ಆರೋಪಿಗಳಿಬ್ಬರನ್ನೂ ಬಿಡುಗಡೆಗೆ ಆದೇಶಿಸಿದ ಹೈಕೋರ್ಟ್

Update: 2017-11-21 16:21 GMT

ಬೆಂಗಳೂರು, ನ.21: ನ್ಯಾಷನಲ್ ಲಾ ಕಾಲೇಜಿನಲ್ಲಿ 2007ರಲ್ಲಿ ನಡೆದಿದ್ದ ವಿದ್ಯಾರ್ಥಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಿಗೆ 11 ವರ್ಷದ ಬಳಿಕ ಜೈಲಿನಿಂದ ಬಿಡುಗಡೆ ಭಾಗ್ಯ ದೊರಕಿದೆ.

ಆರೋಪಿಗಳ ಮೇಲ್ಮನವಿಯ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 10 ವರ್ಷದ ಸಜೆಯಾಗಿ ಪರಿವರ್ತಿಸಿ ಆದೇಶ ನೀಡಿದೆ.

ಈಗಾಗಲೇ 11 ವರ್ಷದ ಜೈಲು ಶಿಕ್ಷೆ ಅನುಭವಿಸಿರುವುದರಿಂದ ಆಪಾದಿತರಾದ ಶ್ರೀನಿವಾಸ್ ಮತ್ತು ಕಲ್ಲೇಶ್‌ಗೌಡರಿಗೆ ಬಿಡುಗಡೆ ದೊರೆತಿದೆ.
2007ರಲ್ಲಿ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಅಲಯೋಷ್ ಎಂಬವನನ್ನು ಶ್ರೀನಿವಾಸ್ ಮತ್ತು ಕಲ್ಲೇಶ್‌ಗೌಡ ಕೊಲೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಆಪಾದಿತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ನ್ಯಾಯಪೀಠ ಉದ್ದೇಶ ಪೂರ್ವಕವಾಗಿ ಹತ್ಯೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಜೀವಾವಧಿ ಶಿಕ್ಷೆಯನ್ನು 10 ವರ್ಷ ಜೈಲು ಶಿಕ್ಷೆಯಾಗಿ ಹಾಗೂ ತಲಾ 25 ಸಾವಿರ ರೂ. ದಂಡಕ್ಕೆ ಮಾರ್ಪಾಡಿಸಲಾಗಿದೆ ಎಂದು ಆದೇಶಿಸಿತು.

ನಾಗರಬಾವಿ ಕಲಾವತಿ ಕಲ್ಯಾಣ ಮಂಟಪದ ಬಳಿ ಪಾರ್ಟಿ ಮುಗಿಸಿ ಬಂದಿದ್ದ ಕಾನೂನು ವಿದ್ಯಾರ್ಥಿಗಳೊಂದಿಗೆ ಇಬ್ಬರಿಗೂ ಅನಿರೀಕ್ಷಿತ ಜಗಳ ನಡೆದಿತ್ತು- ಕಲ್ಲೇಶ್ ಹಾಗೂ ಶ್ರೀನಿವಾಸ್ ಚಾಕುವಿನಿಂದ ಅಲಯೋಷ್ ಮತ್ತು ಆತನ ಸ್ನೇಹಿತನಿಗೆ ಇರಿದು ಪರಾರಿಯಾಗಿದ್ದರು. ತೀರ್ವವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಅಲಯೋಷ್ ಮೃತಪಟ್ಟಿದ್ದರು. ನಂತರ ವಿದ್ಯಾರ್ಥಿಗಳ ಪ್ರತಿಭಟನೆ, ರಾಜಕೀಯ ಒತ್ತಡಗಳು ಬೆರೆತು ಈ ಪ್ರಕರಣ ರಾಜ್ಯದಲ್ಲಿ ಬಹಳ ಸದ್ದು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News