಆಕಾರ್ ಪಟೇಲ್ ಹೇಳಿದರು.

ರೊಹಿಂಗ್ಯ ವಲಸಿಗರ ಬಗ್ಗೆ ಭಾರತ ಯಾಕೆ ಕಾಳಜಿ ವಹಿಸಬೇಕು ಎಂಬ ಬಗ್ಗೆ ಮಾತನಾಡಿದ ಇತಿಹಾಸಕಾರ ಹಾಗೂ ಲೇಖಕ ರಾಮಚಂದ್ರ ಗುಹಾ, ವಿವಿಧ ಧರ್ಮಗಳ ವಲಸಿಗರಿಗೆ ಆಶ್ರಯ ನೀಡಿದ ಪರಂಪರೆ ಭಾರತಕ್ಕಿದೆ. ನಮ್ಮ ಸಂಪ್ರದಾಯ ರೊಹಿಂಗ್ಯಾ ಜನರಿಗೆ ನೆರವು ನೀಡುವುದನ್ನು ಒತ್ತಾಯಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News