ಕೆಎಂಸಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್‌ಗೆ ಮನವಿ
ಬೆಂಗಳೂರು, ನ.21: ಖಾಸಗಿ ವೈದ್ಯರು ನ.13ರಿಂದ 18ರವರೆಗೆ ನಡೆಸಿದ್ದ ಪ್ರತಿಭಟನೆಯಿಂದಾಗಿ ರಾಜ್ಯದ ವಿವಿಧೆಡೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಒಟ್ಟು 51 ಜನ ಸಾವಿಗೀಡಾಗಿದ್ದಾರೆ. ಈ ಕುರಿತು ವಿಚಾರಣೆ ನಡೆಸುವಂತೆ ಕರ್ನಾಟಕ ವೈದ್ಯಕೀಯ ಮಂಡಳಿಗೆ(ಕೆಎಂಸಿ) ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಕೋರಲಾಗಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ಕೆಪಿಎಂಇ) ತಿದ್ದುಪಡಿ ಮಸೂದೆ ವಿರೋಧಿಸಿ ಖಾಸಗಿ ವೈದ್ಯರು ನಡೆಸಿದ್ದ ಪ್ರತಿಭಟನೆ ಪ್ರಶ್ನಿಸಿ ನೆಲಮಂಗಲದ ಡಿ.ವಿ.ಆದಿನಾರಾಯಣ ಶೆಟ್ಟಿ, ವಕೀಲ ಎನ್.ಪಿ.ಅಮೃತೇಶ್ ಹಾಗೂ ನಗರದ ಸರಸ್ವತಿಪುರಂ ನಿವಾಸಿ ಮಾಯಿಗೌಡ ಸಲ್ಲಿಸಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಾಯಿಗೌಡ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, ರೋಗಿಗಳ ಸಾವಿಗೆ ಸಂಬಂಧಿಸಿದಂತೆ ಕೆಎಂಸಿ ವಿಚಾರಣೆ ನಡೆಸಬೇಕು. ಇದರ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಕೋರಿ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಿದರು. ವಿವಿಧ ಸ್ಥಳಗಳಲ್ಲಿ ಸಾವನ್ನಪ್ಪಿರುವವರ ವಿವರವನ್ನೂ ಒದಗಿಸಿದರು.
ಡಾ.ಎಚ್.ಎನ್.ರವೀಂದ್ರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಹೈಕೋರ್ಟ್ ವಕೀಲ ಎಸ್.ನಟರಾಜ ಶರ್ಮಾ ಈಗಾಗಲೇ ಕೆಎಂಸಿಗೆ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ.
ಈ ಅರ್ಜಿಗಳನ್ನು ವಿವರವಾಗಿ ಆಲಿಸಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ವಿಚಾರಣೆಯನ್ನು 2 018ರ ಜನವರಿ 2ಕ್ಕೆ ಮುಂದೂಡಿದೆ.