ಕಾಲೇಜಿನ ವಿರುದ್ಧ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ
ಬೆಂಗಳೂರು, ನ.21: ವಿದ್ಯಾರ್ಥಿನಿಯೊಬ್ಬರು ಶುಲ್ಕ ಪಾವತಿ ಮಾಡಿಲ್ಲ ಎಂದು ಕಾಲೇಜಿನಿಂದ ಹೊರ ಹಾಕಿರುವುದನ್ನು ಖಂಡಿಸಿ ಎಸ್‌ಎಫ್‌ಐ ಕಾರ್ಯಕರ್ತರು ಧರಣಿ ನಡೆಸಿ, ಕಾಲೇಜು ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಿದರು.
ಮಂಗಳವಾರ ನಗರದ ಆನಂದರಾವ್ ವೃತ್ತ ಸಮೀಪದ ಜಗದ್ಗುರು ರೇಣುಕಾಚಾರ್ಯ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯದ ಮುಂಭಾಗ ಎಸ್‌ಎಫ್‌ಐ ಕಾರ್ಯಕರ್ತರು ಧರಣಿನಡೆಸಿದರು.
ಈ ವೇಳೆ ಧರಣಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಜಿ.ಎಚ್.ಪಲ್ಲವಿ ವಿದ್ಯಾರ್ಥಿನಿಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ನ.20ರಂದು ಕಾಲೇಜಿನಿಂದ ಹೊರಹಾಕಲಾಗಿದೆ ಎಂದು ಆರೋಪಿಸಿದರು.
ಬಡ ಕುಟುಂಬದಿಂದ ಬಂದಿರುವ ಪಲ್ಲವಿಗೆ ಈ ಸಂಸ್ಥೆಯು ದ್ವಿತೀಯ ಪಿಯು ಎರಡನೆ ವರ್ಷಕ್ಕೆ 33 ಸಾವಿರ ರೂ. ಶುಲ್ಕ ನಿಗದಿ ಮಾಡಿದೆ. ಅಲ್ಲದೆ, ಪೋಷಕರು 17 ಸಾವಿರ ರೂ. ಶುಲ್ಕ ನೀಡಿ ಉಳಿದ ಹಣ ಕಟ್ಟಲು ಕಷ್ಟವೆನಿಸುತ್ತದೆ. ಹಾಗಾಗಿ ಶುಲ್ಕ ರಿಯಾಯಿತಿಯನ್ನು ನೀಡಬೇಕೆಂದು ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಆದರೆ, ಕನಿಷ್ಠ ಇವರೊಡನೆ ಮಾತನಾಡಲು ಕಾಲೇಜು ಆಡಳಿತ ಮಂಡಳಿ ಮುಂದಾಗದೆ, ದಿಢೀರ್ ಕಾಲೇಜಿನಿಂದ ಹೊರ ಹಾಕಿದ್ದು, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ದೂರಿದರು.
ಸರಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿರುವುದು ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಪೋಷಕರನ್ನು ವಂಚಿಸುವ ಕೆಲಸ ನಡೆದಿದೆ. ವಿದ್ಯಾರ್ಥಿಗಳಿಂದ ಪಡೆದಿರುವ ಹೆಚ್ಚುವರಿ ಹಣ ವಾಪಸ್ ನೀಡಬೇಕು. ಜತೆಗೆ ಪಲ್ಲವಿಗೆ ನ್ಯಾಯ ಒದಗಿಸಬೇಕೆಂದು ಗುರುರಾಜ ದೇಸಾಯಿ ಒತ್ತಾಯಿಸಿದರು.
ಧರಣಿಯಲ್ಲಿ ಪೋಷಕರ ಸಂಘಟನೆಯ ನರಸಿಂಹ ಮೂರ್ತಿ, ಹುಚ್ಚೇಗೌಡ, ಎಸ್‌ಎಫ್‌ಐ ಮುಖಂಡರಾದ ಎಂ.ಮಹೇಶ್, ಸಿ.ಅಮರೇಶ್, ವೇಗಾನಂದ ಸೇರಿ ಪ್ರಮುಖರಿದ್ದರು.