"ಸಾರಾಯಿ ನಿಷೇಧಕ್ಕೆ ಬಿಎಸ್‍ವೈ ಆಕ್ಷೇಪಿಸಿದ್ದರು"

Update: 2017-11-21 16:44 GMT

ಬೆಳಗಾವಿ, ನ.21: "ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಆಡಳಿತಾವಧಿಯಲ್ಲಿ ಸಾರಾಯಿ ನಿಷೇಧ ಜಾರಿಗೊಳಿಸಿದ ವೇಳೆ ಅಂದಿನ ಉಪಮುಖ್ಯಮಂತ್ರಿ ಯಡಿಯೂರಪ್ಪ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಲ್ಲೇಖಿಸಿದ್ದು, ವಿಧಾನಸಭೆಯಲ್ಲಿ ಭಾರೀ ಗದ್ದಲ-ಕೋಲಾಹಲಕ್ಕೆ ಸಾಕ್ಷಿಯಾಯಿತು. ಮಾತ್ರವಲ್ಲ, ಅರ್ಧದಿನದ ಕಲಾಪವನ್ನು ಬಲಿ ಪಡೆದ ಪ್ರಸಂಗವೂ ನಡೆಯಿತು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿಯವರಿಗೆ ಮಾನ-ಮಾರ್ಯಾದೆ ಇಲ್ಲ. ಸಾರಾಯಿ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಇವರು, ಇದೀಗ ಮದ್ಯಪಾನ ನಿಷೇಧಕ್ಕೆ ಆಗ್ರಹಿಸುತ್ತಿದ್ದಾರೆ. ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಸುಗಮ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರು ಜನ ವಿರೋಧಿ ಮತ್ತು ಅಭಿವೃದ್ಧಿಯ ವಿರೋಧಿಗಳು. ಸುಮ್ಮನೆ ಇಲ್ಲಿ ನಾಟಕ ಮಾಡುತ್ತಿದ್ದು, ಇವರಿಗೆ ಸಂಸ್ಕೃತಿ ಮತ್ತು ಸಂಸ್ಕಾರವೇ ಇಲ್ಲ. ಇವರು ಒಂದು ರೀತಿಯಲ್ಲಿ ಅನಾಗರಿಕರು. ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ಹಿಂದುಳಿಯಲು ಇವರೇ ಕಾರಣ ಎಂದು ಬಿಜೆಪಿಯ ಸದಸ್ಯರ ವಿರುದ್ಧ ಸಿಎಂ ತೀವ್ರ ವಾಗ್ದಾಳಿ ನಡೆಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಯಡಿಯೂರಪ್ಪ ಈ ಮನೆ ಸದಸ್ಯರಲ್ಲ. ಹೀಗಿರುವಾಗ ಅವರ ಹೆಸರು ಉಲ್ಲೇಖ ಸರಿಯಲ್ಲ. ಸಾರಾಯಿ ನಿಷೇಧ ಸಂಬಂಧ ಯಡಿಯೂರಪ್ಪ ಬಗ್ಗೆ ಸಿಎಂ ಆಡಿದ ಪದವನ್ನು ಕಡತದಿಂದ ತೆಗೆದುಹಾಕಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಸ್ಪೀಕರ್ ಪೀಠದ ಎದುರಿನ ಸದನದ ಬಾವಿಗೆ ಇಳಿದು ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ತಾನೂ ಅಂತಹ ಯಾವುದೇ ಪದವನ್ನು ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಕಡತದಿಂದ ಅಸಂಸದೀಯ ಪದವನ್ನು ತೆಗೆದು ಹಾಕಲು ಪಟ್ಟು ಹಿಡಿದಿದ್ದರಿಂದ ಸದನವನ್ನು ಮೂರು ಬಾರಿ ಮುಂದೂಡಲಾಯಿತು. ಆ ಬಳಿಕ ತನ್ನ ಕೊಠಡಿಯಲ್ಲಿ ಸದನದ ನಾಯಕರ ಸಭೆ ನಡೆಸಿದ ಸ್ಪೀಕರ್ ಕೋಳಿವಾಡ ಅವರು, ಸಂಧಾನ ನಡೆಸಿದ ಬಳಿಕ ಬಿಜೆಪಿ ಸದಸ್ಯರು ತಮ್ಮ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟರು.

ಯಾವುದೇ ರೀತಿಯ ಮಾನನಷ್ಟ ಉಂಟು ಮಾಡುವ, ಅಸಭ್ಯ ಅಥವಾ ಮರ್ಯಾದೆಗೆ ಧಕ್ಕೆ ತರುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಸಾಂದರ್ಭಿಕವಾಗಿ ಅವರು ಯಡಿಯೂರಪ್ಪ ಹೆಸರು ಬಳಸಿಕೊಂಡಿದ್ದು, ಅವರ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಲು ಸಾಧ್ಯವಿಲ್ಲ.
ಕೆ.ಬಿ.ಕೋಳಿವಾಡ, ಸ್ಪೀಕರ್


ಪ್ರತಿ ತಿಂಗಳು ಇಂತಿಷ್ಟೇ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕೆಂದು ಅಬಕಾರಿ ಇಲಾಖೆ ಯಾರಿಗೂ ಗುರಿ ನಿಗದಿಪಡಿಸಿಲ್ಲ. ಈ ಕುರಿತು ಸರಕಾರ ಯಾವುದೇ ಒತ್ತಡವೂ ಹೇರುತ್ತಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News