ಬಿಎಸ್‌ವೈ ಆಪ್ತ ವಿಚಾರಣೆಗೆ ಹಾಜರು

Update: 2017-11-21 17:26 GMT

ಬೆಂಗಳೂರು, ನ.21: ಕೆ.ಎಸ್.ವಿನಯ್ ಮೇಲೆ ಹಲ್ಲೆ ಮತ್ತು ಅಪಹರಣ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು.

ಮಂಗಳವಾರ ನಗರದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಕಟ್ಟಡದಲ್ಲಿರುವ ಮಲ್ಲೇಶ್ವರ ಉಪವಿಭಾಗದ ಎಸಿಪಿ ಎ.ಆರ್.ಬಡಿಗೇರ ಕಚೇರಿಗೆ ಹಾಜರಾದ ಸಂತೋಷ್, ಹಲ್ಲೆ ಮತ್ತು ಅಪಹರಣ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದ ಎಂದು ಮೂಲಗಳು ತಿಳಿಸಿವೆ.

ಮೊಬೈಲ್ ಕೊಡಲ್ಲ: ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳಸಿದ್ದ ಮೊಬೈಲ್, ಮೆಮೂರಿಕಾರ್ಡ್ ತನಿಖಾಧಿಕಾರಿಗಳ ವಶಕ್ಕೆ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿ ಕೋರಿದರು. ಆದರೆ ಸಂತೋಷ್, "ನನ್ನ ಬಳಿ ಯಾವುದೇ ಮೊಬೈಲ್ ಇಲ್ಲ. ಸುಮ್ಮನೇ ಇದೇ ವಿಷಯ ಪದೇ ಪದೇ ಕೇಳಬೇಡಿ" ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಜಾಮೀನು ರದ್ದು: ಪ್ರತೀ ಮಂಗಳವಾರ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಇಲ್ಲದಿದ್ದರೆ, ಜಾಮೀನು ರದ್ದು ಮಾಡುವುದಾಗಿ ನ್ಯಾಯಾಲಯ ಇತ್ತೀಚೆಗೆ ಹೇಳಿತ್ತು. ಹೀಗಾಗಿಯೇ ಸಂತೋಷ್ ವಿಚಾರಣೆಗೆ ಬಂದಿದ್ದಾನೆ. ಅಲ್ಲದೆ, ಕೆಲ ದಿನ ವಿಚಾರಣೆಗೆ ಹಾಜರಾಗಿರಲಿಲ್ಲ. ಅವರ ವರ್ತನೆಯನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೆವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಬೈಲ್ ನೋಡಿ, ದೋಷಾರೋಪ ಪಟ್ಟಿ?: ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್.ಆರ್.ಸಂತೋಷ್ ಬಳಿಯ ಮೊಬೈಲ್‌ಅನ್ನು ಜಪ್ತಿ ಮಾಡಿ ಅದರಲ್ಲಿಯ ಸತ್ಯಾಂಶ ನೋಡಿದ ಬಳಿಕ ದೋಷಾರೋಪ ಪಟ್ಟಿ ಸಿದ್ಧಪಡಿಸಿ, ಕೆಲವೇ ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News