ವಿಧಾನಸಭೆಯ ಹಿರಿಯ ಅಧಿಕಾರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಬೆಂಗಳೂರು, ನ.21: ವಿಧಾನಸಭೆಯ ಹಿರಿಯ ಅಧಿಕಾರಿಯೊಬ್ಬ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ವಿಧಾನಸಭೆಯ ಅಧಿಕಾರಿ ಮೂರ್ತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ಥ ಮಹಿಳಾ ಅಧಿಕಾರಿ ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ದೂರು ನೀಡಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.
ಮೂರ್ತಿ ಅವರ ಕಿರುಕುಳದ ಬಗ್ಗೆ ಒಂದು ತಿಂಗಳ ಹಿಂದೆಯೇ ಹಿರಿಯ ಅಧಿಕಾರಿಗಳಿಗೆ ಹಾಗೂ ಕಾನೂನು ಸಚಿವ ಜಯಚಂದ್ರ ಅವರಿಗೂ ದೂರು ನೀಡಿದ್ದೆ. ಸಚಿವರು ಕಾರ್ಯದರ್ಶಿಯನ್ನು ಕರೆದು ಎಚ್ಚರಿಕೆ ನೀಡಿದ್ದರು. ಆದರೆ, ಸಚಿವರ ಎಚ್ಚರಿಕೆಯನ್ನು ಲೆಕ್ಕಿಸದೆ ಮೂರ್ತಿ ತನ್ನ ಚಾಳಿ ಮುಂದುವರೆಸಿದ್ದು, ನೊಂದ ನಾನು ಜಯಚಂದ್ರ ಅವರಿಗೆ ಪತ್ರದ ಮುಖಾಂತರ ದೂರು ನೀಡಿದ್ದೇನೆ ಎಂದು ದೂರಿನಲ್ಲಿ ತಮಗೆ ನೀಡಿರುವ ಕಿರುಕುಳದ ಮಾಹಿತಿ ಮಹಿಳೆ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮೂರ್ತಿ ಮೇಲೆ ಲೋಕಾಯುಕ್ತದಲ್ಲಿ ದೂರು ನೀಡಲಾಗಿದ್ದು, ಎರಡು ಬಾರಿ ನೋಟಿಸ್ ನೀಡಿದ್ದರೂ ಗೈರು ಹಾಜರಾಗಿದ್ದರು. ಅವರ ವಿರುದ್ಧ ಹಲವು ಮಹಿಳಾ ಅಧಿಕಾರಿಗಳು ಲೈಂಗಿಕ ಕಿರುಕುಳದ ಬಗ್ಗೆ ಸ್ಪೀಕರ್‌ಗೆ ಮೌಖಿಕ ದೂರು ನೀಡಿದ್ದರೂ ಸ್ಪೀಕರ್ ಕ್ರಮ ಕೈಗೊಂಡಿಲ್ಲ ಎನ್ನುವ ಮಾತು ಕೇಳಿ ಬಂದಿದೆ.